ಬೆಂಗಳೂರಿನಿಂದ ಹೊರಟಿದ್ದ ಕೇರಳ ಸಾರಿಗೆ ಬಸ್ಗೆ ಕಂಟೈನರ್ ಡಿಕ್ಕಿ: 19 ಸಾವು

ಕೋಯಮತ್ತೂರು, ಫೆ.20, ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಮತ್ತು ಕಂಟೈನರ್ ಲಾರಿಯ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿ 19 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ಬೆಳಗ್ಗಿನ ಜಾವ ಇಲ್ಲಿನ ಅವನಾಶಿ ಎಂಬಲ್ಲಿ ಸಂಭವಿಸಿದೆ.ದುರಂತದಲ್ಲಿ 19 ಮಂದಿ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪಾಲಕ್ಕಾಡ್ ಪೊಲೀಸ್ ವರಿಷ್ಠಾಧಿಕಾರಿ ಜಿ.ಶಿವವಿಕ್ರಮ್ ತಿಳಿಸಿದ್ದಾರೆ.ಬಸ್ನಲ್ಲಿ ಕೇರಳದ 42 ಮಂದಿ ಪ್ರಯಾಣಿಕರಿದ್ದರು. ಸಾವನ್ನಪ್ಪಿದವರ ಗುರುತು ಪತ್ತೆಯಾದ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ನಾವು ಆದಷ್ಟು ಬೇಗ ಪ್ರಕ್ರಿಯೆ ಮುಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಎರ್ನಾಕುಲಂ ಮೂಲದ ಕೆಎಸ್ಆರ್ಟಿಸಿ ಗರುಡಾ ವೋಲ್ವೊ ಏರ್ ಬಸ್ ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದು, ಅವಿನಾಶಿ-ಸೇಲಂ ಬೈಪಾಸ್ನಲ್ಲಿ ಕೇರಳ ನೋಂದಣಿಯ ಲಾರಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವನಾಶಿ ಪಟ್ಟಣ, ಕೋಯಮತ್ತೂರಿನಿಂದ 40 ಕಿ.ಮೀ.ದೂರದಲ್ಲಿದೆ.ವಿನೋದ್ (42), ಕ್ರಿಸ್ತೋಫರ್ (25), ನಿವಿನ್ ಬೇಬಿ ಮತ್ತು ತ್ರಿಶೂರಿನ ರಹೀಂ, ಪಾಲಕ್ಕಾಡ್ನ ಸೋನ ಸನ್ನಿ ಎಂಬವರ ಗುರುತು ಪತ್ತೆ ಹಚ್ಚಲಾಗಿದೆ. ಬಸ್ನ ಚಾಲಕ ಮತ್ತು ನಿರ್ವಾಹಕ ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ. ಉಳಿದವರ ಗುರುತು  ಪತ್ತೆ ಹಚ್ಚು ಕಾರ್ಯ ಪ್ರಗತಿಯಲ್ಲಿದೆ.ಗಾಯಾಳುಗಳನ್ನು ಅವಿನಾಶಿ ಆಸ್ಪತ್ರೆ ಮತ್ತು ಕೋಯಮತ್ತೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ನಲ್ಲಿದ್ದ 48 ಪ್ರಯಾಣಿಕರ ಪೈಕಿ  25 ಮಂದಿ ಎರ್ನಾಕುಲಂಗೆ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. 19 ಮಂದಿ ತ್ರಿಶೂರ್ಗೆ, ನಾಲ್ವರು ಪಾಲಕ್ಕಾಡ್ಗೆ ಟಿಕೆಟ್ ಬುಕ್ಕಿಂಗ್ ಮಾಡಿದ್ದರು.ಮೃತದೇಹಗಳನ್ನು ಅವಿನಾಶಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಇನ್ನು ಕೆಲವು ಮೃತದೇಹಗಳನ್ನು ತಿರಿಪುರ್ ಆಸ್ಪತ್ರೆಗೆ ಸಾಗಿಸಲಾಗಿದೆ.ಕೇರಳ ನೋಂದಣಿಯ ಕಂಟೈನರ್ ಲಾರಿಯ ಟೈಯರ್ ಸ್ಫೋಟಗೊಂಡು ಬಳಿಕ ಡಿವೈಡರ್ಗೆ ಡಿಕ್ಕಿ ಹೊಡೆದು, ಬಳಿಕ ಬಸ್ಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿ ಟೈಲ್ಸ್ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಲಾರಿಯು ಕೋಯಮತ್ತೂರು-ಸೇಲಂ ಹೆದ್ದಾರಿಯ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಕೇರಳ ಸಾರಿಗೆ ಸಚಿವ ಎ.ಕೆ.ಸಸೀಂದ್ರನ್ ತಿಳಿಸಿದ್ದಾರೆ.ಬುಧವಾರ ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಈ ಬಸ್ ಹೊರಟಿತ್ತು. ಇಂದು ಬೆಳಗ್ಗೆ 7 ಗಂಟೆಗೆ ಅದು ಎರ್ನಾಕುಲಂಗೆ ತಲುಪಬೇಕಿತ್ತು.