ಬೀಜಿಂಗ್, ಏಪ್ರಿಲ್ 12,ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ 99 ಹೊಸ ಕರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 97 ಮಂದಿ ವಿದೇಶದಿಂದ ಬಂದವರಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.ಶನಿವಾರ ಚೀನಾದಲ್ಲಿ 46 ಹೊಸ ಕರೋನವೈರಸ್ ಪ್ರಕರಣಗಳು (ಈ ಪೈಕಿ 42 ಮಂದಿ ವಿದೇಶದಿಂದ ಬಂದವರು) ಮತ್ತು 3 ಹೊಸ ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಕೊವಿದ್-19 ನಿಂದ ಯಾವುದೇ ಹೊಸ ಸಾವುಗಳು ವರದಿಯಾಗಿಲ್ಲ ಎಂದು ಚೀನಾದ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.ಚೀನಾದ ಮುಖ್ಯ ಭೂಭಾಗದಲ್ಲಿ 1,130 ಕ್ಕೂ ಹೆಚ್ಚು ಜನರು ಕೊವಿದ್-19 ಗೆ ಚಿಕಿತ್ಸೆ ಪಡೆಯುತ್ತಿದ್ದು, 139 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 63 ರೋಗ ಲಕ್ಷಣರಹಿತ ಪ್ರಕರಣಗಳನ್ನು ದಾಖಲಿಸಿದ್ದು, ಈ ಪೈಕಿ 12 ಆಮದು ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ರಷ್ಯಾದಿಂದ ಚೀನಾದ ಉತ್ತರದ ಪ್ರಾಂತ್ಯವಾದ ಹೈಲಾಂಗ್‌ಜಿಯಾಂಗ್‌ಗೆ ಹಾಗೂ ಶಾಂಘೈಗೆ ಆಗಮಿಸಿದ ಚೀನಾ ಮೂಲದವರಲ್ಲಿ 70 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇದಲ್ಲದೆ, ರಷ್ಯಾದಿಂದ ಹೈಲಾಂಗ್‌ಜಿಯಾಂಗ್‌ಗೆ ಆಗಮಿಸಿದ ಚೀನಾದ ಪ್ರಜೆಗಳಲ್ಲಿ ಐದು ರೋಗಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಚೀನಾದಲ್ಲಿ ಸದ್ಯ, 82,000 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳು ದೃಢಪಟ್ಟಿದ್ದು, ದೇಶದಲ್ಲಿ ಕೊವಿದ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,339ಕ್ಕೆ ಏರಿದೆ.