ಗ್ರಾಮದ ರಾಜ್ಯೋತ್ಸವ ರಾಜ್ಯದಲ್ಲಿಯೇ ವಿಶೇಷ: ರವೀಂದ್ರ ಪೂಜಾರಿ

ಗ್ರಾಮದ ರಾಜ್ಯೋತ್ಸವ ರಾಜ್ಯದಲ್ಲಿಯೇ ವಿಶೇಷ: ರವೀಂದ್ರ ಪೂಜಾರಿ Village Rajyotsava is special in the state: Ravindra Poojary


ಕಾಗವಾಡ, 03 : ರಾಜ್ಯಾದ್ಯಂತ ಇಂದು 70ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ನಮ್ಮ ಗ್ರಾಮದ ರಾಜ್ಯೋತ್ಸವ ವಿಶೇಷವಾಗಿದ್ದು, ಇಲ್ಲಿ ಎಲ್ಲ ಸಮಾಜದ ಬಾಂಧವರು ಒಟ್ಟಿಗೆ ಸೇರಿ, ಅತ್ಯಂತ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆಂದು ಮಾಜಿ ಜಿ.ಪಂ. ಸದಸ್ಯ ರವೀಂದ್ರ ಪೂಜಾರಿ ಹೇಳಿದ್ದಾರೆ.ಅವರು, ಶನಿವಾರ ದಿ.01 ರಂದು ಮಂಗಸೂಳಿ ಗ್ರಾಮ ಪಂಚಾಯಿತಿ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ 70ನೇ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿ, ಮಾತನಾಡುತ್ತಿದರು.  

ಮಹಾರಾಷ್ಟ್ರದ ಗಡಿಯಲ್ಲಿರುವ ಮಂಗಸೂಳಿಯಲ್ಲಿ ಮರಾಠಿ ಭಾಷಿಕರೇ ಹೆಚ್ಚಾಗಿದ್ದು, ಅನೇಕ ವರ್ಷಗಳಿಂದ ಎಲ್ಲ ಭಾಷಿಕರು ಸೇರಿ, ಕನ್ನಡಾಂಬೆಯ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. 1956 ರಿಂದ ಈ ಗ್ರಾಮದಲ್ಲಿ ನವ್ಹೆಂಬರ್ 01 ರಂದು ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ, ಕರಾಳ ದಿನ ಆಚರಿಸಲಾಗುತ್ತಿತ್ತು. ಕಳೆದ ಹತ್ತಾರು ವರ್ಷಗಳಿಂದ ತಾಲೂಕಾಡಳಿತದ ವಿಶೇಷ ಪ್ರಯತ್ನದಿಂದ ಕನ್ನಡ ಹಾಗೂ ಮರಾಠಿ ಭಾಷಿಕರು ಸೇರಿ ರಾಜೋತ್ಸವವನ್ನು ಆಚರಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಅದರ ಸಂಭ್ರಮ ಹೆಚ್ಚುತ್ತಲೇ ಸಾಗಿದೆ. ಇದರಿಂದ ಒಂದು ಕಾಲದಲ್ಲಿ ರಾಜ್ಯಕ್ಕೆ ಕಪ್ಪುಚುಕ್ಕೆ ಆಗಿದ್ದ ಗ್ರಾಮ ಇಂದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.ಗ್ರಾಮದ ವರ್ತಕರ ಸಂಘ ಮತ್ತು ಇತರೇ ಕನ್ನಡ ಪರ ಸಂಘಟನೆಗಳ ಕರೆಯ ಮೇರೆಗೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಸಿದವು.

ಬೆಳಿಗ್ಗೆ ಎಂಟು ಗಂಟೆ ಸಮಯದಲ್ಲಿ ಮುಖಂಡರು, ಗಣ್ಯರು, ಶಾಲಾ ಶಿಕ್ಷಕರು, ವಿಧ್ಯಾರ್ಥಿಗಳು ಸೇರಿ ವಿವಿಧ ಶಾಲೆಗಳಲ್ಲಿ ರಾಜ್ಯೋತ್ಸವವನ್ನು ಆಚರಿಸಿದರು. ಅಲ್ಲಿಂದ ಕನ್ನಡ ಜಯ ಘೋಷಣೆಗಳೊಂದಿಗೆ ಮೆರವಣಿಗೆ ಮುಖಾಂತರ ಚನ್ನಮ್ಮ ವೃತ್ತಕ್ಕೆ ಆಗಮಿಸಿ, ಅಲ್ಲಿ ಕನ್ನಡ ಧ್ವಜಾರೋಹಣ ನೇರವೇರಿಸಿ, ಗ್ರಾಮ ಪಂಚಾಯತಕ್ಕೆ ಆಗಮಿಸಿತು. ಅಲ್ಲಿ ತಾಯಿ ಭುವನೇಶ್ವರಿ ಪೂಜೆ ಸಲ್ಲಿಸಲಾಯಿತು.ಈ ಸಮಯದಲ್ಲಿ ತಹಶೀಲ್ದಾರ ರವೀಂದ್ರ ಹಾದಿಮನಿ, ತಾ.ಪಂ. ಇಓ ವೀರಣ್ಣ ವಾಲಿ, ಸಿಪಿಐ ಸಂತೋಷ ಹಳ್ಳೂರ, ಉಪತಹಶೀಲ್ದಾರರಾದ ರಷ್ಮಿ ಜಕಾತಿ, ಅಣ್ಣಾಸಾಬ ಕೋರೆ, ಗ್ರಾ.ಪಂ. ಅಧ್ಯಕ್ಷ ಬಾಳು ಬಜಂತ್ರಿ, ಪಿಎಸ್‌ಐ ರಾಘವೇಂದ್ರ ಖೋತ, ಪಿಡಿಓ ಸಂಜೀವ ಸೂರ್ಯವಂಶಿ, ಪಿಕೆಪಿಎಸ್ ಅಧ್ಯಕ್ಷ ಮುಕುಂದ ಪೂಜಾರಿ, ದಲಿತ ಮುಖಂಡ ಸಂಜಯ ತಳವಲಕರ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.