ಶಿರಸಂಗಿಯ ಸಾಮ್ರಾಟ ಲಿಂಗರಾಜ ದೇಸಾಯಿಯವರ 165 ಜಯಂತ್ಯೋತ್ಸವ
165th birth anniversary of Shirasangi Lingaraj Desai
ಲೋಕದರ್ಶನ ವರದಿ
ಲೋಕೋಪಾಕಾರದ ಮಹತ್ವದ ಕಾರ್ಯವನ್ನು ಮಾಡಿರುವ ಶಿರಸಂಗಿಯ ಲಿಂಗರಾಜ ದೇಸಾಯಿ ಅವರು ಸಂಸ್ಥಾನದ ಅಧಿಪತಿಯಾಗಿದ್ದವರು. ಲಿಂಗಾಯತ ಸಮಾಜದ ಆಸ್ತಿಯಾಗಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವ ಸಲುವಾಗಿ ತಮ್ಮ ಆಸ್ತಿಗಳನ್ನು ದಾನ ಮಾಡಿದ ಮಹನೀಯರು. ಶ್ರೀಯುತರು ಜನವರಿ 10. 1861ರಂದು ಗದಗ ಪರಿಸರದ ಶಿಗ್ಲಿಯಲ್ಲಿ ಜನಿಸಿರುವ ಮಹಾದಾನಿಯ ಜಯಂತಿಯಂದು ಪ್ರಸ್ತುತ ಲೇಖನ.
ಕರ್ನಾಟಕದಾದ್ಯಂತ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳಕಿನ ಜ್ಯೋತಿ ಬೆಳಗಿದ ಪುಣ್ಯ ಪುರುಷರಲ್ಲಿ ಶ್ರೀಯುತರು ಕೂಡ ಒಬ್ಬರಾಗಿದ್ದಾರೆ. 19ನೇ ಶತಮಾನದ ಉತ್ತರಾರ್ಧದಲ್ಲಿ ವಸಂತದ ಗಾಳಿಯಂತೆ ಸುಳಿದು ಅಜ್ಞಾನವೆಂಬ ದಾರಿದ್ರವನ್ನು ದೂರಿಕರಿಸಿ, ಮೈಮರೆತು ಮಲಗಿದ್ದ ಸಮಾಜವನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಪಾರ ಶಿಷ್ಯ ಬಳಗವನ್ನು ಹೊಂದಿದ್ದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳವರ ಮಾರ್ಗದರ್ಶನದಲ್ಲಿ ಅಂದಿನ ಕಾಲಕ್ಕೆ ತಮ್ಮ ಹೆಗಲಿಗೆ ಹೆಗಲಾಗುವಂತಹ ಕೀರ್ತಿಶಾಲಿಗಳು ಆಸರೆಯಾಗಿ ಸಮಾಜವನ್ನು ಮುನ್ನಡೆಸಿದರು. ಅದರಲ್ಲಿ ಪ್ರಮುಖರೆಂದರೆ ಅರಟಾಳ ರುದ್ರಗೌಡರು, ಗಿಲಗಂಚಿ ಗುರುಸಿದ್ದಪ್ಪ, ವಾರದ ಮಲ್ಲಪ್ಪ ಹಾಗೂ ಹಳಕಟ್ಟಿ ಗುರುಬಸಪ್ಪ ಇವರೆಲ್ಲರೂ ಅವರ ಕನಸಿನ ಸಸಿಗೆ ನೀರೇರೆಯುವ ಕೆಲಸ ಮಾಡಿದರು.
