ಮಹಿಳೆಯರನ್ನು ಸಮಾಜದಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ಕರೆತರಬೇಕಿದ

ಮಹಿಳೆಯರನ್ನು ಸಮಾಜದಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ಕರೆತರಬೇಕಿದ Women should be brought into the mainstream by creating awareness in society

ಲೋಕದರ್ಶನ ವರದಿ 

        ಹಾನಗಲ್ 08 :ಕಾಲ ಬದಲಾಗಿದ್ದು, ಜೀವನ ನಿರ್ವಹಣೆ ದುಬಾರಿಯಾಗಿದೆ. ಇಂಥ ಸಂದರ್ಭದಲ್ಲಿ ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸದೇ ಸಮಾಜದಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ಕರೆತರಬೇಕಿದೆ. ಅಂದಾಗ ಮಾತ್ರ ಪ್ರತಿಯೊಂದು ಕುಟುಂಬಗಳು ಆರ್ಥಿಕವಾಗಿ ಸಶಕ್ತವಾಗಲು ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

       ಶನಿವಾರ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ವ್ಯಸನಮುಕ್ತ ಕೇಂದ್ರದ ಸಭಾಭವನದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಆದರ್ಶ ತಾಲೂಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯರನ್ನು ಗೌರವಿಸಿ ಅವರನ್ನು ತಾಯಿಯ ಸ್ವರೂಪದಲ್ಲಿ ಕಾಣುವ ಅಗತ್ಯವಿದೆ. ಮಹಿಳೆಯರನ್ನು ಗೌರವಿಸುವ ಸಮಾಜವೇ ಪ್ರಗತಿಪರ ಸಮಾಜ ಎನಿಸಲಿದೆ.

       ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಶಿಕ್ಷಣ, ರಾಜಕೀಯ, ವಿಜ್ಞಾನ, ಕ್ರೀಡೆ, ಉದ್ಯಮ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಹ ಉತ್ತಮ ಸಾಧನೆ ತೋರುತ್ತಿದ್ದಾರೆ ಎಂದು ಹೇಳಿದ ಅವರು ಮಹಿಳೆಯರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಪ್ರತಿ ತಿಂಗಳು 6 ಸಾವಿರ ರೂ.ವರೆಗೆ ಆರ್ಥಿಕ ನೆರವು ಕಲ್ಪಿಸುತ್ತಿದೆ ಎಂದರು. 

       ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್ ಮಾತನಾಡಿ, ಮನೆಗೆ ತಾಯಿ ಬೆಳಕಾದರೆ ಸಮಾಜಕ್ಕೆ ಮಹಿಳೆ ಬೆನ್ನೆಲುಬು. ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಗೌರವಕ್ಕಾಗಿ ಮಹಿಳಾ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯರಲ್ಲಿಯೂ ಸಹ ಪ್ರತಿಭೆ, ಸಾಮರ್ಥ್ಯ ಅಡಗಿದೆ. ಅದನ್ನು ಅರಿತು ಮುಂದೆ ಬರಬೇಕಿದೆ. ಕುಟುಂಬದ ಆಧಾರಸ್ತಂಭವಾಗಿರುವ ಮಹಿಳೆ ತಾಯಿ, ಸಹೋದರಿ, ಪತ್ನಿ, ಮಗಳಾಗಿ ಸಮಾಜವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾಳೆ ಎಂದರು. 

       ಅಧ್ಯಕ್ಷತೆ ವಹಿಸಿದ್ದ ಸಿಸ್ಟರ್ ಸ್ಟೆಲ್ಲಾ ಸಲ್ಡಾನ್ಹಾ ಮಾತನಾಡಿ, ರೋಶನಿ ಸಮಾಜ ಸೇವಾ ಸಂಸ್ಥೆ ಕಳೆದ ಹಲವು ದಶಕಗಳಿಂದ ಮಹಿಳೆಯರ ಹಕ್ಕುಗಳಿಗೆ ಹೋರಾಟ ನಡೆಸುತ್ತಿದೆ. ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ರೂಪಿಸಲು ಮಾರ್ಗ ತೋರಿಸುತ್ತಿದೆ. ಕೌಶಲ್ಯ ಅಭಿವೃದ್ಧಿ ಪಡಿಸಿ ಸಾಕಷ್ಟು ಅವಕಾಶಗಳನ್ನು ದೊರಕಿಸುತ್ತಿದೆ ಎಂದರು. 

        ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ, ಆದರ್ಶ ತಾಲೂಕಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಾ ಗೋಣಿಬಸಣ್ಣನವರ, ಪ್ರಗತಿಪತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎನ್‌.ಎಂ.ಪೂಜಾರ, ಹಾನಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಇದ್ದರು.