ವಿಶ್ವ ಬ್ಯಾಂಕ್ ತಂಡದಿಂದ ನೀರು ಸರಬರಾಜು ಕಾಮಗಾರಿಗಳ ಪರೀಶೀಲನೆ

ವಿಶ್ವ ಬ್ಯಾಂಕ್ ತಂಡದಿಂದ  ನೀರು ಸರಬರಾಜು ಕಾಮಗಾರಿಗಳ ಪರೀಶೀಲನೆ World Bank team inspects water supply works


ಬೆಳಗಾವಿ, 06 : ವಿಶ್ವ ಬ್ಯಾಂಕ್ ನೆರವಿನಿಂದ ನಗರದಲ್ಲಿ ಅನುಷ್ಠಾನವಾಗುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿಗಳ ಕುರಿತು ವಿಶ್ವ ಬ್ಯಾಂಕ್ ತಂಡವು ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿ ಕಾಮಗಾರಿಗಳ ಪರೀಶೀಲನೆ ನಡೆಸಿತು.   ಈಗಾಗಲೇ ನಗರದಲ್ಲಿ ಅನುಷ್ಠಾನಗೊಂಡಿರುವ 24/7 ನೀರು ಸರಬರಾಜು ಪ್ರದೇಶಗಳಾದ ಕಾಕತಿ, ಆರ್‌.ಸಿ ನಗರ, ಮುತ್ಯಾನಟ್ಟಿ, ಚಿದಂಬರ ನಗರ, ಮೃತ್ಯುಂಜಯ ನಗರ, ಕೆ.ಹೆಚ್‌.ಬಿ ಕಣಬರಗಿ ಹಾಗೂ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿರುವ ಪ್ರದೇಶಗಳಾದ ಮೃತ್ಯುಂಜಯ ನಗರ, ಆಟೋ ನಗರ, ಚನ್ನಮ್ಮ ಸೊಸೈಟಿ, ಏಕಲವ್ಯ ನಗರ ಮುಂತಾದ ಪ್ರದೇಶಗಳ ಪೈಕಿ ವಿಶ್ವಬ್ಯಾಂಕ್ ತಂಡವು ಕಾಕತಿ ಮತ್ತು ಚಿದಂಬರ ನಗರಕ್ಕೆ ಭೇಟಿ ನೀಡಿ ಅನುಷ್ಠಾನಗೊಂಡಿರುವ ಮನೆ ನಳಗಳ ಸಂಪರ್ಕಗಳನ್ನು ಪರೀಶೀಲಿಸಿತು ಮತ್ತು ಗ್ರಾಹಕರೊಂದಿಗೆ ಸಮಾಲೋಚಿಸಿ ಯೋಜನೆಯ ಪ್ರಯೋಜನಗಳನ್ನು ಮತ್ತು ಒದಗಿರುವ ಅನುಕೂಲಗಳನ್ನು ತಿಳಿದುಕೊಂಡಿತು. ಒತ್ತಡ ಸಹಿತ ನಿರಂತರ ನೀರು ಸರಬರಾಜಿನಿಂದ ನಮಗೆ ಬಹಳ ಅನುಕೂಲವಾಗಿದೆ ನೀರಿಗಾಗಿ ಕಾಯುವಂತಹ ಪರಿಸ್ಥಿತಿ ಈಗಿಲ್ಲ ಯಾವಾಗಲಾದರೂ ನೀರನ್ನು ಪಡೆಯಬಹುದಾಗಿದೆ, ಈ ಮೊದಲು ನೀರಿಗಾಗಿ ಕಾಯುವಂತಹ ಪರಿಸ್ಥಿತಿ ಇತ್ತು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗಲು ತೊಂದರೆಯಾಗುತ್ತಿತ್ತು ಈಗ ಆ ಪರಿಸ್ಥಿತಿ ಇರುವುದಿಲ್ಲವೆಂದು ಗ್ರಾಹಕರು ಅಭಿಪ್ರಾಯ ಪಟ್ಟರು ಇದರಿಂದ ವಿಶ್ವ ಬ್ಯಾಂಕ್ ತಂಡವು ಫಿದಾ ಆಯಿತು.  