ಬೆಂಗಳೂರು, ಫೆ 20, ಸ್ವಾಮೀಜಿ ವೇಷ ಧರಿಸಿ ಪೂಜೆ ಮಾಡುವ ನೆಪದಲ್ಲಿ ಮನೆಗಳಿಗೆ ಬಂದು, ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, 180 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಾಗರಾಜ್, ಲಕ್ಷ್ಮಣ್ ಬಂಧಿತ ಆರೋಪಿಗಳು.ಬಂಧಿತರು ಮೊದಲು ಸ್ವಾಮೀಜಿಗಳಂತೆ ವೇಷ ಧರಿಸಿ ಮನೆ ಪ್ರವೇಶ ಮಾಡಿ, ನಂತರ ನಿಮ್ಮ ಮನೆಯಲ್ಲಿ ದೋಷವಿದೆ ಎಂದು ಹೇಳುತ್ತಿದ್ದರು.
ದೋಷ ನಿವಾರಣೆಗೆ ಪೂಜೆ, ಹವನ ಮಾಡಿಸಬೇಕು ಎಂದು ಮನೆ ಮಾಲೀಕನನ್ನು ನಂಬಿಸುತ್ತಿದ್ದರು. ಆ ಪೂಜೆಗೆ ಮನೆಯಲ್ಲಿದ್ದ ಚಿನ್ನ, ಒಡವೆಗಳನ್ನೆಲ್ಲ ಇಡುವಂತೆ ತಿಳಿಸುತ್ತಿದ್ದರು. ಹಾಗೇ ಮಾತನಾಡುತ್ತ, ಮನೆಯ ಬಗ್ಗೆ ಸಂಪೂರ್ಣ ವಿವರಣೆಯನ್ನೂ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡ ದೊಡ್ಡ ಮನೆಗಳನ್ನೇ ಕೇಂದ್ರಿಕರಿಸುತ್ತಿದ್ದ ಇವರು ಮನೆಯಲ್ಲಿ ಚಿನ್ನದ ಒಡವೆಗಳು ಎಷ್ಟಿವೆ, ಎಲ್ಲಿಡುತ್ತಾರೆ ಎಂಬುದನ್ನೆಲ್ಲ ಕಲೆಹಾಕುತ್ತಿದ್ದರು. ನಂತರ ರಾತ್ರಿ ಸಮಯದಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸಂಪಿಂಗೆಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿ 180 ಗ್ರಾಂ.ಗೂ ಹೆಚ್ಚು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.