ವೃತ್ತಿ -ವೈಯಕ್ತಿಕ ಜೀವನದ ಸಮತೋಲನ ಅಗತ್ಯ: ಪ್ರೊ. ವಿಜಯಾ ಕೋರಿಶೆಟ್ಟಿ
Work-life balance is essential: Prof. Vijaya Korishetty
ವೃತ್ತಿ -ವೈಯಕ್ತಿಕ ಜೀವನದ ಸಮತೋಲನ ಅಗತ್ಯ: ಪ್ರೊ. ವಿಜಯಾ ಕೋರಿಶೆಟ್ಟಿ
ವಿಜಯಪುರ 16: ವೃತ್ತಿ ಮತ್ತು ವೈಯಕ್ತಿಕ ಜೀವನದ ಸಮತೋಲನ ಅಗತ್ಯ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ (ಪಿಎಮ್ -ಉಷಾ) ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಬೆಂಗಳೂರು ಇವರ ಹಣಕಾಸು ನೆರವಿನೊಂದಿಗೆ ಬುಧವಾರ ಆಯೋಜಿಸಿದ್ದ ‘ಉದ್ಯೋಗನಿರತ ಮಹಿಳೆಯರ ಕೆಲಸ-ಜೀವನ ಸಮತೋಲನ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವೇಗದ ಜಗತ್ತಿನಲ್ಲಿ ಕೆಲಸ ಮತ್ತು ಜೀವನದ ಸಮತೋಲನ ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ವೃತ್ತಿನಿರತ ಮಹಿಳೆಯರು ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಬೇಡಿಕೆಗಳು ಮತ್ತು ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸುವ ಕಲೆ ಅರಿತುಕೊಳ್ಳಬೇಕಾಗಿದೆ. ಇಂದಿನ ಬಹುತೇಕ ಕ್ಷೇತ್ರಗಳಲ್ಲಿ ಕೆಲಸದ ಒತ್ತಡ ಸಾಮಾನ್ಯವಾಗಿದ್ದು, ಅದನ್ನು ಕಡಿಮೆ ಮಾಡಲು ಸಮಯದ ವಿನಿಯೋಗ, ಆದ್ಯತೆಗಳ ನಿರ್ಧಾರ, ಕೆಲಸದ ನಡುವಿನ ವಿರಾಮ, ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಕೆಲಸದ ಯೋಜನೆ ಮತ್ತು ಸ್ವಯಂ ಕಾಳಜಿಯಂತಹ ಅಂಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಇವುಗಳ ಮೂಲಕ ಮಹಿಳೆಯರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನವನ್ನು ಸಾಧಿಸಬಹುದು ಎಂದರು. ವಿಜಯಪುರದ ಬಿ.ಎಮ್. ಪಾಟೀಲ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಸಂತೋಷ ರಾಮದುರ್ಗ ಮಾತನಾಡಿ, ಅತಿಯಾದ ಒತ್ತಡದಿಂದ ಮಹಿಳೆಯರು ಆಕ್ರಮಣಕಾರಿ ಮನೋಭಾವ, ಹತಾಶೆ, ಖಿನ್ನತೆ, ರಕ್ತಹೀನತೆ, ಹಾಗೂ ಕೆಲಸದ ನಿರಾಸಕ್ತಿ ಮನೋಸ್ಥಿತಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದರು. ಸಮಾಜಕಾರ್ಯ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಎಸ್.ಎ.ಖಾಾಜಿ ಮಾತನಾಡಿ, ಮಹಿಳೆಯರ ಒತ್ತಡವು ಅವರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂತಹ ಒತ್ತಡವು ಆತಂಕ, ಕಿರಿಕಿರಿ ಹಾಗೂ ಮನೋಭಾವದ ಬದಲಾವಣೆಗಳಿಗೆ ಕಾರಣವಾಗುತ್ತದೆ. ಒತ್ತಡವನ್ನು ನಿಭಾಯಿಸಲು ಸ್ವಯಂ ಆರೈಕೆಯ ಚಟುವಟಿಕೆಗಳನ್ನು ಅಭ್ಯಾಸ ಮಾಡುವುದು, ಸಾಮಾಜಿಕ ಬೆಂಬಲವನ್ನು ಪಡೆಯುವುದು, ಸಮಯ ನಿರ್ವಹಣೆ ಹಾಗೂ ಅಗತ್ಯವಿದ್ದಾಗ ವೃತ್ತಿಪರರ ಸಹಾಯ ಮತ್ತು ಆಪ್ತಸಮಾಲೋಚನೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದರು. ಡಿಮೆನ್ಸ್ ಸಂಸ್ಥೆಯ ಮನೋವೈದ್ಯಕೀಯ ಸಮಾಜಕಾರ್ಯಕರ್ತ ಪ್ರಶಾಂತ ಪಾಟೀಲ ಮಾತನಾಡಿ, ಇಂದಿನ ದೈನಂದಿನ ಒತ್ತಡದ ಜೀವನದಲ್ಲಿ ನಾವು ನಮ್ಮ ಬಗ್ಗೆ ಸ್ವಲ್ಪ ಸಮಯ ಮೀಸಲಿಟ್ಟು ಸ್ವ-ಆರೈಕೆ ಮತ್ತು ಸ್ವ-ಅರಿವು ಮಾಡಿಕೊಳ್ಳುವುದು ಅತ್ಯಾವಶ್ಯಕ. ದೈಹಿಕ ಹಾಗೂ ಭಾವನಾತ್ಮಕವಾಗಿ ನಮಗೆ ಸಮಯ ನೀಡದಿದ್ದರೆ, ಅದು ನಮ್ಮ ಆರೋಗ್ಯ ಮತ್ತು ಮನಸ್ಥಿತಿಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭಗಳಲ್ಲಿ ವ್ಯಕ್ತಿಯು ಉತ್ತಮ ಯೋಗಕ್ಷೇಮವನ್ನು ಹೊಂದಲು ಸಾಧ್ಯವಿಲ್ಲ ಎಂದರು. ಪ್ರೊ.ಎಸ್.ಬಿ.ಮಾಡಗಿ, ಡಾ.ಕಲಾವತಿ ಎಚ್ ಕಾಂಬಳೆ, ಡಾ.ರಮೇಶ ಎಮ್ ಸೋನಕಾಂಬಳೆ, ಶರಣಬಸು ಕೊಡಬಾಗಿ. ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಬಿ.ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಶಿವಲಿಂಗ ಎಸ್ ಮೇತ್ರಿ ಸ್ವಾಗತಿಸಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 