ಬಸವನಕೊಳ್ಳದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 31 ಎಂ.ಎಲ್‌.ಡಿ, ಯ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರೀಶೀಲಿಸಿ ಪ್ರಗತಿ ಬಗ್ಗೆ ಸಂತೋಷ ವ್ಯಕ್ತಪಡಿಸಿತು ಅಲ್ಲದೆ ಪೈಪ್ ಲೈನ್ ಅಳವಡಿಸುವ ಕಾಮಗಾರಿಯಲ್ಲಿ ಅಂತರವನ್ನು ಮುಚ್ಚಿಸುವ ಭಾಗವಾದ ಅಶೋಕ ನಗರದಲ್ಲಿ ಕಠಿನ ಕಲ್ಲು ಬಂದಿರುವ ಪ್ರದೇಶಕ್ಕೆ ಭೇಟಿ ನೀಡಿ ಕಠಿನ ಕಲ್ಲನ್ನು ಒಡೆಯುವ ಕಾರ್ಯವನ್ನು ಪರೀಶೀಲಿಸಿತು ಈ ಕಾರ್ಯವು ಸುಮಾರು ತಿಂಗಳಿನಿಂದ ನಡೆಯುತ್ತಿರುವುದರ ಬಗ್ಗೆ ಮಾಹಿತಿಯನ್ನು ಪಡೆಯಿತು. ಈ ಭಾಗದಲ್ಲಿ ಕಠಿನ ಕಲ್ಲು ಇರುವುದರಿಂದ ಪೈಪ್ ಅಳವಡಿಸಲು ತೀವ್ರ ತೊಂದರೆ ಮತ್ತು ಸಮಯ ತೆಗೆದುಕೊಳ್ಳಿರುವುದರ ಬಗ್ಗೆ ವಿಶ್ವಬ್ಯಾಂಕ್ ತಂಡವು ಪ್ರದೇಶಕ್ಕೆ ಭೇಟಿ ನೀಡುವುದರ ಮೂಲಕ ಅಲ್ಲಿಯ ತೊಂದರೆಗಳನ್ನು ಮನವರಿಕೆ ಮಾಡಿಕೊಂಡಿತು. ಅದೇ ರೀತಿ ಎಸ್‌.ಪಿ, ಕ್ವಾರ್ಟರ್ಸ ನಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್‌ಗೆ ಭೇಟಿ ನೀಡಿ ಅಲ್ಲಿಯೂ ಕೂಡಾ ಕಠಿನ ಕಲ್ಲು ಇರುವುದರ ಮಧ್ಯಯೂ ಟ್ಯಾಂಕ್ ನಿರ್ಮಾಣಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿತು.  ತದನಂತರ ಎಲ್ಘ್‌ಟಿ, ಯ ಬಿಲ್ಲಿಂಗ್ ಕೋಶಕ್ಕೆ ಭೇಟಿ ನೀಡಿ ಗ್ರಾಹಕರಿಗೆ ಯಾವ ರೀತಿ ಬಿಲ್ಲನ್ನು ಒದಗಿಸಲಾಗುತ್ತಿದೆ ಮೀಟರ್ ಮಾಪಕ ಬಿಲ್ಲಗಳನ್ನು ಹೇಗೆ ವಿತರಿಸಲಾಗುತ್ತಿದೆ ಮತ್ತು ಪ್ರತಿ ತಿಂಗಳು ಎಷ್ಟು ನೀರಿನ ಕರವನ್ನು ವಸೂಲು ಮಾಡಲಾಗುತ್ತಿದೆ ಎಂದೆಲ್ಲ ಮಾಹಿತಿಯನ್ನು ಪಡೆಯಿತು. 

