ವಿಜಯಪುರ: ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಲೋಕದರ್ಶನ ವರದಿ

ವಿಜಯಪುರ 22: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಪರವಾಗಿ ಬಿಜೆಪಿ ನಗರ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. 

ಬಿಜೆಪಿಯ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು 2 ಸಾವಿರಕ್ಕೂ ಹೆಚ್ಚು ಬೈಕ್ ಗಳ  ಮೇಲೆ ಪಕ್ಷದ ಧ್ವಜ ಹಿಡಿದುಕೊಂಡು, ಮೋದಿ ಅವರಿಗೆ ಜಯವಾಗಲಿ, ಜಿಗಜಿಣಗಿ ಅವರಿಗೆ ಜಯವಾಗಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದರು. 

ನಗರದ ಅಥಣಿ ರಸ್ತೆಯ ಗೋದಾವರಿ ಹೋಟೆಲ್ ಮುಂಭಾಗದಿಂದ ಆರಂಭಗೊಂಡ ರ್ಯಾಲಿ ಬಂಜಾರಾ ಕ್ರಾಸ್, ಶಿವಾಜಿ ಸರ್ಕಲ್, ಗಾಂಧಿವೃತ್ತ, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. 

ಸ್ವತ: ಬೈಕ್ ಓಡಿಸುವ ಮೂಲಕ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ, ದೇಶದ ಅಭಿವೃದ್ಧಿಗೆ ಇನ್ನೊಮ್ಮೆ ಮೋದಿ ಅವರು ಪ್ರಧಾನಿಯಾಗುವುದು ಅವಶ್ಯವಾಗಿದೆ. ಜಿಗಜಿಣಗಿ ಅವರು ಸರಳ, ಸಾತ್ವಿಕ ಸ್ವಭಾವದ ರಾಜಕಾರಣಿ. ಜನತೆ ಅವರನ್ನು ಇನ್ನೊಮ್ಮೆ ಸಂಸದರನ್ನಾಗಿ ಆಯ್ಕೆ ಮಾಡುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಸಂಕಲ್ಪ ಮಾಡಬೇಕಿದೆ ಎಂದರು. ಮೋದಿ ಅವರು ರಾಷ್ಟ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಯಂತೆ ಜಿಗಜಿಣಗಿ ಅವರು ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಈ ಬಾರಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ, ಜಿಗಜಿಣಗಿ ಅವರು ಸಂಸದರಾಗಿ ಹ್ಯಾಟ್ರಿಕ್ ಸಾಧನೆ ಮಾಡುವುದು ನಿಶ್ಚಿತ. ಜನತೆ ಬಿಜೆಪಿಯ ಪರವಾಗಿ ಒಲವು ಹೊಂದಿದೆ. ಮೋದಿ ಅವರ ಜನಪರ ಕಾರ್ಯಗಳನ್ನು ಜನತೆ ಅಪಾರವಾಗಿ ಮೆಚ್ಚಿಕೊಂಡಿದ್ದಾರೆ ಎಂದರು. 

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಪಮೇಯರ್ ಗೋಪಾಲ ಘಟಕಾಂಬಳೆ, ಗೂಳಪ್ಪ ಶೆಟಗಾರ, ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಸಂಘಟನಾಕಾರ್ಯದರ್ಶಿ  ಪ್ರಕಾಶ ಅಕ್ಕಲಕೋಟ, ಪಕ್ಷದ ಮುಖಂಡರಾದ ಆನಂದ ಧುಮಾಳೆ, ಪ್ರಕಾಶ ಮಿರ್ಜಾ  ಶಂಕರ ಕುಂಬಾರ, ಅಲ್ತಾಫ ಇಟಗಿ, ಭೀಮಾಶಂಕರ ಹದನೂರ, ಚಿದಾನಂದ ಚಲವಾದಿ, ಸಿದ್ಧುಮಲ್ಲಿಕಾರ್ಜುನಮಠ, ಮಲ್ಲಮ್ಮ ಜೋಗೂರ, ವಿವೇಕಾನಂದ ಡಬ್ಬಿ, ರಜನಿ ಸಂಬಣ್ಣಿ, ಮಂಜುಳಾ ಅಂಗಡಿ, ಭಾರತಿ ಭುಯ್ಯಾರ, ಪಾಪುಸಿಂಗ್ ರಜಪೂತ, ವಿಜಯ ಜೋಶಿ, ಶಂಕರ ಹೂಗಾರ, ಗೀತಾ ಕೂಗನೂರ ಮುಂತಾದವರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.