ಶಿಂದೊಳ್ಳಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ!

ಶಿಂದೊಳ್ಳಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ! Villagers protest against the closure of Shindolli Government School!

ಲೋಕದರ್ಶನ ವರದಿ 

ಶಿಂದೊಳ್ಳಿ 25 : ಸರ್ಕಾರಿ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಮುಚ್ಚಿ ಮಾಸ್ತಮರಡಿ ಶಾಲೆಗೆ ವೀಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದು ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಎಐಡಿಎ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಊರಿನ ಶಾಲೆ ಮುಂದೆ 'ನಮ್ಮೂರ ಶಾಲೆ ನಮ್ಮಯ ಕಣ್ಮಣಿ' ಎಂಬ ಬ್ಯಾನರ್ ಕಟ್ಟಿ ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಪ್ರತಿರೋಧ ವ್ಯಕ್ತಪಡಿಸಿದರು. ಮಹಾತ್ಮ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರಚಂದ್ರ ವಿದ್ಯಾಸಾಗರ್ ಮುಂತಾದ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಹಿಡಿದು ನಿಂತಿದ್ದ ತಾಯಂದಿರು ಊರಿನ ಶಾಲೆ ಮುಚ್ಚುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಪೋಷಕರಾದ ರಮಾ ನಾಗಣ್ಣವರ್ ಮಾತನಾಡಿ, "ನಾವು ಕೂಲಿ ಮಾಡಿ ಬದುಕುವ ಜನ. ನಾವು ಬಳಿಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗ್ತೀವಿ. ನಮ್ಮೂರಲ್ಲಿ ಶಾಲೆಯಿದ್ದರೆ ನಮ್ಮ ಮಕ್ಕಳು ಶಾಲೆಗೆ ಹೋಗಿ ನಾವು ಸಂಜೆ ಕೆಲಸದಿಂದ ಬರುವಷ್ಟರಲ್ಲಿ ಮನೆಯಲ್ಲಿ ಇರುತ್ತಾರೆ. ಇನ್ನು ನಮ್ಮೂರ ಶಾಲೆ ಮುಚ್ಚಿ ಮಕ್ಕಳನ್ನು ಬೇರೆ ಕಡೆ ಕಳಿಸಿದರೆ, ನಮ್ಮ ಮಕ್ಕಳ ಸುರಕ್ಷತೆಯ ಜವಾಬ್ದಾರಿ ಯಾರದ್ದು? ಮಕ್ಕಳನ್ನು ಬೇರೆ ಊರಿಗೆ ಕಳಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮೂರಲ್ಲೇ ಶಾಲೆ ಇರಬೇಕು. ಯಾವ ಕಾರಣಕ್ಕೂ ಕೂಡ ಸರ್ಕಾರ ಶಾಲೆ ಮುಚ್ಚಬಾರದು" ಆಗ್ರಹಿಸಿದರು.  

