ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ವಾಗೀಶ್ ಶಿವಾಚಾರ್ಯ ಸಲಹೆ ಗಣಿತ ವಿಷಯ ಕಲಿಯುವ ಆಸಕ್ತಿ ರೂಢಿಸಿಕೊಳ್ಳಿ
ಬಳ್ಳಾರಿ 23:ಗಣಿತ ವಿಷಯವು ಕಬ್ಬಿಣದ ಕಡಲೆಯಲ್ಲ. ಬದಲಾಗಿ ಮೂಲ ಸೂತ್ರಗಳನ್ನು ಅರಿತುಕೊಂಡು, ಆಸಕ್ತಿಯಿಂದ ಗಣಿತ ವಿಷಯ ಕಲಿಯುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ.ಎಸ್.ಎಂ ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಮತ್ತು ಜಿಲ್ಲಾ ಪಂಚಾಯತ್, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್(ಸರ್ಕಾರಿ ಬಾಲಕಿಯರ ಪ್ರೌಢಶಾಲೆ)ನಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಕ್ಕೆ ಕೊಡುಗೆ ನೀಡಿದ ಮಹಾನ್ ಮೇಧಾವಿಗಳ ಸ್ಮರಣೆಗಾಗಿ ವಿವಿಧ ದಿನಾಚರಣೆ ಮಾಡಲಾಗುತ್ತದೆ. ಅದರಂತೆ ಶ್ರೇಷ್ಠ ಭಾರತೀಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರ ಜನ್ಮ ದಿನದ ಸವಿನೆನಪಿಗಾಗಿ ಡಿ.22 ರಂದು ರಾಷ್ಟ್ರೀಯ ಗಣಿತ ದಿನಾಚರಣೆ ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.
ಶ್ರೀನಿವಾಸ ರಾಮಾನುಜನ್ ಅವರು ಅಪಾರ ಜ್ಞಾನ ಉಳ್ಳವರು. ಅವರು ತಮ್ಮ 32 ವಯಸ್ಸಿನಲ್ಲಿಯೇ ಯಶಸ್ಸಿನ ಛಲ ಹೊಂದಿ, ಸಾಧನೆಯ ಮೈಲಿಗಲ್ಲು ತಲುಪಿದವರು. ಗಣಿತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅಪಾರ ಜ್ಞಾನ ಗಳಿಸುವಂತೆ ಗಣಿತ ವಿಷಯದಲ್ಲಿಯೂ ಸಹ ಪರಿಣಿತಿ ಹೊಂದುವುದು ಅಗತ್ಯವಾಗಿದೆ. ವಿದ್ಯಾರ್ಥಿನಿಯರು ತಳ ಮಟ್ಟದಲ್ಲಿಯೇ(ಬೇಸಿಕ್) ಗಣಿತ ವಿಷಯವನ್ನು ಅಚ್ಚುಕಟ್ಟಾಗಿ ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕರಾದ ಎ.ಭೈರ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಿತ ವಿಷಯದ ಲೆಕ್ಕಚಾರ ತಿಳಿದುಕೊಂಡರೆ ದೈನಂದಿನದಲ್ಲಿ ಉತ್ತಮ ವ್ಯವಹಾರ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಗಣಿತ ಕ್ಷೇತ್ರದಲ್ಲಿ ವಿಶ್ವಕ್ಕೆ ಭಾರತದ ಕೊಡುಗೆ ಅಪಾರ. ವಿದ್ಯಾರ್ಥಿಗಳು ಗಣಿತ ವಿಷಯ ಕಲಿಯುವಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ವಿವಿಧ ಆವಿಷ್ಕಾರ-ನೂತನ ಪ್ರಯೋಗಗಳಲ್ಲಿ ತೊಡಗಿಕೊಂಡು ಕೊಡುಗೆ ನೀಡಬೇಕು ಎಂದರು.
ಡಿಡಿಪಿಐ ಕಚೇರಿಯ ಗಣಿತ ವಿಷಯ ನಿರ್ವಾಹಕರಾದ ಬಸವರಾಜ.ಎಂ ಮಾತನಾಡಿ, ಗಣಿತ ವಿಷಯವು ಕ್ಲಿಷ್ಟಕರವಲ್ಲ. ಗಣಿತ ಜ್ಞಾನದಿಂದ ಮನೋವೃದ್ಧಿಯಾಗಲಿದ್ದು, ವಿದ್ಯಾರ್ಥಿಗಳು ಗಣಿತ ಪ್ರಾಮುಖ್ಯತೆ ಅರಿತುಕೊಂಡು ಗಣಿತ ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಪಿಯುಸಿಯಲ್ಲಿ ಗಣಿತ ವಿಷಯ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಪ್ರೌಢಶಾಲೆಯಲ್ಲಿಯೇ ಗಣಿತ ವಿಷಯದ ಜ್ಞಾನ ಸಂಪಾದಿಸಿಕೊಂಡು, ಉನ್ನತ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಸೊನ್ನೆಯ ಮಹತ್ವ ಪ್ರತಿಯೊಬ್ಬರಿಗೂ ತಿಳಿದಿದೆ. ಸೊನ್ನೆಯ ಪರಿಕಲ್ಪನೆ ನೀಡಿದ ಶ್ರೇಯಸ್ಸು ಭಾರತಕ್ಕಿದೆ. ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್, ಆರ್ಯಭಟ ಸೇರಿದಂತೆ ಇನ್ನೂ ಅನೇಕ ಭಾರತೀಯರು ಗಣಿತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಇದೇ ವೇಳೆ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಷ ನಮನ ಸಲ್ಲಿಸಿದ ಬಳಿಕ ಕೆಪಿಎಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯರಿಂದ ತಯಾರಿಸಲ್ಪಟ್ಟ ಗಣಿತ ಮ್ಯಾಗಜಿನ್ ಅನ್ನು ಲೋಕಾರೆ್ಣಗೊಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸರ್ಕಾರಿ (ಮಾಪು) ಪಿಯು ಕಾಲೇಜಿನ ಉಪನ್ಯಾಸಕರಾದ ಡಾ.ಯು.ಶ್ರೀನಿವಾಸ್ ಮೂರ್ತಿ ಅವರು ರಾಮಾನುಜನ್-ಸ್ಕ-್ವಯರ್ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಷಣ ಮಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಎನ್‌ಐಸಿ ಬಳ್ಳಾರಿ ಕೇಂದ್ರದ ಸಿ.ವೆಂಕಟರಮಣ ಮೂರ್ತಿ, ಜಿಪಂ ಜಿಲ್ಲಾ ಯೋಜನಾ ಸಂಯೋಜಕರಾದ ರಾಮಚಂದ್ರ ರೆಡ್ಡಿ.ಜಿ.ಬಿ., ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಸುರೇಖಾ ಸೇರಿದಂತೆ ಕೆಪಿಎಸ್ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.