ವರುಣನ ಕೃಪೆಗಾಗಿ ಅಮ್ಮಿನಬಾವಿಯಲ್ಲಿ ಕತ್ತೆಗಳ ಮದುವೆ
Wedding of donkeys in Amminabhavi to invoke the grace of the Rain God
ಲೋಕದರ್ಶನ ವರದಿ
ಧಾರವಾಡ 02: ಮುಂಗಾರಿ ಬಿತ್ತನೆಯನ್ನು ಪೂರೈಸಿರುವ ರೈತರು ಮಳೆ ಬಾರದೇ ಈಗ ಕಂಗಾಲಾಗಿದ್ದಾರೆ. ನಿತ್ಯವೂ ಮಳೆಯ ನೀರೀಕ್ಷೆ ಹುಸಿಗೊಂಡಿದ್ದರಿಂದ ಮಳೆ ತರಿಸಲು ಭಗೀರಥ ಪ್ರಯತ್ನಗಳಿಗೆ ಈಗ ರೈತರು ಮುಂದಾಗಿದ್ದಾರೆ.ಈ ನಿಟ್ಟಿನಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ರೈತರು ಶನಿವಾರ ಬಹಳ ಅದ್ದೂರಿಯಿಂದ ಕತ್ತೆಗಳ ಮದುವೆ ಮಾಡಲು ಮುಂದಾಗಿರುವುದು ಎಲ್ಲರ ಗಮನಸೆಳೆದಿದೆ. ಅಮ್ಮಿನಬಾವಿ ಗ್ರಾಮದ ಎಲ್ಲ ಜಾತಿ, ವರ್ಗ, ಪಂಗಡಗಳ ರೈತರು ಒಗ್ಗೂಡಿ ಯುವಕ ಸಂಘಗಳ, ಮಹಿಳಾ ಮಂಡಳಗಳ, ಭಜನಾ ಮಂಡಳಗಳ ಮತ್ತು ವಿವಿಧ ದೇವಾಲಯಗಳ ಸೇವಾ ಸಮಿತಿಗಳ ಪದಾಧಿಕಾರಿಗಳು ಸೇರಿ ಭಕ್ತಿಯ ಬದ್ಧತೆಯಿಂದ ಈ ವಿವಾಹ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಮ್ಮಿನಬಾವಿ ಗ್ರಾಮದ ದೊಡ್ಡೋಣಿಯ ಕೊನೆಯ ಹಂತದಲ್ಲಿರುವ ಗ್ರಾಮದೇವಿಯರ ಪಾದಗಟ್ಟಿಯ ತಾಣದ ಹಂದರದಲ್ಲಿ ಜುಲೈ-4 ರಂದು(ಶನಿವಾರ) ಅಪರಾಹ್ನ 12-30 ಗಂಟೆಗೆ ಸಲ್ಲುವ ಅಭಿಜಿತ್ ಲಗ್ನದ ಶುಭಮುಹೂರ್ತದಲ್ಲಿ ಮೇಘರಾಜ ಎಂದು ಸಂಬೋಧಿಸುವ ಗಂಡು ಕತ್ತೆಯ ಜೊತೆಗೆ ವಸುಂಧರಾದೇವಿ ಎಂದು ಹೆಸರಿಸಿರುವ ಹೆಣ್ಣು ಕತ್ತೆಯ ವಿವಾಹ ಮಹೋತ್ಸವ ವಿದ್ಯುಕ್ತವಾಗಿ ಜರುಗಲಿದೆ. ಇದಕ್ಕೂ ಮೊದಲು ರೈತರು ವರುಣನ ಕೃಪೆಗಾಗಿ ಸಂಕಲ್ಪ ಪೂಜೆ ನೆರವೇರಿಸಲಿದ್ದಾರೆ.