ಇಂದಿನ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಮಡ್ಲಿ ಗೂಳಪ್ಪ ಹಾಗೂ ಯಲ್ಲಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿ, ಶಿರಸಂಗಿ ಮತ್ತು ನವಲಗುಂದ ಸಂಸ್ಥಾನದ ದತ್ತು ಪುತ್ರನಾದದ್ದು ಯೋಗಾ ಯೋಗವೇ ಸರಿ. ಕೇವಲ 11 ವರ್ಷದ ಹದಿಹರೆಯದರಲ್ಲಿ ಕೊಲ್ಲಾಪುರದಲ್ಲಿದ್ದು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ಮುನ್ನವೇ, ದತ್ತುತಾಯಿ ಗಂಗೂಬಾಯಿ ಯವರು ಲಿಂಗೈಕ್ಯರಾದುದು ದುಃಖವನ್ನು ತಂದೊಟ್ಟಿತು. ನಂತರ ಮತ್ತೊರ್ವ ದತ್ತಕ ತಾಯಿ ಉಮಾಬಾಯಿಯವರಿಂದ ಅನೇಕ ತೊಂದರೆಗಳನ್ನು ಅನುಭವಿಸಿದ ಲಿಂಗರಾಜರು 1881ರಲ್ಲಿ ಮುಂಬೈ ನ್ಯಾಯಾಲಯದ ಮೂಲಕವಾಗಿ ಇವರೇ ಶಿರಸಂಗಿ ನವಲಗುಂದದ ನಿಜ ವಾರಸುದಾರರೆಂದು ತೀರ್ು ನೀಡಿತು.
ಕೆರೆ ಕಾಲುವೆಗಳ ನಿರ್ಮಾಣ:
ಕೋರ್ಟ್ ಕಚೇರಿಗಳಿಗಾಗಿ ಅಲೆದಾಡಿ ಆರ್ಥಿಕ ಸ್ಥಿತಿ ಹದಗೆಟ್ಟ ಸಮಯಕ್ಕೆ ಸರಿಯಾಗಿ ಆದಾಯ ಹೆಚ್ಚಿಸುವಲ್ಲಿ ಶ್ರಮಿಸಿದರು. ಅಂದಿನ ಕಾಲಕ್ಕೆ ವೈಜ್ಞಾನಿಕ ಕೃಷಿ ಪದ್ದತಿ ಅನುಸರಿಸುವ ಮೂಲಕ ಕೃಷಿ ಆದಾಯವನ್ನು ಹೆಚ್ಚಿಸಿದ್ದಲ್ಲದೇ ಇತರ ರೈತರಿಗೆ ಮಾದರಿಯಾದರು. ಅಂತಹದೇ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ರೈತರಿಗೆ ನೆರವಾದರು. 1896ರಲ್ಲಿ ಬರಗಾಲ ಬಂದು ರೈತರಿಗೆ ಹಾಗೂ ಇತರ ಜನರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಅಲ್ಲಲ್ಲಿ ಕೆರೆ, ಕಾಲುವೆಗಳನ್ನು ಕಟ್ಟಿಸಿದ ಕೀರ್ತಿ ಇವರದು. ಅವು ಇಂದಿಗೂ ಜನರ ಜೀವನಾಡಿಯಾಗಿವೆ.
ಸಮಾಜದ ಬಾಂಧವ್ಯ ಸುಖಮಯವಾಗಿರಲೆಂದು ಹರಸಿದವರಿಗೆ, ಮನೆಯ ಬಾಂಧವ್ಯ ಹದಗೆಟ್ಟಿರುವ ಹಲವು ಉದಾಹರಣೆಗಳಂತೆ ಲಿಂಗರಾಜರ ಕೌಟುಂಬಿಕ ಜೀವನವೂ ಸುಖದಿಂದ ಕೂಡಿರಲಿಲ್ಲ. ಅಂತಾದರೂ ಅವರು ಎಂದೂ ಚಿಂತಿಸಲಿಲ್ಲ. ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳ ಹಾಗೂ ಅರಟಾಳ ರುದ್ರಗೌಡರ ಸಹಕಾರದಿಂದ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅದರಲ್ಲಿದ್ದ ಜನಪರ ಕಾಳಜಿ ಹಾಗೂ ಕಾರ್ಯ ಸ್ಮರಣೀಯವಾದದ್ದು.
