ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು 14 ದಿನಗಳ ಗಡುವು

ಬೆಳಗಾವಿ 24 : ಪ್ರತಿಯೊಂದು ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಮಕ್ಕಳ ಸಹಾಯವಾಣಿ ಫಲಕ ಅಳವಡಿಕೆ ಕಡ್ಡಾಯವಾಗಿ 14 ದಿನಗಳ ಒಳಗಾಗಿ ಒದಗಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ. ಅಂತೋಣಿ ಸೆಬಾಸ್ಟಿಯನ್ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ( ಜ.24 ) ನಡೆದ ಶಾಲೆ ಬಿಟ್ಟ ಮಕ್ಕಳು ಹಾಗೂ ಆರ್.ಟಿ.ಇ ಕುರಿತ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಅಂತೋಣಿ ಸೆಬಾಸ್ಟಿಯನ್ ಅವರು, ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಪಕವಾದ ಮಾಹಿತಿಯನ್ನು ಆಯೋಗಕ್ಕೆ ನೀಡಲು ವಿಫಲವಾದ ಕಾರಣ 14 ದಿನಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಿದರು.

ಶಾಲೆಗಳಲ್ಲಿ ಉಚಿತವಾಗಿ ವಿತರಿಸುವ ಶೂ, ಸಮವಸ್ತ್ರಗಳ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಿಡಿಪಿಐ ಗಜಾನನ ಮನ್ನಿಕೇರಿ, 2002 ರಲ್ಲಿ ಬೆಳಗಾವಿಯಲ್ಲಿ ಎರಡು ಶೈಕ್ಷಣಿಕ ಜಿಲ್ಲೆಯಾಗಿ ಮಾಡಲಾಗಿದೆ. ಬೆಳಗಾವಿಯಲ್ಲಿ 7 ವಲಯಗಳಾಗಿ ವಿಂಗಡಣೆ ಮಾಡಲಾಗಿದೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ವಲಯಗಳಾಗಿ ರಚನೆ ಮಾಡಲಾಗಿದೆ.

ಈ ವಲಯಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಆದಾಗ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ನೀಡುತ್ತಾರೆ. ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ವಾತವರಣ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ಜಿಲ್ಲೆಯಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, "7 ವಲಯಗಳಲ್ಲಿ 45 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಆ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಿದಾಗ ಆರ್ಥಿಕ ಸಮಸ್ಯೆ, ವಲಸೆ ಸೇರಿದಂತೆ ವಿವಿಧ ಬಗೆಯ ಸಮಸ್ಯೆಗಳು ಕಂಡು ಬರುತ್ತಿವೆ" ಎಂದು ತಿಳಿಸಿದರು.

ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬೆಳಗಾವಿ ಗಡಿ ಜಿಲ್ಲೆ ಆಗಿರುವುದರಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಚಿಕ್ಕೋಡಿ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ವಿವರಣೆ ನೀಡಿದ ಅಧಿಕಾರಿಗಳು, ಪ್ರತಿ ಶನಿವಾರ ಮಕ್ಕಳ ಹಾಜರಾತಿ ಬಗ್ಗೆ ದೃಢೀಕೃತ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಿ. ಶಂಕ್ರಪ್ಪ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಲಸೆ ಹೋಗುವ ಸಮಸ್ಯೆ ಇದೆ. ವಲಸೆ ಹೋಗುವ ಕುಟುಂಬಗಳ ಬಗ್ಗೆ ಏನಾದ್ರು ನಿಮ್ಮ ಕಡೆ ಮಾಹಿತಿ ಇದೆಯಾ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ವಲಸೆ ಬಂದವರ ಮಕ್ಕಳಿಗಾಗಿ ಟೆಂಟ್ ಶಾಲೆಗಳ ಅಳವಡಿಕೆ ಮಾಡಬೇಕು ಎಂದು ಹೇಳಿದರು.

