ಮೇ 17ರಂದು ಬಳ್ಳಾರಿಯಿಂದ ಉತ್ತರಪ್ರದೇಶಕ್ಕೆ 2 ರೈಲು: ನಕುಲ್

ಬಳ್ಳಾರಿ, ಮೇ 14,ಬಳ್ಳಾರಿಯಿಂದ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ ಸೇರಿ ಅನ್ಯರಾಜ್ಯಗಳಿಗೆ ತೆರಳಲು 11300 ಜನ ವಲಸಿಗರು 'ಸೇವಾಸಿಂಧು' ಆ್ಯಪ್ ನಲ್ಲಿ ನೋಂದಾಯಿಸಿಕೊಂಡಿದ್ದು, ಮೇ 17ರಂದು ಹೊಸಪೇಟೆಯಿಂದ ಎರಡು ರೈಲುಗಳು ಉತ್ತರಪ್ರದೇಶಕ್ಕೆ ವಲಸಿಗರು ತೆರಳಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಕ್ರಿಯಾಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವಲಸಿಗರನ್ನು ಹೊಸಪೇಟೆ ರೈಲ್ವೆ ನಿಲ್ದಾಣದವರೆಗೆ ಕಳುಹಿಸುವುದಕ್ಕಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು, ವಲಸಿಗರು ಯಾವ್ಯಾವ ಸ್ಥಳದಲ್ಲಿರುವರೋ ಅಲ್ಲಿಂದಲೇ ಅವರನ್ನು ಕರೆದುಕೊಂಡು ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ರವಾನಿಸಲಾಗುವುದು ಎಂದರು.ಅಲ್ಲದೇ, 18 ಅಥವಾ 19ರಂದು ಬಿಹಾರಕ್ಕೆ ಬಳ್ಳಾರಿಯಿಂದ ರೈಲುಗಳು ಹೊರಡಲಿವೆ. ನಂತರ ಜಾರ್ಖಂಡ್ ರಾಜ್ಯಕ್ಕೂ ಕೂಡ ರೈಲುಗಳು ತೆರಳಲಿವೆ ಎಂದು ಅವರು ತಿಳಿಸಿದರು.
ಇನ್ನು, ಅನ್ಯರಾಜ್ಯದಿಂದ ಬಳ್ಳಾರಿ ಜಿಲ್ಲೆಗೆ ಬಂದ 1402 ವಲಸಿಗರಿಗೆ ಈಗಾಗಲೇ ವಿವಿಧೆಡೆ ಕ್ವಾರಂಟೈನ್‌ ನಲ್ಲಿಡಲಾಗಿದ್ದು, ಅವರನ್ನು ಹೈರಿಸ್ಕ್, ಮಿಡ್ಲ್ ರಿಸ್ಕ್ ಮತ್ತು ಲೋ ರಿಸ್ಕ್ ರಾಜ್ಯಗಳಿಂದ ಆಗಮಿಸಿದ ಆಧಾರದ ಮೇರೆಗೆ ಅವರನ್ನು ಕ್ವಾರಂಟೈನ್‌ನಲ್ಲಿಟ್ಟ 12ನೇ ದಿನದಿಂದಲೇ ಗಂಟಲು ಮತ್ತು ಮೂಗಿನ ದ್ರವ್ಯ ಸಂಗ್ರಹಿಸುವುದಕ್ಕೆ ಸೂಚನೆ ನೀಡಿದರು.ಈ ಕ್ವಾರಂಟೈನ್ ಕೇಂದ್ರಗಳ ಹತ್ತಿರ ಐಇಸಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಸಂಬಂಧಿಸಿದ ವಿವರವಾದ ವರದಿಯನ್ನು ಪ್ರತಿ ತಿಂಗಳು ಒದಗಿಸುವಂತೆ ಡಿಎಚ್‌ಒ ಜನಾರ್ಧನ್ ಅವರಿಗೆ ಸೂಚನೆ ನೀಡಿದರು. ಕೋವಿಡ್-19 ಸಂದರ್ಭದಲ್ಲಿ ಹರಪನಳ್ಳಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸಾ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿನ್ನೆಯಷ್ಟೇ ನಾನು ಆಸ್ಪತ್ರೆಗೆ ಭೇಟಿ ಮಾಡಿ ಪರಿಶೀಲಿಸಿದ್ದು, ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಇದುವರೆಗೆ 17 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು,ಅವುಗಳಲ್ಲಿ ಇದುವರೆಗೆ 12 ಜನರು ಸೊಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಸಂಜೆ ಹೊಸಪೇಟೆಯ ಒಬ್ಬರು ಬಿಡುಗಡೆಯಾಗಲಿದ್ದಾರೆ. ಇನ್ನೂ 4 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಶಸ್ತಚಿಕಿತ್ಸಕ ಬಸರೆಡ್ಡಿ ಮಾಹಿತಿ ನೀಡಿದರು.