ಈ ಎಲ್ಲ ಕಾರ್ಯಗಳು ಬ್ರಿಟಿಷ್ ಆಳರಸರ ಗಮನ ಸೆಳೆದು ಸರ್ಕಾರ ಅವರಿಗೆ ವಿಶೇಷ ಗೌರವ ನೀಡಿ ಸನ್ಮಾನಿಸಿದ್ದು ವಿಶೇಷ. 1904ರಲ್ಲಿ ಎಡ್ವರ್ಡ್ ಚಕ್ರವರ್ತಿಯ ಸಿಂಹಾಸನಾರೋಹಣದ ಕಾರ್ಯ ಕಾರಣವಾಗಿ ಜರುಗಿದ ಸಮಾರಂಭಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಲಿಂಗರಾಜರು ದೆಹಲಿಗೆ ಹೋದದ್ದು ಸ್ತುತ್ಯಾರ್ಹವಾದುದು. ಹಾಗೆಯೇ ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಸದಸ್ಯರಾಗಿ ಅತಿಥಿಗಳಾಗಿ ಭಾಗವಹಿಸಿದ ಗೌರವಕ್ಕೆ ಲಿಂಗರಾಜರು ಪಾತ್ರರಾದರು. ಲಿಂಗಾಯತ ಸಮಾಜದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಆ ಕಾಲದ ಹಿರಿಯರ ನೆರವಿನಿಂದ 1904ರಲ್ಲಿ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿ, ಲಿಂಗರಾಜರು ಮಾಡಿದ ಭಾಷಣವೂ ಇಡೀ ಲಿಂಗಾಯತ ಸಮಾಜದ ಅಭಿವೃದ್ಧಿಯ ದಿಕ್ಸೂಚಿಯಾಗಿತ್ತು. ಹಾಗೆ ಬೆಂಗಳೂರಿನಲ್ಲಿ ಜರುಗಿದ 2ನೆಯ ಅಧಿವೇಶನಕ್ಕೂ ಅವರೇ ಅಧ್ಯಕ್ಷರಾದದು ಸಂಚಲನ ಮೂಡಿಸುವಂಥದ್ದು. ಅವರು ತಮ್ಮ ನುಡಿಗಳಲ್ಲಿ ಶಿಕ್ಷಣ, ಕೃಷಿ, ಉದ್ಯೋಗ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡುವುದರ ಮೂಲಕ ಬಾಲ್ಯವಿವಾಹ, ವರದಕ್ಷಿಣೆಯಂತ ಸಾಮಾಜಿಕ ಅನಿಷ್ಟಗಳನ್ನು ನಿವಾರಿಸಲು ಕರೆ ನೀಡಿದರು. ಅದರ ಪರಿಣಾಮವಾಗಿಯೇ ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿ ಹೊಸ ಮನ್ವಂತರವು ಉದಯಿಸಿತು. ಅಲ್ಲಲ್ಲಿ ಶಾಲೆಗಳು ಮಠ-ಮಂದಿರಗಳಲ್ಲಿ ಪ್ರಾರಂಭವಾಗುವುದಕ್ಕೆ ಇವರ ಮಾತುಗಳೇ ಪೂರ್ತಿಯಾದವು. 1906ರಲ್ಲಿ ಅವರು ಕೊನೆಯುಸಿರೆರೆಯುವ ಸಮಯಕ್ಕೆ ಗುರುಗಳ ಹಾಗೂ ರುದ್ರಗೌಡರ ಮಾರ್ಗದರ್ಶನದಲ್ಲಿ ಗುಪ್ತವಾಗಿ ಮೃತ್ಯು ಪತ್ರವನ್ನು ಬರೆದು ಬೆಳಗಾವಿ ಜಿಲ್ಲಾಧಿಕಾರಿಗೆ ಸಲ್ಲಿಸಿರುವುದು ಗಮನಾರ್ಹ.
ಬಡ ಮಕ್ಕಳ ಬಗ್ಗೆ ಕಾಳಜಿ :
ನವಲಗುಂದದಲ್ಲಿ ಅವರ ಸಮಾಧಿ ಕಾರ್ಯವನ್ನು ಪೂರೈಸಿದ ಎರಡು ದಿನಗಳ ನಂತರ ಜಿಲ್ಲಾಧಿಕಾರಿಗಳು ಮೃತ್ಯು ಪತ್ರವನ್ನು ತೆಗೆದು ಓದಿದಾಗ ಅಲ್ಲಿ ವಿಶೇಷ ಆಶ್ಚರ್ಯ ಕಾದಿತ್ತು. ಅದೇನೆಂದರೆ, ತಮ್ಮ ಸಂಸ್ಥಾನದ ಸಮಸ್ತ ಸ್ಥಾವರ ಮತ್ತು ಜಂಗಮ ಆಸ್ತಿಯನ್ನು ಸಮಾಜದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬಳಸಬೇಕೆಂದು, ಅದನ್ನು ಬೆಳಗಾವಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಮಾಡಿ ಸಮಸ್ತ ಆಸ್ತಿಯನ್ನು ಅವರ ಅಧೀನಕ್ಕೆ ಒಳಪಡಿಸಬೇಕೆಂದು ಮೃತ್ಯು ಪತ್ರದಲ್ಲಿ ಬರೆದಿದ್ದರು. ಕೆಲವೊಂದಿಷ್ಟು ಉದ್ವಿಗ್ನಗಳು ಮರೆಯಾಗಿ ಟ್ರಸ್ಟ್ ಪ್ರಾರಂಭವಾಯಿತು. ಇದರ ನೆರವಿನಿಂದ ಸಾಕಷ್ಟು ಬಡ ಮಕ್ಕಳು ಶಿಕ್ಷಣ ಉನ್ನತ ಶಿಕ್ಷಣ ಪಡೆಯುತ್ತಿರುವುದು ವಿಶೇಷ. ಅದರಲ್ಲಿ ಡಾ. ಡಿ.ಸಿ. ಪಾವಟೆ, ಪ್ರೊ.ಶಿ.ಶಿ. ಬಸವನಾಳ, ಪ್ರೊ. ಎಂ.ಆರ್. ಸಾಖರೆ, ಡಾ. ಎಸ್.ಸಿ. ನಂದಿಮಠ ಡಾ. ಎಂ.ಸಿ. ಮೋದಿ ಅವರಂತ ಗಣ್ಯಾತಿ ಗಣ್ಯರು ಉನ್ನತ ಶಿಕ್ಷಣ ಪಡೆಯುವಲ್ಲಿ ಶಿರಸಂಗಿ ಟ್ರಸ್ಟ್ ಪಾತ್ರ ಗಮನಾರ್ಹವಾದುದು.
ಇಂತಹ ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಯು ಇಂದು ಶತಮಾನವನ್ನು ಪೂರೈಸಲು ವಿದ್ಯಾಭಿವೃದ್ಧಿಯ ಚಿಂತನ-ಮಂಥನಗಳ ಪರಿಣಾಮವೇ ಇಲ್ಲಿಯವರೆಗೂ ಬೆಳೆಯಲು ಪುಷ್ಠಿ ನೀಡಿತು. ಈ ನೆಲೆಯಲ್ಲಿ ಸಮಾಜದಲ್ಲಿ ಶೈಕ್ಷಣಿಕ ಚಳುವಳಿಯನ್ನು ಹುಟ್ಟು ಹಾಕಿದ ಶಿರಸಂಗಿಯ ಲಿಂಗರಾಜ ಜಯಂತಿಯಂದು ಅವರನ್ನು ನೆನೆಯುವುದೇ ನಮ್ಮ ಸೌಭಾಗ್ಯ. ಸಂಸ್ಥೆಯ ಮೇಲೆ ಅವರ ಹರಕೆ ಸದಾಕಾಲವಿರಲಿ. ಅವರ ಚೇತನ ಆತ್ಮಕ್ಕೆ ಕೆ.ಎಲ್.ಇ. ಪರಿವಾರದ ಶಿಕ್ಷಕ ವೃಂದದಿಂದ, ಆಡಳಿತ ವರ್ಗದಿಂದ, ವಿದ್ಯಾರ್ಥಿಗಳಿಂದ ಶುಭಾಶಯಗಳನ್ನು ಅರ್ಿಸುತ್ತೇನೆ
ಡಾ. ರಾಮಚಂದ್ರ ಪಡೆಸೂರ
ಕನ್ನಡ ವಿಭಾಗ
ಕೆ.ಎಲ್.ಇ. ಕಲಾ ಹಾಗೂ ವಾಣಿಜ್ಯ
ಮಹಾವಿದ್ಯಾಲಯ, ಗದಗ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 