ಕಾರ್ಯಾಗಾರಗಳು ಜ್ಞಾನ ನೀಡುವ ಪ್ರಮುಖ ಸಾಧನಗಳಾಗಿವೆ

ಕಾರ್ಯಾಗಾರಗಳು ಜ್ಞಾನ ನೀಡುವ ಪ್ರಮುಖ ಸಾಧನಗಳಾಗಿವೆ Workshops are important tools for imparting knowledge

ವಿಜಯಪುರ  08:  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯಗಳು ಮತ್ತು ವ್ಯಕ್ತಿತ್ವ ಅಭಿವೃದ್ಧಿ ವಿದ್ಯಾರ್ಥಿಗಳ ಯಶಸ್ವಿ ಭವಿಷ್ಯಕ್ಕಾಗಿ ಅತ್ಯಂತ ಅವಶ್ಯಕ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು. 

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ  ಹಾಗೂ ಸ್ನಾತಕ ಅಧ್ಯಯನ ವಿಭಾಗದ  ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ, ಬೆಂಗಳೂರು ಇವರ ಅನುದಾನದ ಅಡಿಯಲ್ಲಿ ‘ಸಂವಹನ ಕೌಶಲ್ಯಗಳು, ವ್ಯಕ್ತಿತ್ವ ಅಭಿವೃದ್ಧಿ, ವೃತ್ತಿ ಮಾರ್ಗದರ್ಶನಕ್ಕಾಗಿ ಮನೋವೈಜ್ಞಾನಿಕ ಪರಾಮರ್ಶೆ’ ಎಂಬ ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಕಾರ್ಯಾಗಾರಗಳು ಜ್ಞಾನ ನೀಡುವ ಪ್ರಮುಖ ಸಾಧನಗಳಾಗಿವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕೌಶಲ್ಯಗಳು ಮತ್ತು ವ್ಯಕ್ತಿತ್ವ ಅಭಿವೃದ್ಧಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ತಕ್ಕ ವೃತ್ತಿ ಆಯ್ಕೆಗಾಗಿ ಮನೋವೈಜ್ಞಾನಿಕ ಪರಾಮರ್ಶೆ ಯುವಕರಿಗೆ ತಮ್ಮ ಸಾಮರ್ಥ್ಯ ಹಾಗೂ ಆಸಕ್ತಿಗಳನ್ನು ತಿಳಿದುಕೊಳ್ಳಲು ಮಾರ್ಗದರ್ಶಕವಾಗುತ್ತದೆ ಎಂದರು. 

ಕಾರ್ಯಾಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಮೇಶ್ ಚಂದ್ರಹಾಸ ಮಾತನಾಡಿ, ಕಲಿಕೆಯ ಮನೋಭಾವ, ಸಕಾರಾತ್ಮಕ ಚಿಂತನೆ, ಶಿಸ್ತು, ನೈತಿಕ ಮೌಲ್ಯಗಳು ಮತ್ತು ನಿರಂತರ ಸ್ವವಿಕಾಸಕ್ಕೆ ನೀವು ಸ್ವತಃ ಬದ್ಧರಾಗಿ. ನಿಮ್ಮ ಗುರಿ ಎಷ್ಟೇ ದೊಡ್ಡದ್ದಾಗಿರಲಿ ದೃಢ ಮನಸ್ಸು, ಸರಿಯಾದ ನಿಲುವು ಮತ್ತು ಸುಧಾರಿತ ವ್ಯಕ್ತಿತ್ವ ನಿಮ್ಮನ್ನು ಯಶಸ್ಸಿನ ದಾರಿಯಲ್ಲಿ ನಡೆಸುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಬೊಮ್ಮನವರ್ ಮಾತನಾಡಿ, ಇಂದಿನ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸಂವಹನ ಕೌಶಲ್ಯಗಳು ಕೇವಲ ಒಂದು ಸಾಮಾನ್ಯ ಕೌಶಲ್ಯವಲ್ಲಶ್ರಿಯಶಸ್ಸಿನ ಮೂಲಭೂತ ಅವಶ್ಯಕತೆಯಾಗಿವೆ ಎಂದರು. 

ಕಾರ್ಯಾಗಾರದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮನೋವಿಜ್ಞಾನ ವಿಭಾಗ ಸಹ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಅನಕಲ್ ಮಾತನಾಡಿ, ನಿಮ್ಮ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗು ನಿಮ್ಮ ವೃತ್ತಿ ಜೀವನದ ದಿಕ್ಕನ್ನು ಜಾಣ್ಮೆಯಿಂದ ಆಯ್ಕೆ ಮಾಡುವುದು ನಿಮ್ಮ ಭವಿಷ್ಯದ ಅತ್ಯಂತ ದೊಡ್ಡ ಹೂಡಿಕೆ. ಸಹಾಯ ಕೇಳುವುದು ದುರ್ಬಲತೆ ಅಲ್ಲ ಅದು ಬೆಳೆಯಲು ಬೇಕಾದ ಬಲ. ಮನೋವೈಜ್ಞಾನಿಕ ಪರಾಮರ್ಶೆ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ; ವೃತ್ತಿ ಮಾರ್ಗದರ್ಶನ ನಿಮ್ಮನ್ನು ಸರಿಯಾದ ಭವಿಷ್ಯದತ್ತ ಕರೆದೊಯ್ಯುತ್ತದೆ ಎಂದು ಹೇಳಿದರು. ಕಾರ್ಯಾಗಾರದ ಸಂಯೋಜಕ ಡಾ. ಚಂದ್ರಶೇಖರ್ ಮಠಪತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.