ಮಾಸ್ಕೋ, ಫೆಬ್ರವರಿ 3 ,ಕ್ಯಾಲಿಫೋರ್ನಿಯಾದಲ್ಲಿ ಹೊಸದಾಗಿ ಕರೋನಾವೈರಸ್ ಸೋಂಕಿನ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಈ ಸೋಂಕಿಗೆ ಒಳಗಾದವರ ಸಂಖ್ಯೆ 11ಕ್ಕೆ ತಲುಪಿದೆ ಎಂದು ಆರೋಗ್ಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸ್ಯಾನ್ ಬೆನಿಟೊ ಕೌಂಟಿಯಲ್ಲಿ ವಿವಾಹಿತ ದಂಪತಿಯಲ್ಲಿ ಚೀನಾದ ವುಹಾನ್ ನಿಂದ ಪತಿ ಮರಳಿದ ನಂತರ ವೈರಸ್ ಇರುವುದು ಪತ್ತೆಯಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸೋಂಕಿನ ಕೇಂದ್ರಬಿಂದುವಾದ ವುಹಾನ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 360ಕ್ಕೆ ಏರಿಕೆಯಾಗಿದೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.
ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣಕ್ಕೆ ಸಾಂಟಾ ಕ್ಲಾರಾ ಕೌಂಟಿಯಲ್ಲಿ, ವುಹಾನ್ ಗೆ ಭೇಟಿ ನೀಡಿದ ಮಹಿಳೆಯೊಬ್ಬಳು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದನ್ನು ದೃಢಪಡಿಸಲಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಕಳೆದ ವಾರ ವುಹಾನ್‌ನಿಂದ ಹಿಂದಿರುಗಿದ ವ್ಯಕ್ತಿಯೊಬ್ಬ ವೈರಸ್‌ನಿಂದ ಬಳಲುತ್ತಿದ್ದುದು ದೃಢಪಟ್ಟಿತ್ತು. ಈಗ ಸಾಂತಾ ಕ್ಲಾರಾದಲ್ಲಿ ಕಂಡುಬಂದ ಎರಡನೇ ಪ್ರಕರಣ ಇದಾಗಿದೆ. "ವೈಯಕ್ತಿಕ ಮತ್ತು ವ್ಯವಹಾರ ಕಾರಣಗಳಿಗಾಗಿ ಚೀನಾಕ್ಕೆ ಪ್ರಯಾಣಿಸಿರುವುದರಿಂದ ನಮ್ಮಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ" ಎಂದು ಸಾಂಟಾ ಕ್ಲಾರಾ ಕೌಂಟಿಯ ಆರೋಗ್ಯ ಅಧಿಕಾರಿ ಸಾರಾ ಕೋಡಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಲಾ ಟೈಮ್ಸ್ ವರದಿ ಮಾಡಿದೆ. ನೋವಲ್ ಕರೋನಾವೈರಸ್ 2019 ರ ಡಿಸೆಂಬರ್ ಅಂತ್ಯದಲ್ಲಿ ಕಂಡುಬಂದಿದ್ದು, ಅಂದಿನಿಂದ ಇದು 20 ದೇಶಗಳಿಗೆ ಹರಡಿವೆ. ಹೆಚ್ಚಾಗಿ ಚೀನಾದಲ್ಲಿ 17,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಹೆಚ್ಚಿನ ರಾಷ್ಟ್ರಗಳು ತಮ್ಮ ನಾಗರಿಕರನ್ನು ಚೀನಾದಿಂದ ಸ್ಥಳಾಂತರಿಸಿದ್ದು, ವೈರಸ್ ಹರಡುವುದನ್ನು ತಡೆಯಲು ಚೀನಾ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿದೆ.