ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ್ಯರ 15ನೆಯ ಪುಣ್ಯ ಸ್ಮರಣೋತ್ಸವ

ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ್ಯರ 15ನೆಯ ಪುಣ್ಯ ಸ್ಮರಣೋತ್ಸವ 15th Commemoration of the Guru Pt. Chandrashekhar Puranika Math

ಧಾರವಾಡ 28 : ದಿನಾಂಕ 27-07-2025 ರವಿವಾರದಂದು ಸಾಧನಕೇರಿಯ ‘ಗುರುಕೃಪಾ' ನಿವಾಸದಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಹಿಂದುಸ್ತಾನೀ ಗಾಯಕ, ಶಿಷ್ಯ ವತ್ಸಲ, ಸರಳ, ಸಜ್ಜನ ವ್ಯಕ್ತಿ ಪಂ. ಚಂದ್ರಶೇಖರ ಪುರಾಣಿಕಮಠ ಗುರುವರ‌್ಯರ 15ನೇ ಪುಣ್ಯ ಸ್ಮರಣೆ ಕಾರ್ಯಕ್ರಮವು ಅವರ ನೆಚ್ಚಿನ ಶಿಷ್ಯ ಬಳಗ ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. 

ಈ ಸಂದರ್ಭದಲ್ಲಿ ಪುರಾಣಿಕಮಠ ಗುರುವರ‌್ಯರ ನೆಚ್ಚಿನ ಶಿಷ್ಯರಲ್ಲೊಬ್ಬರಾದ ಹಾಗೂ ಪ್ರತಿಭಾನ್ವಿತ ಹಿಂದುಸ್ತಾನೀ ಗಾಯಕರೆಂದೇ ನಾಡಿನಲ್ಲಿ ಹೆಸರು ಮಾಡಿದ ಪಂ. ಶ್ರೀಪಾದ ಹೆಗಡೆ ಸೋಮನಮನೆ, ಶಿರಸಿ ಇವರನ್ನು ಶಾಲು, ಹಾರ, ಫಲ ಪುಷ್ಪ ಹಾಗೂ ಸರಸ್ವತಿಯ ಸ್ಮರಣಿಕೆಗಳನ್ನಿತ್ತು ಆತ್ಮೀಯವಾಗಿ ಸತ್ಕರಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ ಅವರು ಮಾತನಾಡಿ ಹಿಂದುಸ್ತಾನೀ ಸಂಗೀತದಲ್ಲಿ ಸತತಾಭ್ಯಾಸ ಹೊಂದಿದ್ದ ಪುರಾಣೀಕಮಠ ಗುರುಗಳು ತಮ್ಮ ಶಿಷ್ಯವೃಂದವನ್ನು ಮನಃಪೂರ್ವಕವಾಗಿ ನಿರಂತರವಾಗಿ ಬೆಳೆಸಿದ ಘನಕಾರ್ಯ ಮಾಡಿದವರು. ಅವರ ಇಡೀ ಕುಟುಂಬವೇ ವಿಧೇಯ ಸಂಪನ್ನವಾಗಿದೆ. ತಮ್ಮ ಸಂಪೂರ್ಣ ಜೀವನವನ್ನೇ ಸಂಗೀತ ಶಾರದೆಗೆ ಅರ​‍್ಿಸಿಕೊಂಡಿದ್ದ ಈ ಗುರುವರ್ಯರ ಪ್ರಭಾವಲಯವೂ ವಿಶಾಲವಾಗಿದ್ದು ತಮ್ಮ ಸರಳ ನಡೆ, ನುಡಿ, ಶೀಲಗಳಿಂದಾಗಿ ಅವರು ಅಜರಾಮರರಾಗಿದ್ದಾರೆ ಎಂದರು. 

ಅಧ್ಯಕ್ಷತೆವಹಿಸಿದ್ದ ಇನ್ನೋರ್ವ ವಿಶ್ರಾಂತ ಆಕಾಶವಾಣಿ ನಿರ್ದೇಶಕ, ಸಾಹಿತಿ ಡಾ. ಆನಂದ ಪಾಟೀಲ, ಸಂಗೀತ ವಿದ್ಯೆಯ ವಿಶೇಷತೆ ಹಾಗೂ ಸಂಗೀತದಲ್ಲಿಯ ಹಿರಿಯ ದಿಗ್ಗಜರೊಂದಿಗಿನ ಹಾಗೂ ಪಂ. ಪುರಾಣಿಕಮಠ ಗುರುಗಳೊಂದಿನ ತಮ್ಮ ಒಡನಾಟದ ಅಮೂಲ್ಯ ದಿನಗಳನ್ನು ಸ್ಮರಸಿಕೊಂಡರು. 

