ಮುಜಫ್ಫರ್ಪುರ, ಮಾ.7, ಟ್ರ್ಯಾಕ್ಟರ್ ಮತ್ತು ಸ್ಕಾರ್ಪಿಯೋ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಇಲ್ಲಿನ ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ಸಮ್ರಸ್ಪುರ ಎಂಬಲ್ಲಿ ಶನಿವಾರ ನಡೆದಿದೆ.ರಾಷ್ಟ್ರೀಯ ಹೆದ್ದಾರಿ 28ರ ಸಮ್ರಸ್ಪುರ ಹೆಲ್ತ್ಕೇರ್ ಸಮೀಪ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳದಲ್ಲೇ 12 ಮಂದಿ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಮುಜಫ್ಫರ್ಪುರದ ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರತಿ ಮನೆಗೆ ಕೊಳವೆ ನೀರು ಸರಬರಾಜು ಮಾಡಲು ಬಿಹಾರ ಮುಖ್ಯಮಂತ್ರಿಯ ಕನಸಿನ ಯೋಜನೆಯಡಿ ಮೃತರು ಬಕ್ಸಾರ್ನಲ್ಲಿ ಪೈಪ್ಲೈನ್ಗಳನ್ನು ಹಾಕುವಲ್ಲಿ ನಿರತರಾಗಿದ್ದಾರೆ. ಅವರು ಹೋಳಿ ಹಬ್ಬಕ್ಕಾಗಿ ಬಕ್ಸಾರ್ನಿಂದ ತಮ್ಮ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.ಮೃತ ಇಬ್ಬರು ರಾಂಬಲ್ ಸಾಹ್ನಿ ಮತ್ತು ಧ್ರುವ ನಾರಾಯಣ್ ಸಾಹ್ನಿ ಎಂದು ಗುರುತಿಸಲಾಗಿದ್ದು, ಉಳಿದವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲರೂ ಮುಜಫ್ಫರ್ಪುರ ಜಿಲ್ಲೆಯ ಹಥೌಡಿಯ ಸಿಮ್ರಿ ಗ್ರಾಮಕ್ಕೆ ಸೇರಿದವರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.