ಬೆಂಗಳೂರು, ನ 5: ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದವು. ಇದರಿಂದ ದೇವೇಗೌಡರಿಗೆ ನಷ್ಟವಾಗಿಲ್ಲ. ರಾಜ್ಯದ ಜನತೆಗೆ ನಷ್ಟವಾಯಿತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಾಖ್ಯಾನಿಸಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ 14 ತಿಂಗಳ ಕೆಲಸದ ಬಗ್ಗೆ ಕಾಂಗ್ರೆಸ್ ಸ್ಮರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗೌಡರು ಲೋಕಸಭೆಯಲ್ಲಿ ಸೋತಿದ್ದಾಯಿತು. ಈಗ ಎರಡೂ ಪಕ್ಷಗಳೂ ದೇವೇಗೌಡರು ಈ ರಾಜ್ಯಕ್ಕೆ ಏನೂ ಸಾಧನೆ ಮಾಡಿಲ್ಲ ಎಂದು ಬಿಂಬಿಸಲು ಹೊರಟಿವೆ. ನೂರು ದಿನಗಳ ಸಾಧನೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮ ಮಾಡುತ್ತಿದ್ದಾರೆ. ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ದೇವೇಗೌಡರ ಕುಟುಂಬವನ್ನು ನಿಂದಿಸುವವರಿಗೆ, ಟೀಕೆ ಮಾಡುವವರಿಗೆ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಮೈತ್ರಿ ಸರ್ಕಾರದ 7,650 ರೂಪಾಯಿಗಳ ಕಾಮಗಾರಿ ಕೆಲಸ ನಿಲ್ಲಿಸಿದ್ದಾರೆ ಎಂದು ಟೀಕಸಿದರು. ಐ ಎಂ ಎ ಪ್ರಕರಣ ಪ್ರಸ್ತಾಪಿಸಿದ ರೇವಣ್ಣ , ಐ.ಎಂ .ಎ. ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ, ಐಎಂಎ ಫೈನಾನ್ಸ್ ಸೊಸೈಟಿ ಸೇರಿದಂತೆ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿಗಳ ನಷ್ಟ ಆಗಿದೆ, ಈವರೆಗೆ ಏನು ಕ್ರಮ ತೆಡೆದುಕೊಂಡಿದ್ದಾರೆಂದು ಯಡಿಯೂರಪ್ಪ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಸೌಹಾರ್ದ ಕಾಯಿದೆ ದುರುಪಯೋಗ ಆಗುತ್ತಿದೆ. ಕಣ್ವ ಹೂಡಿಕೆಗೆ ಸರ್ಕಾರದ ಹಣ ಬಳಕೆಯಾಗಿದೆ. ಸಿನ್ಸ್ ಗ್ರೂಪ್ನ 9 ಕೋಟಿ ಹಣ ದುರುಪಯೋಗ ಆಗಿದೆ ಈವರೆಗೂ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸರ್ಕಾರಿ ಕಾರ್ಖಾನೆಗಳಿಗೆ 1500-2000 ಕೋಟಿ ಸಾಲ ನೀಡಲಾಗಿದೆ. ಆದರೆ ಯಾವುದೇ ಖಾತ್ರಿ ಕೂಡ ಪಡೆದಿಲ್ಲ. 64 ತನಿಖೆಯಲ್ಲಿ ಇದೆಲ್ಲ ಆಡಿಟ್ ಆಗಿದೆ. ಈ ಎಲ್ಲಾ ಅವ್ಯವಹಾರಗಳನ್ನು ಮಾಡಲು, ಮೇಯಲು ಯಡಿಯೂರಪ್ಪ ತಮ್ಮವರನ್ನು ಬಿಟ್ಟಿದ್ದಾರೆ. ಈ ಬಗ್ಗೆ ತನಿಖೆನಡೆಸಿದ ಅಧಿಕಾರಿಗಳನ್ನು ಬೀದರ್ ಗೆ ವರ್ಗಾವಣೆ ಮಾಡಲಾಗಿದೆ ಎಂದು ವರ್ಗಾವಣೆ ಆದೇಶ ಪ್ರತಿಯನ್ನು ಪ್ರದರ್ಶಿಸಿದರು. ರೈತರು ಬೆಳೆದ ಜೋಳ ಮಧ್ಯವರ್ತಿಗಳ ಟೆಂಡರ್ ಪಾಲಾಗುತ್ತಿದೆ. ಕೆಎಂಎಫ್ ಕುರಿತು ತಾವು ಬತೆದ ಪತ್ರವನ್ನು ಯಡಿಯೂರಪ್ಪ ಕಸದ ಡಬ್ಬಕ್ಕೆ ಎಸೆಯುತ್ತಾರೆ. ಆದರೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ನಿಯಮ ಮೀರಿ ಅನುದಾನ ನೀಡುತ್ತಾರೆ. ಕೆ.ಆರ್.ಪೇಟೆಗೆ ತುರ್ತು ಕಾಮಗಾರಿಗೆ 10 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆ, 4 ಸಾವಿರ ಏಕರೆ ನೀರಾವರಿ ಯೋಜನೆಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಇದು ಯಡಿಯೂರಪ್ಪ 100 ದಿನಗಳ ಆಡಳಿತದ ಮಾದರಿ ಎಂದು ಲೇವಡಿ ಮಾಡಿದರು.