“ ಗುರು ಗೋವಿಂಧಭಟ್ಟರು ಮತ್ತು ಶರೀಫರ ಗುರುಶಿಷ್ಯ ಪರಂಪರೆ ”

 “ ಗುರು ಗೋವಿಂಧಭಟ್ಟರು ಮತ್ತು ಶರೀಫರ ಗುರುಶಿಷ್ಯ ಪರಂಪರೆ ” “The Guru-Shishya Tradition of Guru Govindbhatta and Sharif”


ಶಿಗ್ಗಾವಿ 25 : ಮನುಷ್ಯನನ್ನು ಮನುಷ್ಯನನ್ನಾಗಿ ನೋಡಲು ಹದವರಿತ ಪದಗಳನ್ನು ಸದಮಲ ಸುಜ್ಞಾನದಿಂದ ರಚಿಸಿ ಅಸಮಾನತೆಯ ಸಮಾಜವನ್ನು ಸಮಾನತೆಯತ್ತ ಕೊಂಡೊಯ್ಯವ ಕಾರ್ಯವನ್ನು ಶರೀಫರು ಬದುಕಿನಾದ್ಯಾಂತ ಮಾಡಿದರು. ಇವರ ಸಾಧನೆಯಲ್ಲಿ ಗುರು ಗೋವಿಂಧಬಟ್ಟರ ಪಾತ್ರ ದೊಡ್ಡದಿದ್ದು,  ಈ ಗುರುಶಿಷ್ಯ ಪರಂಪರೆಯ ಇತಿಹಾಸವೆ ರೋಚಕವಾಗಿದೆ. 

ಪಟ್ಟಭದ್ರಹಿತಾಸಕ್ತಿ ಮನುಷ್ಯರು, ಜಡಭೂತರು ಗುರುಶಿಷ್ಯ ಪರಂಪರೆಯಲ್ಲಿ ಜ್ಯಾತ್ಯಾತೀತ ಮನೋಭಾವದ ಬೆಳವಣಿಗೆಯನ್ನು ವಿರೋಧಿಸುತ್ತಾ ಬಂದಿದ್ದರೂ ಗೋವಿಂದಭಟ್ಟರು ಶರೀಫನನ್ನು ಶಿಷ್ಯನನ್ನಾಗಿಸಿಕೊಳ್ಳುವುದಕ್ಕೂ ಮುಂಚೆ  ನೂಲ್ವಿಯ ವೀರಶೈವ ಜಂಗಮರಾದ ಕುಮಾರಸ್ವಾಮಿಗಳು ಡೊಂಬರಜಾತಿಯ ಕಾಳಹಸ್ತಿಯನ್ನು ಶಿಷ್ಯನನ್ನಾಗಿ ಪಡೆದಿದ್ದರು. ಈ ಕಾಳಹಸ್ತಿಸ್ವಾಮಿಗಳು ಬ್ರಾಹ್ಮಣನಾದ ಭಿಷ್ಟಪ್ಪಯ್ಯನನ್ನು ಶಿಷ್ಯನನ್ನಾಗಿಸಿಕೊಂಡಿದ್ದರು. ಭಿಷ್ಟಪ್ಪಯ್ಯ ನೂಲ್ವಿಯಲ್ಲಿ ವಾಸವಿದ್ದು ಕಳಸದ ಗೋವಿಂದಭಟ್ಟ ಜೋಷಿಯನ್ನು ಶಿಷ್ಯನನ್ನಾಗಿಸಿಕೊಂಡಿದ್ದರು. ಶಕ್ತಿಯ ಆರಾಧಕನಾದ ಗೋವಿಂದ ಭಟ್ಟರು ಶರೀಫನನ್ನು ಶಿಷ್ಯನಾಗಿ ಸ್ವೀಕರಿಸಿ ಜನಿವಾರ ಹಾಕಿ ಬ್ರಹ್ಮೋಪದೇಶ ನೀಡಿ ಸಾಬನಿದ್ದ ಶರೀಫನನ್ನು ಸಾಂಬನನ್ನಾಗಿ ಮಾಡಿದರು.  

