ಬೆಂಗಳೂರು, ಫೆ 6 : ಭವಿಷ್ಯದ ಸುಸ್ಥಿರ ನಗರಗಳ ನಿರ್ಮಾಣ, ತಂತ್ರಜ್ಞಾನ ಅಭಿವೃದ್ಧಿ, ಆಧುನಿಕ ನಗರಗಳ ಪರಿಕಲ್ಪನೆ ಕುರಿತ ವಸ್ತುಪ್ರದರ್ಶನವನ್ನೊಳಗೊಂಡ 16ನೇ ಆವೃತ್ತಿಯ " ಮುನಿಸಿಪಾಲಿಕಾ " ಸಮ್ಮೇಳನ ಫೆ. 12 ರಿಂದ 14ರವೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಹೊಸ ನಗರಗಳ ಯೋಜನೆ, ವಿನ್ಯಾಸ, ತಾಂತ್ರಿಕ ಪ್ರಗತಿ, ಬೆಳೆಯುತ್ತಿರುವ ನಗರಗಳಿಗ ಸ್ಮಾರ್ಟ್ ಹಾಗೂ ಸುಸ್ಥಿರ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ಸಮಾವೇಶ ಕುರಿತ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದು, ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಕಾಂತ್ ಮತ್ತಿತರ ಗಣ್ಯರು ಸಮ್ಮೇಳನದಲ್ಲಿ ಪ್ರಧಾನ ಭಾಷಣಮಾಡಲಿದ್ದು, ಲಂಡನ್ ಮೇಯರ್ ಅವರ ನಗರ ವಿನ್ಯಾಸ ಸಲಹೆಗಾರ, ನವ ಲಂಡನ್ ಮುಖ್ಯ ವಿನ್ಯಾಸಗಾರ ಪೀಟರ್ ಮುರ್ರೆ ಆಧುನಿಕ ನಗರ ಪರಿಕಲ್ಪನೆ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.
ರಾಜ್ಯದ 279 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಏಳು ಸ್ಮಾರ್ಟ್ ಸಿಟಿ, 27 ಅಮೃತ ನಗರಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೊಂದು ನಗರಕ್ಕೂ ಒಂದೊಂದು ರೀತಿಯಲ್ಲಿ ವಿನ್ಯಾಸ ರೂಪಿಸಲಾಗುತ್ತಿದೆ. ಪ್ರತಿಯೊಂದು ನಗರದಲ್ಲೂ ತನ್ನದೇ ಆದ ಸವಾಲುಗಳಿವೆ. ಪ್ರಮುಖವಾಗಿ ಬೆಂಗಳೂರು ನಗರದ ಸಂಚಾರಿ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಸಮಾವೇಶದಲ್ಲಿ ಪ್ರಮೂಖವಾಗಿ ಚರ್ಚೆ ನಡೆಯಲಿದೆ ಎಂದು ಅಂಜುಂ ಪರ್ವೇಜ್ ತಿಳಿಸಿದರು.
ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣಖಾಸು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಆದರೆ ಇವುಗಳನ್ನು ಜಾರಿಗೊಳಿಸುವುದು ಸುಲಭವಲ್ಲ. ಪ್ರತಿನಿತ್ಯ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಈ ಎಲ್ಲ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಸಮಾವೇಶದ ಉದ್ದೇಶ ಎಂದರು.
ಗುಡ್ ಗೌರ್ನೆನ್ಸ್ ಇಂಡಿಯಾ ಫೌಂಡೇಷನ್ ಮುಖ್ಯಸ್ಥ ವಿ. ಸುರೇಶ್ ಮಾತನಾಡಿ, ಜಾಗತಿಕವಾಗಿ ಗಮನ ಸೆಳೆದಿರುವ ಬೆಂಗಳೂರಿನಲ್ಲಿ ಈ ಬಾರಿ ಸಮ್ಮೇಳನ ನಡೆಸುತ್ತಿದ್ದು, ಜಗತ್ತಿನ ವಿವಿಧ ನಗರಗಳ ಆಧುನಿಕ ತಂತ್ರಜ್ಞಾನದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.,