ಕೇಂದ್ರೀಕೃತ ನಿಯಂತ್ರಣ ಕೇಂದ್ರಕ್ಕೆ (ಸಿ.ಸಿ.ಸಿ) ಭೇಟಿ ನೀಡಿ ಗ್ರಾಹಕರ ದೂರುಗಳು, ಅದರ ವಿಧಗಳು ಮತ್ತು ಪರಿಹರಿಸಲಾಗುವ ಕ್ರಮಗಳು, ಅವಧಿ ಹಾಗೂ ಗ್ರಾಹಕರ ಹಿಮ್ಮಾಹಿತಿ ಪಡೆಯುವ ವಿಧಾನ ಮತ್ತು ಸಿ.ಆರ್‌.ಎಂ, ಸಿಸ್ಟಮ್‌ನಲ್ಲಿ ಅನುಸರಿಸುವ ವಿಧಾನ ಈ ವರೆಗೆ ಧಾಖಲಾಗಿರುವ ದೂರುಗಳ ಸಂಖ್ಯೆ ಮತ್ತು ಪರಿಹರಿಸಲಾಗಿರುವ ದೂರುಗಳ ಸಂಖ್ಯೆಗಳ ಬಗ್ಗೆ ಮಾಹಿತಿ ಪಡೆಯಿತು. ಅಲ್ಲದೇ ಟೋಲ್‌ಪ್ರೀ ನಂಬರ್ 18004255656ಅನ್ನು ಗ್ರಾಹಕರ ಬಿಲ್ಲಿನಲ್ಲಿ ಮುದ್ರಿತವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿತು. ಒಟ್ಟಾರೆ ನೀರು ಸಂಬಂಧಿತ ದೂರುಗಳಿಗಾಗಿ ಸಿ.ಸಿ.ಸಿ, ನಿರ್ಮಾಣದ ಕುರಿತು ಮತ್ತು ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. 

ಇದಲ್ಲದೇ, 24/7 ನೀರು ಸರಬರಾಜು ಇಲ್ಲದ ಪ್ರದೇಶದಲ್ಲಿ ಯಾವ ರೀತಿ ನೀರು ಸರಬರಾಜಾಗುತ್ತಿದೆ ಎಂಬ ಮಾಹಿತಿಯನ್ನು ಸದಾಶಿವ ನಗರಕ್ಕೆ ಭೇಟಿ ನೀಡಿ ಗ್ರಾಹಕರೊಂದಿಗೆ ಚರ್ಚಿಸಲಾಯಿತು ಅಲ್ಲಿಯ ಗ್ರಾಹಕರೂ ಕೂಡಾ ಮೊದಲು 06 ದಿನಕ್ಕೊಮ್ಮೆ ನೀರು ಬರುತ್ತಿತ್ತು ಈಗ 04 ದಿನಕ್ಕೊಮ್ಮೆ 03 ತಾಸು ನೀರು ಬರುತ್ತಿದೆ ಇದರಿಂದ ನಮ್ಮ ಕುಟುಂಬಕ್ಕೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸಲು ಅನುಕೂಲವಾಗಿದೆ ಎಂದು ವಿವರಿಸಿದರು, ವಿಶ್ವಬ್ಯಾಂಕ್ ತಂಡವು ನಿಮಗೆ ಪ್ರತಿದಿನ ನೀರು ಒದಗಿಸಿದರೆ ಹೇಗಿರುತ್ತದೆ ಎಂದಾಗ ಗ್ರಾಹಕರು ಅತೀ ಸಂತೋಷದಿಂದ ಇನ್ನೂ ಒಳ್ಳೆಯದಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಚಿದಂಬರ ನಗರದಲ್ಲಿ ಉಪ ಮಹಾಪೌರರ ವಾರ್ಡನಲ್ಲಿ ವಿಶ್ವಬ್ಯಾಂಕ್ ತಂಡವು ಮನೆ ಮನೆ ನಳ ಸಂಪರ್ಕಗಳನ್ನು ಪರೀಶೀಲಿಸಿತು. ಮತ್ತು ಉಪ ಮಹಾಪೌರರ ಹಾಗೂ ಗ್ರಾಹಕರ ಅಭಿಪ್ರಾಯಗಳನ್ನು ಪಡೆಯಿತು. ಈ ಮೊದಲು ಅಂದರೆ 15 ವರ್ಷಗಳ ಹಿಂದೆ ಈ ಭಾಗಕ್ಕೆ 24/7 ನೀರು ಸರಬರಾಜು ಮಾಡುವ ಯೋಜನೆಯನ್ನು ತಂದಾಗ ಜನರೇ ಅದನ್ನು ತಿರಸ್ಕರಿಸಿದ್ದರು ಪರಿಣಾಮವಾಗಿ ನೀರಿನ ಟ್ಯಾಂಕರ್ ಹಾಕಿಸಿಕೊಳ್ಳಲು ಪ್ರತಿ ತಿಂಗಳು ರೂ.1,200/-ಗಳನ್ನು ವ್ಯಯಿಸಿರುವುದನ್ನು ಜನ ನೆನಪಿಸಿಕೊಂಡರು ಆದರೆ ಇದೀಗ 24/7 ನಿರಂತರ ನೀರು ತಮ್ಮ ವಾರ್ಡಿಗೆ ಬಂದಿರುವುದರಿಂದ ಮತ್ತು ಒತ್ತಡ ಸಹಿತ ನೀರು ದೊರಕುತ್ತಿರುವುದರಿಂದ ತಮಗೆ ಅತೀವ ಸಂತೋಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ವಿಶ್ವಬ್ಯಾಂಕ್ ತಂಡವು ಭಾರತದಲ್ಲಿ 24/7 ಅನುಷ್ಠಾನ ಮಾಡುವುದರಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಅದರಲ್ಲೂ ಬೆಳಗಾವಿ ಪ್ರಥಮ ನಗರವಾಗಿದೆ ಆದ್ದರಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಗೊಳ್ಳಲು ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರ ಅತೀ ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು. ತರುವಾಯ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ. ಬಿ. ಶುಭಾ ರವರೊಂದಿಗೆ ವಿಶ್ವಬ್ಯಾಂಕ್ ತಂಡವು ಯೋಜನೆಯ ಪ್ರಗತಿ ಪರೀಶೀಲನೆಯನ್ನು ನಡೆಸಿತು.   

ಎರಡು ದಿನಗಳ ನಗರ ಭೇಟಿ ಕಾರ್ಯಕ್ರದಲ್ಲಿ ವಿಶ್ವಬ್ಯಾಂಕ್ ತಂಡದ ಪ್ರತಿನಿಧಿಗಳಾದ ರಾಜೇಶ ಅದ್ವಾನಿ, ಆನಂದ ಜಲ್ಕಮ್ ಮತ್ತು ಡಿ.ಕೆ.ಡಿ. ರಾಜಾ ಹಾಗೂ ಕೆ.ಯು.ಐ.ಡಿ.ಎಫ್‌.ಸಿ, ಕೇಂದ್ರ ಕಛೇರಿಯ ಅಧಿಕಾರಿಗಳಾದ ಸೋಮಶೇಖರ​‍್ಪ.ಎ.ಟಿ, ಕ್ಯಾಪ್ಟನ್‌.ಶಂಭು ಭಟ್, ಎಂ. ಅಂಜನಪ್ಪ, ವಾಣಿಶ್ರೀ ಹಾಗೂ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳಾದ ಲಕ್ಷ್ಮಿ ಸುಳಗೇಕರ್, ಎಸ್‌.ಎಸ್‌.ಹತ್ತಿ, ಸುಭಾಷ ಭಾಜನ್ನವರ, ವಿಜಯಾನಂದ ಸೊಲಾಪುರ ಹಾಗೂ ಸಾಮಾಜಿಕ ಮತ್ತು ತಾಂತ್ರಿಕ ವಿಭಾಗದ ಅಧಿಕಾರಿಗಳು ಎಲ್ಘ್‌ಟಿ, ಯ ನಾಗರಾಜ ಸೊಗಲೆ, ಧೀರಜ ಉಭಯಕರ್ ಹಾಗೂ ತಾಂತ್ರಿಕ ಮತ್ತು ಸಾಮಾಜಿಕ ಸಿಬ್ಬಂದಿಗಳು ಮೆ// ಸ್ಮೆಕ್ ಇಂಟರ್‌ನ್ಯಾಷನಲ್ ಪ್ರೈ.ಲಿ, ನ ತಂಡದ ನಾಯಕರಾದ ಎಂ.ಕೆ.ಮನಗೊಂಡ ಹಾಗೂ ಸಿಬ್ಬಂದಿಗಳು ನೆರವು ಸಂಸ್ಥೆಯ ತಂಡದ ನಾಯಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.