ಹುಲಗೂರಿನ ಹಜರೇಶಾ ಖಾದ್ರಿಯವರ ವರ​‍್ರಸಾದದಿಂದ ದೇವಕಾರ ಮನೆತನದ ಇಮಾಮಸಾಬ ಮತ್ತು ಹಜ್ಜೂಮಾ ಸತಿಪತಿಗಳ ಉದರದಿಂದ ಜನಿಸಿದ ಮೊಹಮ್ಮದ ಶರೀಫರು, ತಂದೆ ತಾಯಿಗಳಿಂದ ಉತ್ತಮ ಸಂಸ್ಕಾರ ಪಡೆದರು. ಶಿಶುವಿನಹಾಳ ಗ್ರಾಮದ ಹಿರೇಮಠದ ಶಾಲೆಯ ಸಿದ್ಧರಾಮಯ್ಯನವರಿಂದ ಅಕ್ಷರಾಭ್ಯಾಸದ ಜೊತೆಗೆ ವೀರಶೈವಧರ್ಮದ ತತ್ವ ಸಿದ್ಧಾಂತಗಳು, ಶರಣರ ಸಾಹಿತ್ಯ ಪುರಾಣ ಪುಣ್ಯಕತೆಗಳನ್ನು ಕಲಿತರು. ವಿಭೂತಿ ಬಸಯ್ಯನವರಿಂದ ಪ್ರಭುಲಿಂಗಲೀಲೆಯನ್ನು ಬೋಧಿಸಿಕೊಂಡರು. ಕಳಸ ಗ್ರಾಮದ ಗೋವಿಂದಭಟ್ಟ ಜೋಷಿಯವರು ಗುಡಗೇರಿಯ ಕಲ್ಮಠದಲ್ಲಿ ಅರ್ಚಕರಾಗಿಯೂ ಪಾಠಶಾಲೆಯನ್ನು ನಡೆಸುತ್ತಿದ್ದಾಗ ಅವರ ಶಿಷ್ಯತ್ವವನ್ನು ಶರೀಫರು ಪಡೆದರು. 

ಶರೀಫ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ದೊಡ್ಡಾಟ ಕಲಿಸುವಾಗ ಗೋವಿಂದರ ಕರುಳಿನ ಕೂಗು ಕೇಳಿ ಕಳಸ ಗ್ರಾಮಕ್ಕೆ ಬಂದರು. ನಿತ್ರಾಣಗೊಂಡಿದ್ದ ಗುರು ಗೋವಿಂದರು ಶರೀಫನಿಗೆ ಆಶೀರ್ವದಿಸಿ ಶಿಷ್ಯನಿಂದ ಗುರು ಸ್ಥಾನ ಕರುಣಿಸಿ ತಮ್ಮ ಕೈಯಲ್ಲಿನ ಬೆತ್ತವನ್ನು ಅವನಿಗೆ ಕೊಟ್ಟು ಕಣ್ತುಂಬಿ ಅವನನ್ನು ನೋಡುತ್ತ ದೇಹ ಬಿಟ್ಟರು. 

ದೇಹಬುದ್ದಿಯನ್ನು ಸರಿಸಿ, ಆತ್ಮಬುದ್ದಿ ಜಾಗೃತ ಮಾಡಿದ ವೃತ್ತಿಗಳನ್ನೇ ಜಾತಿಗಳೆಂದು ಪರಿಗಣಿಸಿದ ಜಡಭರಿತ ಸಮಾಜದ ಧಾರ್ಮಿಕ-ಸಾಮಾಜಿಕ ಜೀವನ ಅಸ್ತವ್ಯಸ್ಥವಾಗುತ್ತಿದ್ದ ಸಂದರ್ಭದಲ್ಲಿ ಗುರು ಗೋವಿಂಧ ಬಟ್ಟರು ಮತ್ತು ಶಿಷ್ಯ ಶರೀಫರ ಈ ಗುರುಶಿಷ್ಯ ಪರಂಪರೆ ಆದರ್ಶವಾಗಿ ಕಾಣುವ ಮೂಲಕ ಇಂದಿಗೂ ಮುಂದುವರೆದಿರುವುದನ್ನು ನಾವು ಕಾಣಬಹುದಾಗಿದೆ.