ಬೆಂಗಳೂರು, ಫೆ.24, ಅರಣ್ಯ ಸಚಿವ ಆನಂದ್ ಸಿಂಗ್ ರಾಜ್ಯದ ಅರಣ್ಯ ಸಂಪತ್ತನ್ನು ಲೂಟಿ ಮಾಡಿ ರಾಜ್ಯ ಸರ್ಕಾರಕ್ಕೆ 20.55 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದು, ಈಗಾಗಲೇ ಈ ಸಂಬಂಧ ಏಳು ಪ್ರಕರಣಗಳಲ್ಲಿ ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. "ನಾನು ತಿನ್ನುವುದಿಲ್ಲ, ತಿನ್ನುವುವವರನ್ನು ಬಿಡುವುದಿಲ್ಲ" ಎಂದು ಭ್ರಷ್ಟಾಚಾರದ ವಿರುದ್ಧ ಹೇಳಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಹೇಳಿಕೆಯ ಮೇಲೆ ಬದ್ಧತೆ ಇದ್ದರೆ ತಕ್ಷಣ ಆನಂದ್ ಸಿಂಗ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ಆನಂದ್ ಸಿಂಗ್ ವಿರುದ್ಧ ಅರಣ್ಯ ಲೂಟಿ ಮಾಡಿದ ಆರೋಪ ಇದ್ದು, ಅವರಿಗೆ ಅರಣ್ಯ ಖಾತೆಯೇ ನೀಡಿರುವುದು "ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ". ಪ್ರಾಮಾಣಿಕತೆ, ಪಾರದರ್ಶಕತೆ, ಅಭಿವೃದ್ಧಿಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕತ್ವ ಈ ವಿಷಯದಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು. ದೃತರಾಷ್ಟ್ರನಂತೆ ಕಣ್ಣಿಗೆ ಬಟ್ಟೆ ಕಟ್ಟಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಸುತ್ತಮುತ್ತಲಿನವರನ್ನು ಮಾತ್ರ ಕಾಣುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಕ್ಷಣ ಸೂಚನೆ ನೀಡಿ ಸಿಂಗ್ ಅವರನ್ನು ಸಂಪುಟದಿಂದ ವಜಾಗೊಳಿಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಆನಂದ್ ಸಿಂಗ್ ವಿರುದ್ಧ ಒಟ್ಟು ಏಳು ಪ್ರಕರಣಗಳಲ್ಲಿ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅದರಲ್ಲಿ ಮೊದಲ ಪ್ರಕರಣದಲ್ಲಿ ಸಿಂಗ್ ಐದನೇ ಆರೋಪಿಯಾಗಿದ್ದು, ರಾಜ್ಯ ಸರ್ಕಾರಕ್ಕೆ 3,83,3,723 ರೂ. ನಷ್ಟ ಮಾಡಿದ್ದಾರೆ, ಎರಡನೇ ಪ್ರಕರಣದಲ್ಲಿ ಸಿಂಗ್ 2ನೇ ಆರೋಪಿಯಾಗಿದ್ದು, ಸರ್ಕಾರಕ್ಕೆ 1,22,3,534 ರೂ. ನಷ್ಟವೆಸಗಿದ್ದಾರೆ. ಮೂರನೇ ಪ್ರಕರಣದಲ್ಲಿ (ಸಿಸಿ-488-2016) ಸಿಂಗ್ ಅವರು ಎರಡನೇ ಆರೋಪಿಯಾಗಿದ್ದು, 1,34,55,668 ರೂ.ನಷ್ಟ ಮಾಡಿ ರಾಜ್ಯ ಸರ್ಕಾರಕ್ಕೆ ದ್ರೋಹವೆಸಗಿದ್ದಾರೆ ಎಂದು ದೋಷಾರೋಪಪಟ್ಟಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಉಗ್ರಪ್ಪ ದಾಖಲೆ ಸಮೇತ ವಿವರಿಸಿದರು.