ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟಮುದ್ರಣ ತಂತ್ರಜ್ಞಾನಕ್ಕೆ ಕೊನೆಯಿಲ್ಲ: ಡಾ.ವಸುಂಧರಾ ಭೂಪತಿ

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟಮುದ್ರಣ ತಂತ್ರಜ್ಞಾನಕ್ಕೆ ಕೊನೆಯಿಲ್ಲ: ಡಾ.ವಸುಂಧರಾ ಭೂಪತಿ Two-day book publishing workshop at Sri Krishna Devaraya University, Vijayanagar: There is no end t

               ಬಳ್ಳಾರಿ 17: ಮುದ್ರಣಗೊಳ್ಳುವ ಪುಸ್ತಕಗಳಿಗೂ ಹಾಗೂ ಮುದ್ರಣ ತಂತ್ರಜ್ಞಾನಕ್ಕೂ ಜೀವ ಸಂಕುಲ ಇರುವವರೆಗೂ ಸಾವಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಎಐ, ಇ-ಪುಸ್ತಕಗಳು, ಪ್ರಿಂಟ್ ಆನ್ ಡಿಮಾಂಡ್(ಪಿಓಡಿ) ಮುಂತಾದ ತಂತ್ರಜ್ಞಾನದ ಯುಗದಲ್ಲಿ ಕೇವಲ ಗಂಟೆಯಲ್ಲಿಯೇ ಪುಸ್ತಕವನ್ನು ಹೊರತರಬಹುದು. ಆದರೆ ಮುದ್ರಣವಾಗುವ ಪುಸ್ತಕಗಳು, ದಿನನಿತ್ಯ ಬಳಸುವ (ಕರೆನ್ಸಿ) ನೋಟುಗಳು ಮುದ್ರಣದ ಅವಿಭಾಜ್ಯ ಅಂಗವಾಗಿದ್ದು, ಅವುಗಳು ಎಂದಿಗೂ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಟ್ಟರು.

             ಕ್ರಿ.ಶ. 400ರಲ್ಲಿ ಚೀನಾದಲ್ಲಿ ಉಗಮವಾಗ ಹಿರಾಕಸೂತ್ರ ಎಂಬ ಮುದ್ರಣವು ಮುಂದೆ ಜಪಾನ್, ಜರ್ಮನಿ ದೇಶಗಳಲ್ಲಿ ಅಚ್ಚುಮೊಳೆಗಳ ಮೂಲಕ ಮುಂದುವರೆದು ಗುಟೆನ್‌ಬರ್ಗ್‌ ಪ್ರೆಸ್ ವಿಕಸನಕ್ಕೆ ನಾಂದಿ ಹಾಡಿದವು. ಕ್ರಿ.ಶ.1556ರಲ್ಲಿ ಭಾರತದಲ್ಲಿ ಪ್ರಥಮ ಮುದ್ರಣ ಯಂತ್ರವು ಗೋವಾದಲ್ಲಿ ಬಂದಿಳಿಯಿತು. 1578ರಲ್ಲಿ ಭಾರತದ ಪ್ರಥಮ ಭಾಷಾ ಪುಸ್ತಕವಾದ ತಮಿಳಿನ ಥಂಬಿರನ್ ಒನಕ್ಕಮ್ ಪ್ರಕಟವಾಯಿತು ಎಂದು ನೆನೆದರು.ಕ್ರಿ.ಶ. 1826ರಲ್ಲಿ ಕರ್ನಾಟಕದಲ್ಲಿ ಪ್ರಥಮ ಮುದ್ರಣ ಯಂತ್ರವನ್ನು ಬಳ್ಳಾರಿಗೆ ಜಾನ್ ಹ್ಯಾಂಡ್ಸ್‌ ಎಂಬ ಬ್ರಿಟೀಷ್ ಅಧಿಕಾರಿಯು ಧರ್ಮ ಪ್ರಚಾರಕ್ಕಾಗಿ ತರಿಸಿಕೊಂಡಿದ್ದನು ಎಂದು ತಿಳಿಸಿದರು.ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ವೇದಿಕೆಯಲ್ಲಿದ್ದ ವಿವಿಯ ಸಿಂಡಿಕೇಟ್ ಸದಸ್ಯರಾದ ಅಮರೇಶ್ ನುಗಡೋಣಿ ಅವರು ಮಾತನಾಡಿ, ಲೇಖಕ, ಪ್ರಕಾಶಕ, ಓದುಗ ಮತ್ತು ಪುಸ್ತಕಗಳು ಎಂಬ ನಾಲ್ಕು ದಿಸೆಯ ಅನನ್ಯವಾದ ಸಮಾಗಮ ನೆಲೆಗೊಂಡಿದೆ.

