ತಿರುಪ್ಪೂರು, ಫೆ 20, ತಮಿಳುನಾಡಿನ ತಿರುಪ್ಪೂರು ಮತ್ತು ಸೇಲಂ ಜಿಲ್ಲೆಗಳಲ್ಲಿ ಗುರುವಾರ ಮುಂಜಾನೆ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನೇಪಾಳದ ಆರು ಯಾತ್ರಿಕರು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, 38 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಿರುಪ್ಪೂರು ಜಿಲ್ಲೆಯ ಅವಿನಾಶಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಬಸ್‌ಗೆ ವೇಗವಾಗಿ ಚಲಿಸುತ್ತಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ 20 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದಿಂದ ಬರುತ್ತಿದ್ದ ಟೈಲ್ಸ್ ತುಂಬಿದ ಟ್ರಕ್ ನ ಹಿಂಬದಿಯ ಟೈರ್ ಸಿಡಿದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಹಾರಿ ಎದುರಿನಿಂದ ಬರುತ್ತಿದ್ದ ಬೆಂಗಳೂರಿನಿಂದ ಎರ್ನಾಕುಲಂಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.
ಬಸ್ ನಲ್ಲಿ ಒಟ್ಟು 48 ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಕುರಿತು ಪ್ರಧಾನಿ ನರೇಂದ್ರಮೋದಿ ದಿಗ್ಭ್ರಮೆ ವ್ಯಕ್ತಪಡಿಸಿ, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ ಸೇಲಂ ಜಿಲ್ಲೆಯ ಒಮಲೂರು ಬಳಿಯ ನಾರಿಪಲ್ಲಂನಲ್ಲಿ ಬುಧವಾರ ಮಧ್ಯರಾತ್ರಿ ಎರಡು ಓಮ್ನಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ನೇಪಾಳದ ಆರು ಪ್ರವಾಸಿಗರು ಮೃತಪಟ್ಟಿದ್ದು, ಇತರ 28 ಮಂದಿ ಗಾಯಗೊಂಡಿದ್ದಾರೆ. ಕಠ್ಮಂಡುವಿನಿಂದ 34 ಪ್ರವಾಸಿಗರ ತಂಡ ಕನ್ಯಾಕುಮಾರಿಗೆ ಭೇಟಿ ನೀಡಿದ ನಂತರ ಓಮ್ನಿ ಬಸ್‌ನಲ್ಲಿ ರಾಜಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೇಪಾಳ ಪ್ರವಾಸಿಗರು ರಾತ್ರಿಯಿಡೀ ದೇವಾಲಯದ ಹಾಲ್ ನಲ್ಲಿ ವಿಶ್ರಾಂತಿ ಪಡೆದು ಗುರುವಾರ ಬೆಳಿಗ್ಗೆ ಪ್ರಯಾಣ ಮುಂದುವರಿಸಲು ನಿರ್ಧರಿಸಿದ್ದರು. ನೇಪಾಳದ ಪ್ರವಾಸಿಗರಿದ್ದ ಓಮ್ನಿ ಬಸ್‌ನ ಚಾಲಕ ಮತ್ತೊಂದು ಓಮ್ನಿ ಬಸ್ ಲೇನ್‌ನಲ್ಲಿ ಸಮೀಪಿಸುತ್ತಿರುವುದನ್ನು ಗಮನಿಸದೆ ರಸ್ತೆಯ ಇನ್ನೊಂದು ಲೇನ್‌ಗೆ ವಾಹನವನ್ನು ತಿರುಗಿಸಿದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ ತಿರುವನಂತಪುರಂಗೆ ತೆರಳುತ್ತಿದ್ದ ಮತ್ತೊಂದು ಓಮ್ನಿ ಬಸ್ ಗೆ ನೇಪಾಳದ ಪ್ರವಾಸಿ ಓಮ್ನಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಹಿಳೆ ಸೇರಿದಂತೆ ಆರು ನೇಪಾಳ ಪ್ರಜೆಗಳು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.