ವಿಶ್ವ ರೇಬಿಸ್ ದಿನಾಚರಣೆ: ಪ್ರಾಣಿಗಳು ಕಚ್ಚಿದಾಗ ತಕ್ಷಣ ಚಿಕಿತ್ಸೆ ಪಡೆಯಲು ಕರೆ

ವಿಶ್ವ ರೇಬಿಸ್ ದಿನಾಚರಣೆ: ಪ್ರಾಣಿಗಳು ಕಚ್ಚಿದಾಗ ತಕ್ಷಣ ಚಿಕಿತ್ಸೆ ಪಡೆಯಲು ಕರೆ  World Rabies Day: Call to seek immediate treatment after animal bites

ಲೋಕದರ್ಶನ ವರದಿ  

ಬಳ್ಳಾರಿ, ಸೆ. 29: ಸಾಕು ಅಥವಾ ಬೀದಿ ನಾಯಿಗಳು ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದಾಗ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ರಾಜೇಶ್ ಎನ್‌. ಹೊಸಮನೆ ಹೇಳಿದರು.  

ನಗರದ ಬಂಡಿಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ರೇಬಿಸ್ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರಾಣಿ ಕಚ್ಚಿದಾಗ ಗಾಯವನ್ನು ಸೋಪು ಹಾಗೂ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಬಳಿಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆಯಂತೆ ರೇಬಿಸ್ ನಿರೋಧಕ ಲಸಿಕೆ ಪಡೆಯಬೇಕು. ಈ ಮೂಲಕ ರೇಬಿಸ್ನ್ನು ತಡೆಗಟ್ಟುವುದರ ಜೊತೆಗೆ ಜೀವ ಉಳಿಸಬಹುದು. ಬಳ್ಳಾರಿಯನ್ನು ‘ರೇಬಿಸ್ ಮುಕ್ತ’ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.