ಸರಕಾರದ ಸವಲತ್ತುಗಳನ್ನು ಕೃಷಿಯಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ: ಶಾಸಕ ಲಮಾಣಿ

Use government privileges in agriculture in a proper way: MLA Lamani

ಸರಕಾರದ ಸವಲತ್ತುಗಳನ್ನು ಕೃಷಿಯಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ: ಶಾಸಕ ಲಮಾಣಿ 

ಶಿರಹಟ್ಟಿ 25: ಸರ್ಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವನ್ನು ಅನುಷ್ಠಾನಗೊಳಿಸಿ ಹಿಂದುಳಿದ ವರ್ಗಗಳ ಸವಾಂಗೀಣ ಅಭಿವೃದ್ಧಿಯನ್ನು ಬಯಸುವದಲ್ಲದೇ ಹಿಂದುಳಿದ ವರ್ಗಗಳ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರವೆಲ್ ಹಾಗೂ ಇತರೆ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದು ಯಾವೊಬ್ಬ ರೈತರೂ ಕೂಡ ಸರ್ಕಾರದಿಂದ ಮಂಜೂರಾದ ಪರಿಕರಗಳನ್ನು ದುಡ್ಡಿನ ಆಸೆಗೆ ಮಾರಲು ಮುಂದಾಗದಂತೆ ನೋಡಿಕೊಳ್ಳಿ ಎಂದು ಶಾಸಕ  ಡಾ. ಚಂದ್ರು ಕೆ. ಲಮಾಣಿ ಹೇಳಿದರು. 

ಅವರು ಮಂಗಳವಾರ ಸಾಯಂಕಾಲ ಪಟ್ಟಣದ ಡಬಾಲಿ ಪ್ರೌಢಶಾಲೆಯ ಆವರದಲ್ಲಿ ಅಂಬೇಡ್ಕರ್, ಭೋವಿ, ಆದಿ ಜಾಂಭವ ಅಭಿವೃದ್ದಿ ನಿಗಮದಿಂದ ಕೊಡಲಾದ ಪಂಪ್‌ಸೆಟ್, ಪೈಪ್ ಹಾಗೂ ಎಲ್ಲ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು. ಸರಕಾರದ ಸವಲತ್ತುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. 

ಎಸ್ಸಿ ಫಲಾನುಭವಿಗಳಿಗೆ ಈ ಎಲ್ಲ ಸವಲತ್ತುಗಳನ್ನು ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಇಲಾಖೆ ಒದಗಿಸಿದೆ. ಇಲ್ಲಿನ ಪ್ರದೇಶದಲ್ಲಿ ಯಾವುದೇ ನೀರಾವರಿ ಅನುಕೂಲತೆಗಳಿಲ್ಲ. ಹೀಗಾಗಿ ಪಂಪ್‌ಸೆಟ್‌ಗಳು ಅನಿವಾರ್ಯವಾಗಿವೆ. ಯೋಜನೆಯನ್ನು ಬಳಸಿಕೊಂಡು ಕೃಷಿಕಾರ್ಯವನ್ನು ಕೈಗೊಳ್ಳಿ. ನೀರಾವರಿಗೆ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ಆಧುನಿಕ ವಿಧಾನವನ್ನು ಬಳಸಿಕೊಂಡು ಫಲಾನುಭವಿಗಳು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು. 

ಇಲಾಖೆ ಅದಿಕಾರಿಗಳು ನೀಡಿದ ಮಾಹಿತಿಯಂತೆ ಪ್ರತಿ ಫಲಾನುಭವಿಗಳಿಗೆ ಒಂದು ಮೋಟಾರ್, ಪಂಪ್, ಪ್ಯಾನಲ್ ಬೋರ್ಡ ನೀಡಲಾಗಿದೆ. ಇದರ ಜತೆಯಲ್ಲಿ ಪೈಪ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಮಎಲ್ಲ ಪರಿಕರಗಳು ಐಎಸ್‌ಐ ಮಾನ್ಯತೆಯನ್ನ ಪಡೆದಿದ್ದು, ಉತ್ತಮ ಗುಣಮಟ್ಟ ಹೊಂದಿವೆ. ಇವುಗಳನ್ನು ರೈತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು. 

ಕೊಳವೆ ಬಾವಿ ಕೊರೆಸಿದ ಅರ್ಹ ಎಸ್ಸಿ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕಕ್ಕೂ ರೂ. 75 ಸಾವಿರ ನೀಡಲಾಗುತ್ತಿದೆ. ಈ ಎಲ್ಲ ಸೌಲಭ್ಯ ಕಲ್ಪಿಸಿ ಕೊಡಲು ಈ ಹಿಂದೆ ಟೆಂಡರ್ ಕರೆಯಲಾಗುತ್ತಿತ್ತು. ಈ ಕುರಿತು ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಟೆಂಡರ್ ಪದ್ದತಿ ತೆಗೆದುಹಾಕಲಾಗಿದೆ. ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪಿಸಲಾಗುತ್ತಿದೆ. 

ಇದರಿಂದ ಹಣ ದುರ್ಬಳಕೆಯಾಗುವುದನ್ನು ತಡೆಯುವುದಲ್ಲದೇ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕಳ್ಳಲಾಗುತ್ತಿದೆ. ಕೊಳವೆ ಬಾವಿ ಕೊರೆಸಲು ಅರ್ಜಿ ಹಾಕಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಎಲ್ಲರೂ ಸಹ ಅರ್ಜಿ ಸಲ್ಲಿಸಬಹುದು. ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದರು.  

ಹಿಂದುಳಿದ ತಾಲೂಕಿನ ಬವಣೆ ಅರಿತು ಈಗಾಗಲೇ ಕುಡಿವ ನೀರು ಹಾಗೂ ಮೂಲ ಸೌಕರ್ಯಗಳಿಗೆ ಒತ್ತು ನೀಡಿ ಸರ್ಕಾರದ ಗಮನ ಸೆಳೆದು ಅನುದಾನ ಬಿಡುಗಡೆಗೆ ಒತ್ತಾಯಿಸಲಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. 

ತಾಲೂಕು ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿ ಉದಯಕುಮಾರ ಯಲಿವಾಳ, ಮಂಜನಗೌಡ ಗಾಂಜಿ, ಮುಖಂಡರಾದ ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಗೂಳಪ್ಪ ಕರಿಗಾರ, ಅಶೊಕ ವರವಿ, ಅಕ್ಬರಸಾಬ ಯಾದಗೀರಿ, ಮಲ್ಲಿಕಾರ್ಜುನ ಕಬಾಡಿ, ಪರಶುರಾಮ, ಡೊಂಕಬಳ್ಳಿ, ಸಂಜೀವ ಸೋಗಿನ, ದೇವಪ್ಪ ಪೂಜಾರ ಸೇರಿ ಅನೇಕರು ಇದ್ದರು.