ಜಿ.ಪಂ ಸಿಇಓ ರಿಷಿ ಆನಂದ ಅವರಿಂದ ವಿಜಯಪುರ ಕೆ.ಎಂ.ಎಫ್ ಘಟಕಕ್ಕೆ ಭೇಟಿ : ಪರೀಶೀಲನೆ
ವಿಜಯಪುರ 18: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಮಂಗಳವಾರ ವಿಜಯಪುರ-ಬಾಗಲಕೋಟ ಕರ್ನಾಟಕ ಹಾಲು ಒಕ್ಕೂಟ ಮಂಡಳಿ ವಿಜಯಪುರ ಘಟಕಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಹಾಲಿನ ಪೌಡರ್ ಸರಬರಾಜು ಮಾಡುವ ವಾಹನಗಳ ವಿವರ, ಪ್ರಸ್ತುತ ಸಾಲಿನ ಅಗಸ್ಟ್ 2024ರಿಂದ ಅಕ್ಟೋಬರ 2024ರವರೆಗೆ ಒಟ್ಟು 51 ದಿನಗಳಿಗೆ ಹಾಲಿನ ಪೌಡರ್ ಬೇಡಿಕೆ ಹಾಗೂ ಪೂರೈಕೆ ಮಾಡಿದ ಪ್ರಮಾಣ ಕುರಿತು ಪರೀಶೀಲನೆ ನಡೆಸಿದ ಹಾಲಿನ ಪೌಡರ್ ಪೂರೈಕೆಯಾಗಿರುವ ದಾಖಲೆಗಳ ಮೂಲಕ ಮಾಹಿತಿ ಪಡೆದುಕೊಂಡರು.
ಹಾಲಿನ ಪೌಡರ್ ಪೂರೈಸುವ ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಡೆಂಪೋ ಡೈರಿಯಿಂದ ಪೂರೈಕೆಯಾಗುವ ವಾಹನದ ಮಾಹಿತಿ, ಹಾಲಿನ ಪುಡಿಯ ಪ್ರಮಾಣವನ್ನು ಮತ್ತು ಕರ್ನಾಟಕ ಹಾಲು ಒಕ್ಕೂಟ ಮಂಡಳಿ(ಕೆ.ಎಮ್.ಎಫ್ ಘಟಕ)ಯಿಂದ ಸಲ್ಲಿಸಿರುವ ಬೇಡಿಕೆಯ ಪ್ರಮಾಣವನ್ನು ತಾಳೆ ಮಾಡಿದರು. ಹಾಲಿನ ಪುಡಿ ಶಾಲೆಗಳಿಗೆ ಪೂರೈಸಲು ಗಣಕಯಂತ್ರದಲ್ಲಿ ಮಾರ್ಗ ನಕ್ಷೆ ಹಾಗೂ ಬೇಡಿಕೆಯ ವಿವರಗಳನ್ನು ಖುದ್ದಾಗಿ ವೀಕ್ಷಿಸಿದರು. ಶಾಲೆಗಳಿಂದ ಹಾಲಿನ ಪೌಡರ್ ಬೇಡಿಕೆ ಪಡೆಯುವಾಗ ಅನುಸರಿಸುವ ಕ್ರಮಗಳನ್ನು ಮತ್ತು ಹಾಲಿನ ಪೌಡರ್ ಪ್ರಮಾಣ ನಿಗದಿಪಡಿಸುವ ವಿಧಾನಗಳ ಕುರಿತು ಪರೀಶೀಲಿಸಿದರು. ಅಲ್ಲದೇ ಈ ಕೈಗಾರಿಕಾ ಘಟಕದಲ್ಲಿ ತಯಾರಿಸುವ ಉತ್ಪನ್ನಗಳು, ಯಂತ್ರಗಳು, ಉತ್ಪನ್ನಗಳನ್ನು, ಶಿಥೀಲೀಕರಣ ಮಾಡುವ ಕೊಠಡಿ, ಉತ್ಪಾದಿಸಿರುವ ಉತ್ಪನ್ನಗಳು, ಘಟಕದ ಹೊರಾಂಗಣ ಹಾಗೂ ಒಳಾಂಗಣ ಆವರಣಗಳು ಹಾಗೂ ಘಟಕದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಿವರಗಳನ್ನು ಪರೀಶೀಲಿಸಿದರು.
ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅಕ್ಷರ ದಾಸೋಹ ಕಛೇರಿಯಿಂದ ಬೇಡಿಕೆ ಸಲ್ಲಿಸಿದ 15 ದಿನಗಳೊಳಗಾಗಿ ಜಿಲ್ಲೆಯ ಎಲ್ಲ ಶಾಲೆಗಳಿಗೆ ಕಡ್ಡಾಯವಾಗಿ ಪೂರೈಕೆ ಮಾಡಬೇಕು. ಹಾಲಿನ ಪೌಡರ್ ಪೂರೈಕೆ ಮಾಡುವ ಸಂದರ್ಭದಲ್ಲಿ ತಾಲೂಕಾವಾರು ಪ್ರತ್ಯೇಕ ಮಾರ್ಗನಕ್ಷೆಗಳನ್ನು ತಯಾರಿಸಿ, ಸದರಿ ಮಾರ್ಗನಕ್ಷೆಗಳ ದಿನಾಂಕವಾರು ಮಾಹಿತಿಯನ್ನು ತಾಲುಕು ಮಟ್ಟದ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಿಗೆ/ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ಶಾಲೆಗಳಿಗೆ ಪೂರೈಕೆಯಾಗುವ ಹಾಲಿನ ಪುಡಿಯನ್ನು ನಿಗದಿತ ಸಮಯದಲ್ಲಿ ಪೂರೈಕೆ ಮಾಡಿ, ಮುಖ್ಯವಾಗಿ ಘಟಕದಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.ಶಾಲೆಗಳಲ್ಲಿ ಫಲಾನುಭವಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಹಾಲಿನ ಪೌಡರ್ ನ್ನು ಪೂರೈಕೆ ಮಾಡಿದ ಬಳಿಕ ಕಡ್ಡಾಯವಾಗಿ ಅದರ ಸದುಪಯೋಗ ಆಗಬೇಕು. ಬೇಡಿಕೆಯ ಪ್ರಮಾಣವನ್ನು ಆಯಾ ಶಾಲೆಗಳ ಮುಖ್ಯ ಗುರುಗಳಿಂದ ಫಲಾನುಭವಿಗಳ ಸಂಖ್ಯೆಗನುಗುಣವಾಗಿ ಬೇಡಿಕೆ ಪಡೆಯಬೇಕು. ಎಲ್ಲ ತಾಲೂಕುಗಳ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಿ ಪ್ರತಿ ಮಾಹೆ ನಿಗದಿತ ಅವಧಿಯೊಳಗೆ ಹಾಲಿನ ಪೌಡರ್ ಬೇಡಿಕೆಯನ್ನು, ಜಿಲ್ಲಾ ಹಂತಕ್ಕೆ ಸಲ್ಲಿಸಲು ಕ್ರಮ ವಹಿಸಲು ಅಕ್ಷರ ದಾಸೋಹ ಶಾಖೆಯ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಕ್ಷೀರಭಾಗ್ಯ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಪೌಷ್ಠಿಕತೆಯನ್ನು ಹೋಗಲಾಡಿಸುವಲ್ಲಿ ಜವಾಬ್ದಾರಿಯಿಂದ ನಿರ್ವಹಿಸಿ, ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಶ್ರಮವಹಿಸುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ-ಬಾಗಲಕೋಟ ಕರ್ನಾಟಕ ಹಾಲು ಒಕ್ಕೂಟ ಮಂಡಳಿ (ಕೆ.ಎಮ್.ಎಫ್ ಘಟಕ)ಯ ವ್ಯವಸ್ಥಾಪಕ ನಿರ್ದೇಶಕರಾದ ಡಿ. ಟಿ. ಶಿವಶಂಕರ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಆಜೂರ, ಜಿಲ್ಲಾ ಮಟ್ಟದ ಅಕ್ಷರ ದಾಸೋಹ ಶಾಖೆಯ ಶಿಕ್ಷಣಾಧಿಕಾರಿಗಳಾದ ಎಸ್. ಜೆ. ನಾಯಕ, ವಿಜಯಪುರ-ಬಾಗಲಕೋಟ ಕರ್ನಾಟಕ ಹಾಲು ಒಕ್ಕೂಟ ಮಂಡಳಿ(ಕೆ.ಎಮ್.ಎಫ್ ಘಟಕ)ವಿಜಯಪುರ ನ ವ್ಯವಸ್ಥಾಪಕರಾದ ಡಾ.ಗಜರಾಜ ರತ್ನೂರ, ನೊಡೆಲ್ ಅಧಿಕಾರಿಗಳಾದ ಹಣಮಂತಗೌಡ ಬಳಗಾನೂರ, ವಿಷಯನಿರ್ವಾಹಕರಾದ ಸಿದ್ದು ಪಾತ್ರೋಟ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.