ವೇಮನರ ಚಿಂತನೆ ಬದುಕಿಗೆ ಮಾರ್ಗದರ್ಶಿ: ಸಂತೋಷ ಬಂಡೆ
ಇಂಡಿ 19: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಮಾಜ ಸುಧಾರಕರಾಗಿ, ಜನರಾಡುವ ಭಾಷೆಯಲ್ಲಿ ಬೋಧನೆ ಮಾಡಿದ ಜನಪರ ನಿಲುವಿನ ಮಹಾಯೋಗಿ ವೇಮನ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮಹಾಯೋಗಿ ವೇಮನರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ಕನ್ನಡದಲ್ಲಿ ಸರ್ವಜ್ಞರಿದ್ದಂತೆ, ತೆಲುಗಿನಲ್ಲಿ ವೇಮನ. ಯೋಗ ವಿಚಾರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರ ಕವಿತೆಗಳಲ್ಲಿ ಸಾಮಾಜಿಕ, ನೈತಿಕ, ವಿಡಂಬನಾತ್ಮಕ ಸಂಗತಿಗಳಿವೆ. ಸಮಾಜ ಚಿಂತಕರಾಗಿ ಅವರು ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದವರು. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.ಶಿಕ್ಷಕಿ ಎಸ್ ಪಿ ಪೂಜಾರಿ ಮಾತನಾಡಿ, ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಧರ್ಮ- ಅಧರ್ಮ, ಜ್ಞಾನ-ಅಜ್ಞಾನ ಸೇರಿದಂತೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವಜ್ಞನೆನಿಸಿಕೊಂಡಿದ್ದ ವೇಮನರ ವಿಚಾರಗಳು ಇಂದಿಗೂ ಮಹತ್ವ ಪಡೆದಿವೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಸ್ಥಳೀಯರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.