ಒಂದು ಮಗುವಿಗೆ ಸುರಕ್ಷಿತ ಸ್ಥಳ ಅಂದರೆ ಅದು ಶಾಲೆ, ಇದರ ಮಹತ್ವ ಏನು ಎಂಬುವದನ್ನು ಪ್ರತಿಯೊಬ್ಬ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಸಾಕಷ್ಟು ಇಲಾಖೆಗಳು ಇರುವುದರಿಂದ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಕಷ್ಟ ಏನು ಅಲ್ಲ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಾತನಾಡಿದ ಆಯೋಗದ ಮತ್ತೋರ್ವ ಸದಸ್ಯ ಎಚ್.ಸಿ.ರಾಘವೇಂದ್ರ ಅವರು, ಆರ್ ಟಿ ಇ ಅನ್ವಯ ಮಕ್ಕಳಿಗೆ ಯಾವ ರೀತಿಯ ಮೂಲಭೂತ ಸೌಲಭ್ಯಗಳು ನೀಡಬೇಕು ಎಂಬುದರ ಬಗ್ಗೆ ಯಾವುದೇ ಅಧಿಕಾರಿಗಳು ಪ್ರಸ್ತಾಪ ಮಾಡದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ಯಾವದೇ ಒಂದು ಮಗು ಶಿಕ್ಷಣದಿಂದ ವಂಚಿತವಾದರೆ ಆಯೋಗವು ಅದನ್ನು ಸಹಿಸಲ್ಲ. ಮಕ್ಕಳನ್ನು ಶಿಕ್ಷಣ ನೀಡಿ ಆ ಮಕ್ಕಳ ಬಾಲ್ಯವನ್ನು ಅವರಿಗೆ ನೀಡಬೇಕು. ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕು ಒಂದು ಮಗು ಶಿಕ್ಷಣದಿಂದ ವಂಚನೆ ಆಗಿ ಶೋಷಣೆಗೆ ಒಳಗಾದರೆ ಸಂಬಂಧಿಸಿದ ಎಲ್ಲ ಅಧಿಕಾರಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅವಕಾಶಗಳಿವೆ ಎಂದು ಹೇಳಿದರು.

ಈಗಾಗಲೇ ಇರುವ ಆರ್.ಟಿ.ಇ ಕಾಯ್ದೆ ಅಡಿ ಖಾಸಗಿ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳ ಪೋಷಕರಿಂದ ಶಾಲೆಯವರು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಚೂರುಗಳ ಬರುತ್ತಿವೆ ಹಾಗಾಗಿ ದೂರು ಬರುವ ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಹೇಳಿದರು. ಮಕ್ಕಳ ಹಕ್ಕುಗಳ ಅಯೋಗದ ಸದಸ್ಯರಾದ ಭಾರತಿ ಎಸ್. ಡಬ್ಲ್ಯೂ.ಅವರು, ಹಲವಾರು ಶಾಲೆಗಳಲ್ಲಿ ಕಂಪೌಂಡ್ ಇಲ್ಲದೆ ಇರುವ ಕಾರಣ ಆ ಶಾಲೆಗಳಲ್ಲಿ ಸ್ವಚ್ಚತಾ ಕೆಲಸಗಳು ನಿರ್ವಹಣೆ ಆಗುತ್ತಿಲ್ಲ. ಆ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಸತಿ ಶಾಲೆಗಳ ಸೌಲಭ್ಯ- ವರದಿ ಸಲ್ಲಿಸಲು ಆಯೋಗ ಸೂಚನೆ: ಜಿಲ್ಲೆಯಲ್ಲಿ ಇರುವ ಎಲ್ಲಾ ವಸತಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಸತ್ಯಶೋಧನೆ ಕೈಗೊಂಡು ಆಯೋಗಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ. ಅಂತೋಣಿ ಸೆಬಾಸ್ಟಿಯನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಾಲ ನ್ಯಾಯ ಕಾಯ್ದೆ 2015ರ ಅನುಷ್ಠಾನದ ಕುರಿತು ನಡೆದ ಭಾಗಿದರರೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ವಸತಿ ಶಾಲೆಗಳ 3 ವರ್ಷಗಳ ಕಾರ್ಯವೈಖರಿಯ ವರದಿ ನೀಡಬೇಕು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲಿಸಲು ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಸದರಿ ತಂಡಗಳು ಕಾಲಕಾಲಕ್ಕೆ ವಸತಿನಿಲಯಗಳಿಗೆ ಭೇಟಿ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು.

ವಸತಿ ಶಾಲೆಗಳಲ್ಲಿ ಇರುವ ಮಕ್ಕಳು ಸೌಲಭ್ಯಗಳಿಂದ ವಂತರಾಗುತ್ತಿದ್ದಾರೆ. ಮೇನು ಚಾರ್ಟನ ಪ್ರಕಾರ ಮಕ್ಕಳಿಗೆ ಆಹಾರ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಆಯೋಗದ ಸದಸ್ಯರು, ಜಿಲ್ಲೆಯ ವಸತಿ ಶಾಲೆಗಳಲ್ಲಿ ಮೂರು ತಂಡಗಳೊಂದಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮುದಾಯಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು; ಬಾಲ್ಯ ವಿವಾಹ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು; ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಅರಿವು ಮೂಡಿಸುವುದು; ಬಾಲ ನ್ಯಾಯ ಕಾಯ್ದೆ ಅನ್ವಯ ದಾಖಲಾದ ಪ್ರಕರಣಗಳು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿವಿಧ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.