ಲಗ್ನ ಪತ್ರಿಕೆ : ಸಾಮಾನ್ಯವಾಗಿ ವಿವಾಹ ಕಾರ್ಯಗಳಲ್ಲಿ ಲಗ್ನಪತ್ರಿಕೆ ಮುದ್ರಿಸುವಂತೆ ಕತ್ತೆಗಳ ಮದುವೆಗೂ ಅಧಿಕೃತವಾಗಿ ಲಗ್ನಪತ್ರಿಕೆ ಮುದ್ರಿಸಲಾಗಿದ್ದು, ಅಮ್ಮಿನಬಾವಿಯ ಕೆಲವು ಓಣಿಯವರು ವರನ ಕಡೆಯವರಾಗಿ ಮತ್ತು ಇನ್ನು ಕೆಲವು ಓಣಿಯವರು ಕನ್ಯೆಯ ಕಡೆಯವರಾಗಿ ಈ ಬೀಗತನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ರೈತರನ್ನೊಳಗೊಂಡು ಸಕಲರೂ ಸ್ವಯಂಸ್ಫೂರ್ತಿಯಿಂದ ದೇಣಿಗೆ ನೀಡಿದ್ದು, ವಿವಾಹ ಕಾರ್ಯದಲ್ಲಿ ಗ್ರಾಮದ ಸಮಸ್ತ ಜನತೆ ಪಾಲ್ಗೊಂಡು ಮದುವೆಯ ಊಟ ಶಿರಾ, ಅನ್ನ, ಸಾರು ಮತ್ತು ಬದನೆಕಾಯಿ ಪಲ್ಯ ಸವಿಯುವಂತೆ ಈಗಾಗಲೇ ಎಲ್ಲೆಡೆ ಮನವಿ ಮಾಡಲಾಗಿದೆ. ಈ ಮಂಗಳ ಕಾರ್ಯದಲ್ಲಿ ಡೊಳ್ಳು, ಕರಡಿಮಜಲು ಸೇರಿ ವಿವಿಧ ಜನಪದ ವಾದ್ಯ ಮೇಳಗಳು ಮೇಳೈಸಲಿವೆ.
ಜನಪದರ ನಂಬಿಕೆ : ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಆದರೂ ನೂರಾರು ವರ್ಷಗಳಿಂದ ಕತ್ತೆಗಳ ಮದುವೆಯಂತಹ ಜಾನಪದ ಸಂಸ್ಕೃತಿ ಪರಂಪರೆಯ ವಿಶಿಷ್ಟ ಆಚರಣೆಗಳು ಭಾರತೀಯರಲ್ಲಿ ಹಾಸುಹೊಕ್ಕಾಗಿವೆ. ಇಲ್ಲಿ ಪ್ರಕೃತಿಯ ಮೇಲಿನ ಅಚಲವಾದ ವಿಶ್ವಾಸ, ವರುಣ ದೇವರ ಕೃಪೆಯ ಮೇಲಿನ ಭಕ್ತಿಯ ಬದ್ಧತೆ, ಮಳೆ ಬಂದೇ ಬರುತ್ತದೆ ಎಂಬ ರೈತರ ಮನದಾಳದ ಆಶಾಭಾವನೆ ಹಾಗೂ ಸರ್ವ ಸಮಾಜಗಳ ಒಗ್ಗಟ್ಟಿನ ಸಂಕೇತಾತ್ಮಕ ಅಭಿವ್ಯಕ್ತಿಯೇ ಈ ಕತ್ತೆಗಳ ಮದುವೆ. ಗ್ರಾಮೀಣ ಸಮುದಾಯದ ಮೂಲ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಆ ಮೂಲಕ ಮಳೆಯ ಮಹತ್ವ, ಜಲಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯ ಜನಪರ ಆಲೋಚನೆಗಳನ್ನು ಸಾರ್ವತ್ರಿಕಗೊಳಿಸುವ ಒಳ ಆಶಯವೂ ಇಲ್ಲಿ ಹುದುಗಿದೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 