ಯೋಗವು ಭಾರತದ ಪ್ರಾಚೀನ ನಾಗರಿಕತೆಯ ಅಮೂಲ್ಯ ಕೊಡುಗೆ: ಸಂಸದ ಕೆ.ರಾಜಶೇಖರ ಹಿಟ್ನಾಳ
11th International Yoga Day: Koppal
11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕೊಪ್ಪಳ 21: ಒತ್ತಡಗಳನ್ನು ನಿವಾರಿಸುವ ದಿವ್ಯ ಓಷಧಿಯಾಗಿರುವ ಯೋಗವು ಭಾರತದ ಪ್ರಾಚೀನ ನಾಗರಿಕತೆಯ ಅಮೂಲ್ಯ ಕೊಡುಗೆಯಾಗಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಶನಿವಾರ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳು ಮತ್ತು ಸರ್ವಯೋಗ ಸಂಸ್ಥೆಗಳು ಇವರ ಸಹಯೋಗದಲ್ಲಿ "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಧೈಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೊಗವು ದೈಹಿಕ ವ್ಯಾಯಾಮ ಮಾತ್ರವಲ್ಲದೇ, ಮನಸ್ಸು ಮತ್ತು ಆತ್ಮದ ಸಮಗ್ರ ಏಕೀಕರಣ ಮಾಡುವ ಪ್ರಕ್ರಿಯೆಯಾಗಿದೆ ಎಂಬುದನ್ನು ಋಷಿ ಮುನಿಗಳು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಯೋಗಾಸನವು ನಮ್ಮ ಭಾರತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಸೂಚಿಸುತ್ತದೆ. ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಣೆ ಮಾಡಬೇಕೆಂದು ನಮ್ಮ ದೇಶದ ಪ್ರಧಾನಮಂತ್ರಿಗಳು ಕರೆ ನೀಡಿದಾಗ, 177 ರಾಷ್ಟ್ರಗಳು ಇದಕ್ಕೆ ಒಪ್ಪಿಕೊಂಡು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಭಾರತ ದೇಶದಲ್ಲಿ ಪರಂಪರಾಗತವಾಗಿ ಬಂದಿರುವ ಯೋಗವು ಪ್ರಸ್ತುತ ಇಡೀ ವಿಶ್ವದ ಮನ್ನಣೆಯನ್ನು ಪಡೆದಿದೆ ಎಂದರು.
ಇಂದು ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಮೊಬೈಲ್ ಮತ್ತು ವಿಶೇಷವಾಗಿ ಇಂಟರ್ನೆಟ್ ಬಳಕೆಯಿಂದಾಗಿ ಮನುಷ್ಯರು ಬಹಳಷ್ಟು ಒತ್ತಡದಲ್ಲಿರುವುದು ಸಾಮಾನ್ಯವಾಗಿದೆ. ಇದಲ್ಲದೇ ತರಗತಿ, ಟ್ಯೂಷನ್, ಹೋಮ್ ವರ್ಕ್, ಪರೀಕ್ಷೆ ಹೀಗೆ ವಿದ್ಯಾರ್ಥಿಗಳು ಸಹ ಒತ್ತಡಲ್ಲಿ ಇರುತ್ತಾರೆ. ಇಂತಹ ಒತ್ತಡ ನಿವಾರಣೆ ಶಕ್ತಿ ಯೋಗದಲ್ಲಿದ್ದು, ಇದರಿಂದ ಒತ್ತಡ ತಡೆಯುವ ಶಕ್ತಿ, ಆತ್ಮಸ್ಥೈರ್ಯ, ಮನಸ್ಥಿತಿ ಗಟ್ಟಿಯಾಗಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ದಿನಕ್ಕೆ ಕೆಲ ಸಮಯ ಯೋಗಕ್ಕೆ ಮೀಸಲಿಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಯೋಗ ಬಹಳ ಮುಖ್ಯ. ಪ್ರಾಚೀನ ಸಂಸ್ಕೃತಿಗೆ ನಮ್ಮ ದೇಶದ ಕೊಡುಗೆ ಅಪಾರವಾಗಿದ್ದು, ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದೆ. ಪ್ರತಿದಿನದ ಯೋಗಾಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಜಿಯವರ ಪ್ರಯತ್ನದಿಂದ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸುವ ಮೂಲಕ ಯೋಗದ ಮಹತ್ವವನ್ನು ಜಗತ್ತಿಗೆ ತಿಳಿಸಲಾಗಿದೆ. ಪ್ರತಿ ಮನೆಯಲ್ಲಿ ಅಮೃತ ಬಳ್ಳಿ ಬೆಳಸಬೇಕು ಎಂಬ ಉದ್ದೇಶದಿಂದ ಇಂದು ಆಯುಷ್ ಇಲಾಖೆಯಿಂದ ಅಮೃತ ಬಳ್ಳಿಯ ತುಂಡುಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು, ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅವರು