ಹಾನಗಲ್ನಲ್ಲಿ ಕನಕದಾಸರ 12 ಅಡಿ ಕಂಚಿನ ಪ್ರತಿಮೆ ಲೋಕಾರೆ​‍್ಣ

ಹಾನಗಲ್ನಲ್ಲಿ ಕನಕದಾಸರ 12 ಅಡಿ ಕಂಚಿನ ಪ್ರತಿಮೆ ಲೋಕಾರೆ​‍್ಣ  12-foot bronze statue of Kanakadasa in Hanagal is a world-famous statue

ಲೋಕದರ್ಶನ ವರದಿ 

ಹಾನಗಲ್ 26: ಬೇಡವಾದುದನ್ನೇ ಹುಡುಕಲು ಹೋಗುತ್ತೇವೆ ವಿನಃ ನಮ್ಮೊಳಗಿನ ಶಕ್ತಿ, ಸಾಮರ್ಥ್ಯ ಅರಿಯದಾಗಿದ್ದೇವೆ. ಒತ್ತಡದ ಬದುಕಿಗೆ ಸಿಲುಕಿ ನಮ್ಮನ್ನು ನಾವೇ ಮರೆಯುತ್ತಿದ್ದೇವೆ, ಸಂಸ್ಕೃತಿ ಹಾಳು ಮಾಡುತ್ತಿದ್ದೇವೆ ಎಂದು ಶಾಸಕ ಶ್ರೀನಿವಾಸ ಮಾನೆ ಬೇಸರ ವ್ಯಕ್ತಪಡಿಸಿದರು. ಇಲ್ಲಿನ ಬಸ್ ನಿಲ್ದಾಣದ ಬಳಿಯ ಕನಕ ಉದ್ಯಾನವನದಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರ 12 ಅಡಿ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಬಳಿಕ ಡಾ.ಬಾಬು ಜಗಜೀವರಾಂ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಆ ದಿನಗಳಲ್ಲಿಯೇ ಜಾತಿ, ವರ್ಣ ಭೇದಭಾವಗಳ ವಿರುದ್ಧ ಧ್ವನಿ ಎತ್ತಿ ಮಾನವೀಯತೆಯನ್ನೇ ಮಹಾಧರ್ಮ ಎಂದು ಸಾರಿದ ಕನಕದಾಸರ ಕಂಚಿನ ಪುತ್ಥಳಿಯ ಅನಾವರಣದ ಕನಸು ಇಂದು ನನಸಾಗಿದೆ. ಕಂಚಿನ ಪುತ್ಥಳಿ ಅದೊಂದು ಪ್ರತಿಮೆಯಲ್ಲ, ಅದು ಅವರ ಆದರ್ಶ, ಚಿಂತನೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಮುಂದಿನ ಪೀಳಿಗೆಗೆ ಕನಕದಾಸರ ವಿಚಾರಧಾರೆ ಪರಿಚಯಿಸಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಬೇಕಿದೆ. ಕನಕದಾಸರ ತತ್ವಗಳು ಹೃದಯಾಂತರಾಳದಲ್ಲಿ ನೆಲೆಸಬೇಕಿದೆ ಎಂದು ಹೇಳಿದ ಅವರು ಯಳವಟ್ಟಿ ಗ್ರಾಮದಲ್ಲಿರುವ ಕಾಗಿನೆಲೆ ಗುರುಪೀಠದ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮುಂದಿನ 2 ವರ್ಷಗಳಲ್ಲಿ ಹಂತ, ಹಂತವಾಗಿ ಅನುದಾನ ದೊರಕಿಸಲು ಕಾಳಜಿ ವಹಿಸುವ ಭರವಸೆ ನೀಡಿದರು. 

  ಸಾನ್ನಿಧ್ಯವಹಿಸಿದ್ದ ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ ಕಳೆದ ಕೆಲ ವರ್ಷಗಳಿಂದ ಸರ್ಕಲ್‌ಗಳಲ್ಲಿನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಹೋಗದೇ ಇರಲು ಸಂಕಲ್ಪಿಸಿದ್ದೆ. ಈ ಹಿಂದೆ 2003 ರ ಸಂದರ್ಭದಲ್ಲಿ ಹಾನಗಲ್ ನಗರದ ಕನಕ ಉದ್ಯಾನವನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ವಿರೋಧಿಸಿ ಹೋರಾಟ ಕೈಗೊಂಡಿದ್ದೆ. ಹಾಗಾಗಿ ಇದು ತಮ್ಮ ಜೀವನದ ಮೊದಲ ಹೋರಾಟವಾಗಿದ್ದರಿಂದ ಅನಾವರಣ ಸಮಾರಂಭದಲ್ಲಿ ಭಾಗವಹಿಸಿದ್ದೇನೆ. ಹಾದೀಬೀದಿಗಳಲ್ಲಿ ಮೂರ್ತಿಗಳು ಇರಬಾರದು ಎನ್ನುವ ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ.

ದಾರ್ಶನಿಕರ ಹೆಸರಿನಲ್ಲಿ ಎಂತಹ ಸಂದರ್ಭದಲ್ಲಿ ಸಹ ಸಾಮರಸ್ಯ ಕದಡುವ ಕೆಲಸ ನಡೆಯಬಾರದು. ಆದರೆ ಮೂರ್ತಿಯಿಂದ ಸಹಬಾಳ್ವೆ, ಸಾಮರಸ್ಯ ಮೂಡಿದರೆ ಅಭ್ಯಂತರವಿಲ್ಲ ಎಂದು ಹೇಳಿದ ಅವರು ಪುತ್ಥಳಿಗೆ ಅವಮಾನ ಆಗದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಬದಲಾದ ಇಂದಿನ ಸಂದರ್ಭದಲ್ಲಿ ಸತ್ಯಕ್ಕಿಂತಲೂ ಪ್ರಿಯವಾದ ವಿಷಯವನ್ನು ಜನ ನೀರೀಕ್ಷಿಸುತ್ತಿದ್ದಾರೆ. ಶಿಕ್ಷಣಕ್ಕೆ ಮೊದಲಾದ್ಯತೆ ನೀಡಿದರೆ ಮಾತ್ರ ಸಮಾಜ ವಿಕಾಸ ಹೊಂದಲು ಸಾಧ್ಯವಿದೆ ಎಂದರು. 

  ಹೋತನಹಳ್ಳಿಯ ಸಿದ್ದಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಸಮ್ಮುಖ,ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಮಹೇಶ ಪವಾಡಿ ಅಧ್ಯಕ್ಷತೆ ವಹಿಸಿದ್ದರು. ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ,ಪ್ರಮುಖರಾದ ಯಲ್ಲಪ್ಪ ಕಿತ್ತೂರ, ಭೋಜರಾಜ್ ಕರೂದಿ, ಎಂ.ಬಿ.ಕಲಾಲ, ಎ.ಎಸ್‌.ಬಳ್ಳಾರಿ, ನಾಗರಾಜ ಅನ್ವೇರಿ, ರಾಜೇಂದ್ರ ಹಾವೇರಣ್ಣನವರ, ರವಿ ಒಡೆಯರ, ಮಾಲತೇಶ ಬ್ಯಾಗವಾದಿ, ಸುರೇಶ ದೊಡ್ಡಕುರುಬರ ಸೇರಿದಂತೆ ಇನ್ನೂ ಹಲವರು ಇದ್ದರು. ದಾನಪ್ಪ ಗಂಟೇರ ಸ್ವಾಗತಿಸಿದರು. ವಿನಾಯಕ ಕುರುಬರ ನಿರೂಪಿಸಿದರು.