ಲಕ್ನೋ 23: ದೇವಾಲಯ ನಗರವಾದ ಅಯೋಧ್ಯೆಯ ಸರಯೂ ನದಿಯ ದಡದ ಬಳಿ 251 ಮೀಟರ್ ಎತ್ತರದ ರಾಮನ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
100 ಎಕರೆ ಭೂಮಿಯಲ್ಲಿ ಇತರ ಸೌಲಭ್ಯಗಳೊಂದಿಗೆ ಸ್ಥಾಪಿಸಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಇದಾಗಿದೆ ಎಂದು ಸೋಮವಾರ ರಾತ್ರಿ ಇಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಪ್ರಕಟಿಸಿದರು. ರಾಮನ ಕಂಚಿನ ಪ್ರತಿಮೆಯ ಜೊತೆಗೆ, ಈ ಪ್ರದೇಶದಲ್ಲಿ ರಾಮನ ಜೀವನ ಚರಿತ್ರೆ, ವ್ಯಾಖ್ಯಾನ ಕೇಂದ್ರ, ಗ್ರಂಥಾಲಯ, ಆಹಾರ ಕೇಂದ್ರ, ಪಾಕರ್ಿಂಗ್, ಭೂದೃಶ್ಯ ಮತ್ತು ಇತರ ಪ್ರವಾಸಿ ಸೌಲಭ್ಯಗಳ ಕುರಿತ ಡಿಜಿಟಲ್ ವಸ್ತುಸಂಗ್ರಹಾಲಯ ಇರುತ್ತದೆ.
ಕಾನ್ಪುರ ಐಐಟಿ, ಭೂಕಂಪ ಮತ್ತು ಪರಿಸರ ಮೌಲ್ಯಮಾಪನದೊಂದಿಗೆ ಭೌಗೋಳಿಕ ಮತ್ತು ಜಲವಿಜ್ಞಾನದ ಸಮೀಕ್ಷೆಯನ್ನು ಮಾಡುತ್ತದೆ ಮತ್ತು ಕಾರ್ಯಸಾಧ್ಯತಾ ವರದಿಯನ್ನು ನೀಡುತ್ತದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದಶರ್ಿ ಅವನೀಶ್ ಅವಸ್ಥಿ ಖಚಿತಪಡಿಸಿದ್ದಾರೆ.
ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ , ಗುಜರಾತ್ ಸರ್ಕಾರದಿಂದ ತಾಂತ್ರಿಕ ನೆರವು ಪಡೆಯುತ್ತದೆ. ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಆದಿತ್ಯನಾಥ್ ಹೇಳಿದರು. ಈ ಮಧ್ಯೆ, ಪ್ರತಿಮೆ ಸ್ಥಾಪಿಸಲು ಮುಖ್ಯಮಂತ್ರಿ ನೇತೃತ್ವದ ಟ್ರಸ್ಟ್ ರಚಿಸಲು ನಿರ್ಧರಿಸಲಾಗಿದೆ.