ನಂತರ ನಡೆದ ಹಿಂದುಸ್ತಾನೀ ಗಾಯನ ಕಾರ್ಯಕ್ರಮದಲ್ಲಿ, ಹೊರಗಡೆ ಆಗತಾನೇ ಕಾಲೂರುತ್ತಿದ್ದ ಶ್ರಾವಣದ ಜಿನುಗುಮಳೆ ಹನಿಗರೆಯುತ್ತಿದ್ದಂತೆ ಸಭಾಂಗಣದೊಳಗಡೆ ಪಂ. ಶ್ರೀಪಾದ ಹೆಗಡೆ ಸೋಮಮನೆಯವರ ಶ್ರೀಮಂತ ಕಂಠದ ಗಾಯನ ಪ್ರಾರಂಭಗೊಂಡಿತು. ಮೇಘರಾಗದಿಂದ ಶುರುವಾಗಿ “ನೀರಕಂಡಲ್ಲಿ ಮುಳುಗುವರಯ್ಯ'' ಎಂಬ ವಚನಗಾಯನದ ಮೂಲಕ ಮುಂದುವರಿದು ಭೈರವೀ ರಾಗದಲ್ಲಿಯ ಮೀರಾಬಾಯಿಯ ರಾಮನಾಮದ ಗಾಯನಗಳೆಲ್ಲವೂ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದವು. ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಹಾರ್ಮೋನಿಯಂದಲ್ಲಿ ಡಾಽಽ ಪರಶುರಾಮ ಕಟ್ಟಿ ಸಂಗಾವಿ ಮತ್ತು ತಂಬೂರಿಯಲ್ಲಿ ವೀರೇಶ ಸಮರ್ಥ ಸಾಥ್ ನೀಡಿದರು. 

ಪ್ರಾರಂಭದಲ್ಲಿ ಗುರುಕೃಪಾ ಸಂಗೀತ ಶಾಲೆಯ ಮಕ್ಕಳಿಂದ ಪ್ರಾರ್ಥನೆಯ ನಂತರ ಸ್ಮೃತಿ ಸಭಾದ ಸ್ಥಾಯೀ ಸಮಿತಿ ಅಧ್ಯಕ್ಷ ನರಸಿಂಹ ಟಿ. ಪರಾಂಜಪೆಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾಽಽ ಶಾರದಾ ಭಟ್ಟ ಅತಿಥಿಗಳನ್ನು ಪರಿಚಯಿಸಿದರು, ಅಶೋಕ ಜೋಶಿ ಕಾರ್ಯಕ್ರಮ ನಿರೂಪಿಸಿದರು, ನಾಗರತ್ನಾ ಪುರಾಣಿಕಮಠ ವಂದಿಸಿದರು. ಸ್ಮೃತಿ ಸಭಾದ ಅಧ್ಯಕ್ಷ ಕುಮಾರಸ್ವಾಮಿ ಪುರಾಣಿಕಮಠ ವೇದಿಕೆಯಲ್ಲಿದ್ದರು. 

ಗಣ್ಯರಾದ ಎಸ್‌.ಎನ್‌.ಹೆಗಡೆ, ಡಿ.ವಿ. ಕುಲಕರ್ಣಿ, ಆರ್‌.ಎಮ್‌.ದೊಡ್ಡಮನಿ, ಎಚ್‌.ಎ.ಕೆ. ಆಚಾರ್ಯ, ಎಮ್‌.ಕೆ. ಹೆಗಡೆ, ಬಿ.ಆಯ್‌.ಈಳಿಗೇರ, ಗುರುಪ್ರಸಾದ ಹೆಗಡೆ, ಎಚ್‌.ಎಮ್‌. ಪಾಟೀಲ, ರಾಮಣ್ಣ ಗೊಜನೂರ, ವಿ.ಎಲ್‌. ಪಾಟೀಲ, ಪರಮೇಶ್ವರ ಹೆಗಡೆ, ಶಿವಯೋಗಿ ಪುರಾಣಿಕಮಠ, ಮಹೇಶ ಕುರುವತ್ತಿ, ಮಂಜುನಾಥ ಹೆಗಡೆ, ಎಮ್‌.ಎ. ಕಾಮ್ಟೆ, ಪ್ರತಿಭಾ ಹೆಗಡೆ, ಶಾರದಾ ಕುರವತ್ತಿ, ಜ್ಯೋತಿ ಹಾವನೂರ, ಸೀಮಾ ಪರಾಂಜಪೆ, ಸಾವಿತ್ರಿ ಮಾಟೊಳ್ಳಿ, ಪವಿತ್ರಾ ಚಾಕಲಬ್ಬಿ ಹಾಗೂ ಗುರುವರ‌್ಯರ ನೆಚ್ಚಿನ ಶಿಷ್ಯವೃಂದ, ಅಭಿಮಾನೀ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.