ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಪ್ರಮುಖ: ಡಾ.ಪ್ರಿಯಾಂಕಾ

Women's role is important in building a strong society: Dr. Priyanka

ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಪ್ರಮುಖ: ಡಾ.ಪ್ರಿಯಾಂಕಾ  

ತಾಳಿಕೋಟಿ, 18; ಸಮಾಜದಲ್ಲಿ ಮಹಿಳೆಯರ ಪಾತ್ರ ಅಪಾರ, ಇಂದು ಅವಳು ಎಲ್ಲಾ ಕ್ಷೇತ್ರದಲ್ಲಿ ಪುರುಷನಿಗೆ ಸಮಾನವಾಗಿ ನಿಂತಿದ್ದಾಳೆ. ಸಮಾಜದಲ್ಲಿ ತನ್ನದೇ ಆದ ಚಾಪು ಮೂಡಿಸಿ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ರಂಗದಲ್ಲಿ ಗಣನೀಯವಾದ ಸಾಧನೆಯನ್ನು ಮಾಡಿದ್ದಾಳೆ, ಒಂದು ಸುಂದರ ಕುಟುಂಬ ಹಾಗೂ ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ಅವಳ ಪಾತ್ರ ಪ್ರಮುಖವಾಗಿದೆ ಎಂದು ಡಾ. ಪ್ರಿಯಾಂಕಾ ಸಂಗನಗೌಡರ ಹೇಳಿದರು. ಮಂಗಳವಾರ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಕದಳಿ ವೇದಿಕೆ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ  ಅವರು ಮಾತನಾಡಿ ಮಹಿಳೆಯರಾದ ನಮಗೆ ಕೆಲವು ಮುಖ್ಯ ಜವಾಬ್ದಾರಿಗಳಿವೆ, ಮಕ್ಕಳ ಪೋಷಣೆ ಅವರ ತರಬೇತಿ ನಮ್ಮ ಹೊಣೆಯಾಗಿದೆ, ಅವರಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಗಳನ್ನು ನಾವು ಕೊಡಬೇಕಾಗಿದೆ, ಇವತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಕಾರಣ ಲಘು ಆಹಾರ ಪದಾರ್ಥಗಳು ಇವುಗಳಿಂದ ಮಕ್ಕಳನ್ನು ರಕ್ಷಿಸಿ, ಮೊಬೈಲ್ ನ ಅತಿಯಾದ ಬಳಕೆಯಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ ಅದರಿಂದ ಅವರಿಗೆ ರಕ್ಷಿಸುವ ಕೆಲಸ ಆಗಬೇಕು ಎಂದರು. 

 ಜ್ಯೋತಿಬಾ ಪುಲೆ ಪ್ರಶಸ್ತಿ ವಿಜೇತೆ ಶ್ರೀಮತಿ ಜ್ಯೋತಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಇವತ್ತು ಮಹಿಳೆ ಅಬಲೆಯಲ್ಲ ಸಬಲೆಯಂದು ಸಾಬೀತು ಮಾಡಿದ್ದಾಳೆ, ಅವಳ ಜೀವನದಲ್ಲಿ ಎಂತಹ ಕಷ್ಟ ಬಂದರೂ ಅದನ್ನು ಸಹಿಸುವ ಹಾಗೂ ಎದುರಿಸುವ ಸಾಮರ್ಥ್ಯ ಅವಳಲ್ಲಿದೆ, ಅವಳು ಮಾಡಿದ ಸಾಧನೆಗೆ ಇತಿಹಾಸವೇ ಸಾಕ್ಷಿಯಾಗಿದೆ ಎಂದರು. 

 ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿಜಯಪುರ ಶಿವಯೋಗಾಶ್ರಮದ ಶರಣೆ ದಾನಮ್ಮ ತಾಯಿ ಅವರು 12ನೇ ಶತಮಾನದಲ್ಲಿ ನಮ್ಮ ಶರಣರು ಮಹಿಳೆಗೆ ಸಮಾಜದಲ್ಲಿ ಶ್ರೇಷ್ಠ ಸ್ಥಾನ ಕೊಟ್ಟಿದ್ದಾರೆ ಈ ಕಾರಣಕ್ಕಾಗಿಯೇ ಹಲವಾರು ಶರಣೆಯರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ ಎಂದರು.  

ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯ ತಮ್ಮ ಶ್ರೇಷ್ಠ ಸಾಧನೆಗಾಗಿ ಜ್ಯೋತಿಬಾ ಫುಲೆ ಪ್ರಶಸ್ತಿಯನ್ನು ಪಡೆದುಕೊಂಡ ಶಿಕ್ಷಕಿ ಬಿ.ಟಿ. ಸಜ್ಜನ್ ಹಾಗೂ ಶ್ರೀಮತಿ ಜ್ಯೋತಿ ಹಿರೇಮಠ ಬ್ರಹ್ಮ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕದಳಿ ವೇದಿಕೆ ಅಧ್ಯಕ್ಷೆ ಶ್ರೀಮತಿ ಉಮಾ ಘಿವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಚೊಂಡಿಪಾಟೀಲ, ಸುರೇಖಾ ಸಾಲಿಂಕಿ, ವಿದ್ಯಾ ಭಕ್ಷಿ, ಶಿವಲೀಲಾ ದೇವಶೆಟ್ಟಿ, ಸುವರ್ಣಾ ಅಗ್ನಿ, ಅಶ್ವಿನಿ ಜೋಗೂರ, ಮೈತ್ರಿ ಪಾಟೀಲ, ಸುಜಾತ ಪಾಟೀಲ ಮತ್ತಿತರರು ಇದ್ದರು. ಸುಮಂಗಲಾ ಕಲಬುರಗಿ ಪ್ರಾರ್ಥಿಸಿದರು. ಸಂಗೀತಾ ಬಳಗಾನೂರ ಸ್ವಾಗತಿಸಿದರು. ಜಯಶ್ರೀ ಸಜ್ಜನ ಗೀತೆ ಹಾಡಿದರು. ರತ್ನಕಲಾ ಸರಶೆಟ್ಟಿ ನಿರೂಪಿಸಿದರು. ಸುರೇಖಾ ಸಾಲಂಕಿ ವಂದಿಸಿದರು.