ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಸುಧಾರಣೆಗೆ ಶ್ರಮ ವಹಿಸಿ: ಅಧಿಕಾರಿಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೂಚನೆ

ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಸುಧಾರಣೆಗೆ  ಶ್ರಮ ವಹಿಸಿ: ಅಧಿಕಾರಿಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೂಚನೆ Work hard to improve SSLC results: ZP CEO Rishi Anand instructs officials

          ವಿಜಯಪುರ  10: ಅಗತ್ಯ ಯೋಜನೆ ರೂಪಿಸಿಕೊಂಡು ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಸುಧಾರಣೆಗಾಗಿ ಎಲ್ಲರೂ ಶ್ರಮಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಎಲ್ಲ ವಿಷಯಗಳ ಪಠ್ಯಕ್ರಮ ಪೂರ್ಣಗೊಳಿಸಿ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ, ಉತ್ತರ ಬರೆಸುವ ಮೂಲಕ ದಾಖಲೆಗಳನ್ನು ನಿರ್ವಹಿಸುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಜನವರಿ ಮಾಹೆಯಲ್ಲಿ ಎಲ್ಲಾ ವಿಷಯಗಳ ಪಾಠಗಳನ್ನು ಶಿಕ್ಷಕರು ಪುನರ್ ಬೋಧನೆ ಮಾಡಬೇಕು. ಮಹತ್ವದ ಕಲಿಕಾ ಅಂಶಗಳನ್ನು ಮಕ್ಕಳಿಗೆ ಪುನರ್ ಮನನ ಮಾಡಿಸಬೇಕು. ರಸಪ್ರಶ್ನೆ ಕಾರ್ಯಕ್ರಮ, ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಮಕ್ಕಳ ಬರಹಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿದಿನ ಶಾಲೆಗೆ ಭೇಟಿ ನೀಡಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಮೇಲುಸ್ತುವಾರಿ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.   

ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ವಿಶೇಷ ತರಗತಿ, ಗುಂಪು ಅಧ್ಯಯನಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು. ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕನ್ನಡ, ಇಂಗ್ಲೀಷ್, ವಿಜ್ಞಾನ ಬೋಧನೆ ಮಾಡುತ್ತಿದ್ದರೆ ಬೇರೆ ಬೇರೆ ಶಾಲೆಗಳ ಶಿಕ್ಷಕರಿಂದ ವಿಶೇಷ ತರಗತಿ ಆಯೋಜನೆ ಮಾಡಲು ತಿಳಿಸಿದರು. ಬುನಾದಿ ಸಾಕ್ಷರತೆ ಮತ್ತು ಗಣಿತದ ಮೂಲ ಕಲಿಕೆಯ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ ಪರಿಣಾಮಕಾರಿಯಾಗಿ  ಅನುಷ್ಠಾನಗೊಳಿಸಿ ಜಿಲ್ಲೆಯ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಯೋಜನಾ ಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಡಿಡಿಪಿಐ ಸೇರಿದಂತೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.