ಮಾತನಾಡಿ, ಯೋಗವು ಮನುಷ್ಯರ ಬದುಕಿನಲ್ಲಿನ ಒತ್ತಡಗಳನ್ನು ನಿವಾರಿಸುವ ದಿವ್ಯ ಓಷಧಿಯಾಗಿದ್ದು, ಪ್ರತಿಯೊಬ್ಬರು ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ದಿನಕ್ಕೆ ಕೆಲ ಸಮಯ ಯೋಗಕ್ಕೆ ಮೀಸಲಿಡುವುದು ಅಗತ್ಯ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಪರ್ವತಗೌಡ ಬ. ಹಿರೇಗೌಡರ ಮಾತನಾಡಿ, ಮುಂಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ 629 ಹಳ್ಳಿಗಳಲ್ಲಿ ಯೋಗ ಪ್ರಾರಂಭಿಸಬೇಕೆಂಬ ಸಂಕಲ್ಪ ಆಯುಷ್ ಇಲಾಖೆಯಿಂದ ಮಾಡಲಾಗಿದೆ. ಮುಂದಿನ ವರ್ಷದ ಯೋಗ ದಿನಾಚರಣೆಯನ್ನು ಕೊಪ್ಪಳ ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿ ಪ್ರಾರಂಭಿಸಿ ಅದರ ಮೂಲಕ 14ಲಕ್ಷ ಜನರಿಗೆ ಯೋಗದಿಂದಿ ಆರೋಗ್ಯ ಪಡೆಯುವಂತೆ ಮಾಡಲಾಗುವುದು. ಶಾಲಾ ಮಕ್ಕಳಲ್ಲಿ ಇರುವಂತಹ ಗ್ರಹಣ ಶಕ್ತಿ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಹಾಗೂ ಕಲಿಕಾ ಆಸಕ್ತಿ ಹೊಂದಲು ಯೋಗದಿಂದ ಸಾಧ್ಯ. ಈ ದೃಷ್ಟಿಯಿಂದ "ಯೋಗ ಭಾರತ 365" ಎನ್ನುವ ಆನ್‌ಲೈನ್ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ ಹೋಗಿ ಯೋಗ ತರಬೇತಿಯನ್ನು ನೀಡಲು ಯೋಜನೆ ರೂಪಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲಾಡಳಿತ ಮತ್ತು ಎಲ್ಲಾ ಜನ ಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ನಮ್ಮ ಇಂದ್ರಕಿಲ ಪರ್ವತ ಕಲ್ಲಿನ ಗುಡ್ಡದ ಮಧ್ಯದಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ, ಕಲ್ಲುಗಳಲ್ಲಿ ಹೋಲು ಹಾಕಿ ಕೋಕೊ ಫಿಟ್ ತುಂಬಿ ಅದರಲ್ಲಿ ಆಲ, ಬಸರಿ, ಅಶ್ವಥ್ ಈ ಮರಗಳನ್ನ ನೆಟ್ಟು, ಆ ಇಡೀ ಕಲ್ಲಿನ ಗುಡ್ಡವನ್ನು ಹಸರೀಕರಣ ಮಾಡುವ ಗುರಿ ಹೊಂದಿದ್ದು, ಇದರಿಂದ 1 ರಿಂದ 2 ಡಿಗ್ರಿ ಉಷ್ಣಾಂಶವನ್ನು ತಗ್ಗಿಸಬಹುದು ಎನ್ನುವ ಆಲೋಚನೆಯನ್ನು ಹೊಂದಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ಹೇಳಿದರು.
ಆಯುಷ್ ವೈದ್ಯಾಧಿಕಾರಿ ಡಾ. ವೈ.ಜೆ. ಶಿರವಾರ ಅವರು ಯೋಗಾಭ್ಯಾಸ ನಡೆಸಿಕೊಟ್ಟರು. ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕನವರು ಜ್ಞಾನ ಕಾರ್ಯಕ್ರಮ ನಡೆಸಿಕೊಟ್ಟರು. ಅಂತರಾಷ್ಟ್ರೀಯ ಯೋಗಪಟು ಪ್ರಭಂಜನ್ ಅವರ ವಿಶೇಷ ಯೋಗ ಪ್ರದರ್ಶನ ಗಮನ ಸೆಳೆಯಿತು. ಯೋಗ ದಿನಾಚರಣೆ ಪ್ರಯುಕ್ತ ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಯೋಗ ಚಾಲೆಂಜ್ ಶಿಬಿರದಲ್ಲಿ ತರಬೇತಿ ನೀಡಿದ ತರಬೇತುದಾರರಿಗೆ ಹಾಗೂ ಮತ್ತಿತರರಿಗೆ ಇದೇ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಜಿಲ್ಲಾ ಪಂಚಾಯತ ಯೋಜನಾಧಿಕಾರಿ ಪ್ರಕಾಶ ವಿ., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ್, ಜಿಲ್ಲಾ ಕ್ರೀಡಾ ಅಧಿಕಾರಿ ವಿಠ್ಠಲ್ ಬಿ.ಜಾಬಗೌಡರ, ಕೊಪ್ಪಳ ತಹಶಿಲ್ದಾರ ವಿಠ್ಠಲ್ ಚೌಗಲಾ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂಧಿಗಳು, ವಿವಿಧ ಯೋಗ ಸಂಸ್ಥೆಗಳು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 