ಗ್ರಾಮಸ್ಥರಾದ ಲಕ್ಷ್ಮೀ ಕರೇಗಾರ್ ಮಾತನಾಡಿ, "ಸಮಾಜದಲ್ಲಿ ವಾತಾವರಣ ಸರಿಯಿಲ್ಲ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಾಚಾರ ಮಿತಿ ಮೀರಿದೆ. ಇಂತಹ ಪರಿಸ್ಥಿತಿಯಲ್ಲಿ ಬೇರೆ ಊರಿಗೆ ನಮ್ಮ ಹೆಣ್ಣು ಮಕ್ಕಳನ್ನು ಕಳಿಸಲು ಸಾಧ್ಯವಿಲ್ಲ. ನಾವು ದುಡಿದು ಬದುಕುವ ಜನ. ಖಾಸಗೀ ಶಾಲೆಗೆ ಮಕ್ಕಳನ್ನು ಕಳಿಸುವ ಸಾಮರ್ಥ್ಯ ನಮಗಿಲ್ಲ. ಆದ್ದರಿಂದ ನಮ್ಮೂರ ಶಾಲೆ ಉಳಿಯಬೇಕು. ಶಾಲೆ ಮುಚ್ಚಿ ಸರ್ಕಾರ ನಮ್ಮಂತ ಬಡವರಿಗೆ ಅನ್ಯಾಯ ಮಾಡುತ್ತಿದೆ. ಯಾರೇ ಬಂದರೂ ನಾವು ಶಾಲೆ ಮುಚ್ಚಲು ಬಿಡುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಎಐಡಿಎ ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಿಳೂರ್ ಮಾತನಾಡಿ, "ನಮ್ಮ ದೇಶದ ನವೋದಯ ಚಳುವಳಿ ಹರಿಕಾರರಾದ ಈಶ್ವರ್ ಚಂದ್ರ ವಿದ್ಯಾಸಾಗರ್, ಜ್ಯೋತಿಬಾಪುಲೆ ಸಾವಿತ್ರಿಬಾಯಿ ಫುಲೆ ಕುದ್ಮುಲ್ ರಂಗರಾವ್ ಪಂಡಿತ್ ತಾರಾನಾಥ್ ಮುಂತಾದ ಮಹನೀಯರು, ಈ ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಕನಸು ಕಂಡಿದ್ದರು. ದುರಂತವೆಂಬದಂತೆ ಇಂದು ಈ ಮಹನೀಯರ ಹೆಸರುಗಳನ್ನು ಹೇಳುತ್ತಾ ಅಧಿಕಾರದ ಗದ್ದುಗೆ ಏರಿರುವ ಸರ್ಕಾರವು ಶಿಕ್ಷಣವನ್ನು ಬಡವರಿಂದ ಕಿತ್ತು ಕೇವಲ ದುಡ್ಡಿದ್ದವರ ಸ್ವತ್ತಾಗಿಸುತ್ತಿದೆ.

ಶಿಕ್ಷಣದ ವ್ಯಾಪಾರಿಕರಣದ ಹುನ್ನಾರವಾಗಿ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಶಿಕ್ಷಣಕ್ಕೆ 8 ಗ್ಯಾರಂಟಿಗಳು ಎಂದು ಘೋಷಿಸಿ ಈ ಪ್ರತಿಷ್ಠಿತ ಶಾಲೆಗಳನ್ನು ಸರ್ಕಾರ ಆರಂಭಿಸುತ್ತಿದೆ. ಆದರೆ ಈ ಶಾಲೆಗಳ ಮೇಲುಸ್ತುವಾರಿಯನ್ನು ಖಾಸಗಿ ಯವರಿಗೆ ವಹಿಸುವ ಹುನ್ನಾರವನ್ನು ತೆರೆಮರೆಯಲ್ಲಿ ನಡೆಸುತ್ತಿದೆ. ಇದು ನಾಡಿನ ಜನತೆಗೆ ಮಾಡಿದ ಅಕ್ಷಮ್ಯ ಅಪರಾಧ. ಕರ್ನಾಟಕ ರಾಜ್ಯ ಸರ್ಕಾರವು ಬಡ ಜನರ ಬದುಕಿನತ್ತ ಗಮನಹರಿಸಿ ಊರಿನ ಸರ್ಕಾರಿ ಶಾಲೆಗಳನ್ನು ಮುಚ್ಚುವ ತನ್ನ ನಿರ್ಧಾರವನ್ನು ಕೈಬಿಡಬೇಕು ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು" ಎಂದು ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆ ನಂತರ ನಿಲಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಶಾಪೂರಕರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸತೀಶ್ ಅವರು, 

"ಸರ್ಕಾರಿ ಶಾಲೆ ಮುಚ್ಚುವುದು ಬಡವರಿಗೆ ಮಾಡುವ ಅನ್ಯಾಯ. ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ನಮ್ಮ ವಿರೋಧ ಇದೆ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಪತ್ರ ಬರೆದು ಶಿಂದೊಳ್ಳಿ ಗ್ರಾಮಸ್ಥರ ಕೂಗನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದರು. ಶಾಂತಾ ಶಾಪೂರಕರ್, ಶಾಂತಾ ತಿಪ್ಪಣ್ಣಗೋಳ, ಭರಮವ್ವ ಶಾಪೂರಕರ್, ಲಕ್ಷ್ಮೀ ಶಾಪೂರಕರ್, ಬಾಳವ್ವ ಅಗಸೀಮನಿ, ಮಾಳಿಂಗರಾಯ ತಿಪ್ಪಣ್ಣಗೋಳ, ಭಾವಕಣ್ಣ ಕಣಬರಕರ್ ಸೇರಿದಂತೆ ಪೋಷಕರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.