ನಾಲ್ಕನೇ ಪ್ರಕರಣದಲ್ಲಿ (ಸಿಸಿ 469/2016) ಆನಂದ್ ಸಿಂಗ್ ಆರನೇ ಆರೋಪಿಯಾಗಿದ್ದು, 72,42,658 ರೂ. ನಷ್ಟಮಾಡಿದ್ದಾರೆ. ಐದನೇ ಪ್ರಕರಣದಲ್ಲಿ (ಸಿಸಿ 467/2016) ಅರಣ್ಯ ಸಚಿವರು ನಾಲ್ಕನೇ ಆರೋಪಿಯಾಗಿದ್ದು, 8,68,65,425 ರೂ. ನಷ್ಟವೆಸಗಿದ್ದಾರೆ. ಆರನೇ ಪ್ರಕರಣದಲ್ಲಿ (ಸಿಸಿ/459/2016) ಸಿಂಗ್ ಅವರು ನಾಲ್ಕನೇ ಆರೋಪಿಯಾಗಿದ್ದು, 1,61,24,782 ರೂ. ನಷ್ಟ ಉಂಟು ಮಾಡಿ ಅರಣ್ಯ ಕಾಯ್ದೆ ಸೇರಿ ಹಲವು ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಏಳನೇ ಪ್ರಕರಣದಲ್ಲಿ (ಸಿಸಿ 551/2015) ಆನಂದ್ ಸಿಂಗ್ ಅವರು 3,13,66,926 ರೂ.ಹಣವನ್ನು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಎಲ್ಲಾ ಏಳು ಪ್ರಕರಣಗಳಲ್ಲಿ ಅವರು ಒಟ್ಟು 20,55,62,713 ರೂ.ವಂಚನೆ ಮಾಡಿರುವುದು ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿದೆ ಎಂದು ಉಗ್ರಪ್ಪ ವಿವರಿಸಿದರು.
ಇಂತಹವರಿಗೆ ಮಂತ್ರಿ ಖಾತೆ ಕೊಟ್ಟರೆ ರಾಜ್ಯದ ಅರಣ್ಯ ಸಂಪತ್ತು ಉಳಿಯಲು ಸಾಧ್ಯವೇ ? ಅವರ ವಿರುದ್ಧ ಇರುವ ಪ್ರಕರಣದಲ್ಲಿ ಅವರ ಇಲಾಖೆಯ ಅಧಿಕಾರಿಗಳಿಗೆ ಸಚಿವರ ವಿರುದ್ಧವೇ ಸಾಕ್ಷ್ಯ ನೀಡಲು ಸಾಧ್ಯವೇ ? ಒಬ್ಬ ಮಂತ್ರಿಯಾಗಿರುವಾಗ ಅವರ ವಿರುದ್ಧ ಸರ್ಕಾರಕ್ಕೆ ಕ್ರಮಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ ಉಗ್ರಪ್ಪ, ಕುರಿಗಳನ್ನು ಕಾಯಲು ತೋಳನಿಗೆ ವಹಿಸಿಕೊಟ್ಟಂತಾಗಿದೆ. ಆದ್ದರಿಂದ ರಾಜ್ಯದ ಅರಣ್ಯ ಸಂಪತ್ತನ್ನು ಉಳಿಸಬೇಕಾದುದು ಸರ್ಕಾರದ ಕರ್ತವ್ಯ. ತಕ್ಷಣ ಆನಂದ್ ಸಿಂಗ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಆನಂದ್ ಸಿಂಗ್ ಅವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಸ್ವತಃ ಅವರಿಗೇ ತಮ್ಮ ತಪ್ಪಿನ ಅರಿವಾಗಿದ್ದು, ತಮ್ಮ ಖಾತೆ ಬದಲಾಯಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ದೃತರಾಷ್ಟ್ರನಂತೆ ಕಣ್ಣಿಗೆ ಬಟ್ಟೆ ಕಟ್ಟಿ ನಡೆದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಇವೆಲ್ಲವನ್ನೂ ಚಾರ್ಚ್ಶೀಟ್ನಲ್ಲಿ ದಾಖಲಾಗಿರುವ ಅಂಶಗಳು. ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂಶಗಳಾಗಿದ್ದು, ಇವು ಎಫ್ಐಆರ್ನಲ್ಲಿರುವ ಅಂಶಗಳಲ್ಲ ಎಂದು ಸ್ಪಷ್ಟಪಡಿಸಿದರು.ಆನಂದ್ ಸಿಂಗ್ ಕಾಂಗ್ರೆಸ್ನಲ್ಲಿ ಶಾಸಕರಾಗಿ ಗೆದ್ದ ಎರಡೇ ದಿನದಲ್ಲಿ ಬಿಜೆಪಿ ಸೇರಲು ಪ್ರಯತ್ನಿಸಿದ್ದರು. ಇವುಗಳ ಬಗ್ಗೆ ಮಾಹಿತಿ ಇದ್ದುದರಿಂದಲೆ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಾಗಲೀ, ಸಮ್ಮಿಶ್ರ ಸರ್ಕಾರದಲ್ಲಾಗಲೀ ಮಂತ್ರಿ ಸ್ಥಾನ ನೀಡಿರಲಿಲ್ಲ. ಅಧಿಕಾರಕ್ಕಾಗಿ ಅವರು ಕಾಂಗ್ರೆಸ್ ಸೇರಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಆನಂದ್ ಸಿಂಗ್ ತಮ್ಮ ವಿರುದ್ಧದ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಾ, ಅತ್ಯಂತ ಕೆಟ್ಟವನಾಗಿದ್ದ, ದರೋಡೆಕೋರನಾಗಿದ್ದ ಮಹರ್ಷಿ ವಾಲ್ಮೀಕಿ ಅವಕಾಶ ಸಿಕ್ಕಿದಾಗ ಒಳ್ಳೆಯವನಾಗಿ ರಾಮಾಯಣ ಬರೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ವಾಲ್ಮೀಕಿ ವಂಶಸ್ಥನಾಗಿ ನಾನು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ವಾಲ್ಮೀಕಿ ವಂಶಸ್ಥರಿಗೆ ಮತ್ತು ರಾಮಾಯಣದ ಮೇಲೆ ನಂಬಿಕೆ ಇಟ್ಟವರಿಗೆ ಮಾಡಿದ ಅವಮಾನ ಎಂದು ಟೀಕಾಪ್ರಹಾರ ನಡೆಸಿದರು.ವಾಲ್ಮೀಕಿ ಎಂದೂ ಜಾತಿವಾದಿಯಾಗಿರಲಿಲ್ಲ. ದರೋಡೆಕೋರನೂ ಆಗಿರಲಿಲ್ಲ. ಅವರು ದಾರ್ಶನಿಕ, ಯೋಧ, ಕವಿ, ಸಂತ ಆಗಿದ್ದರು. ಬಿಜೆಪಿಯವರಿಗೆ ರಾಮಾಯಣದ ಮೇಲೆ, ಭಾರತೀಯ ಸಂಸ್ಕೃತಿಯ ಮೇಲೆ ನಂಬಿಕೆ ಇದ್ದರೆ ಅವರು ಆನಂದ್ ಸಿಂಗ್ ಹೇಳಿಕೆಯನ್ನು ಖಂಡಿಸಬೇಕು ಎಂದು ಒತ್ತಾಯಿಸಿದ ಉಗ್ರಪ್ಪ, ತಮ್ಮ ಅಪ್ರಬುದ್ಧ ಹೇಳಿಕೆಗೆ ಆನಂದ್ ಸಿಂಗ್ ವಾಲ್ಮೀಕಿ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ವಿಧಾನ ಪರಿಷತ್ನ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ತಾವು ಈ ಹಿಂದೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಂಡ ಅಧಿಕಾರಿಯನ್ನು ವರ್ಗಾಯಿಸಲಾಗಿದ್ದು, ರಾಜ್ಯ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಕೂಡ ಛೀಮಾರಿ ಹಾಕಿದ ಎಂದು ಉಗ್ರಪ್ಪ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ಗಳಾದ ರಾಮಚಂದ್ರಪ್ಪ, ರಮೇಶ್, ಮುಖಂಡರಾದ ಸಲೀಂ, ಪೀಟರ್ ಮತ್ತಿತರರು ಉಪಸ್ಥಿತರಿದ್ದರು.