            10ನೇ ಶತಮಾನದಲ್ಲಿ ಶಿಕ್ಷಿತರ ಪ್ರಮಾಣ ನೀರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರಿಂದ ವಚನಕಾರರು, ಸಂತಕವಿಗಳು ತಮ್ಮ ಅನುಭವ, ಸಂವಾದ, ಚರ್ಚೆಗಳು ಎಂಬ ಮೌಖಿಕ ಸಂವಹನದ ಮೂಲಕ ಜನಪದ ಕಾವ್ಯಗಳನ್ನು ಎಲ್ಲೆಡೆ ಹರಡಿದರು ಎಂದರು.ಅಕ್ಷರ ಸಂಸ್ಕೃತಿ ಬ್ರಿಟೀಷರಿಂದ ಬಂದ ಬಳುವಳಿಯಾಗಿದೆ. ಅವರು ಭಾರತದ ಹಸ್ತಪ್ರತಿಗಳನ್ನು ಶೋಧ ಮಾಡಿ ಪ್ರಚುರಪಡಿಸಿದರು. ಶಿಕ್ಷಣದ ಮಹತ್ವ ಅರಿತಿದ್ದ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಹಿಂದುಳಿದ ಮತ್ತು ಶೋಷಿತರ ಧ್ವನಿಯಾಗಿದ್ದ ಅಂಬೇಡ್ಕರ್ ಅವರ ಆಶಯವನ್ನು ಪೂರೈಸಲು ಸರ್ಕಾರದ ವತಿಯಿಂದ ರಾಜ್ಯದಾದ್ಯಂತ ಗ್ರಂಥಾಲಯಗಳನ್ನು ನಿರ್ಮಾಣ ಮಾಡಿದರು.

              ಇಂದು ರಾಜ್ಯದಾದ್ಯಂತ 500ಕ್ಕೂ ಹೆಚ್ಚು ಗ್ರಂಥಾಲಯಗಳು ನೆಲೆಗೊಂಡಿವೆ ಎಂದು ತಿಳಿಸಿದರು.ಕಳೆದ 7 ವರ್ಷಗಳಿಂದ ಸರ್ಕಾರದಿಂದ ಪುಸ್ತಕ ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸುವ ಕಾರ್ಯ ಸ್ಥಗಿತಗೊಂಡಿದೆ. ಪುಸ್ತಕ ಸಂಸ್ಕೃತಿ ಇಂದಿನ ದಿನಮಾನದಲ್ಲಿ ಪುಸ್ತಕೋದ್ಯಮವಾಗಿ ಬದಲಾಗಿದೆ. ಅಭಿನವ ಪ್ರಕಾಶನ, ಲೋಹಿಯಾ ಪ್ರಕಾಶನದಂತಹ ದಿಟ್ಟ ಪ್ರಕಾಶಕರು ಪುಸ್ತಕ ಮುದ್ರಣವನ್ನು ಶಿಕ್ಷಣ ಸೇವೆ ಎಂದು ಪರಿಗಣಿಸಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ಕಲೆ, ಸಾಹಿತ್ಯದ ಆಸಕ್ತಿ ಎಲ್ಲರಲ್ಲಿಯೂ ಕ್ಷೀಣಿಸುತ್ತಿದೆ. ಓದುವ, ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

             ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ವಿವಿಧ ತಾಂತ್ರಿಕ ಕೋರ್ಸ್‌ಗಳನ್ನು ಶೀಘ್ರದಲ್ಲೆ ಆರಂಭಿಸುವುದಾಗಿ ಕುಲಪತಿಗಳು ಘೋಷಿಸಿದರು.ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ವಿವಿಯ ಸಿಂಡಿಕೇಟ್ ಸದಸ್ಯರಾದ ಬಿ ಪೀರ್‌ಬಾಷಾ, ಶಿವಕುಮಾರ್ ಕೆ ಮತ್ತು ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನ. ರವಿಕುಮಾರ್ ವೇದಕೆಯಲ್ಲಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿವಿಯ ಪ್ರಸಾರಾಂಗದ ಪ್ರಭಾರ ನಿರ್ದೇಶಕರಾದ ಪ್ರೊ ತಿಪ್ಪೇರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಪ್ರೊ ಅರುಣ್‌ಕುಮಾರ್ ಲಗಶೆಟ್ಟಿ ಸ್ವಾಗತಿಸಿದರು. ಡಾ ಶಶಿಧರ್ ಕೆಲ್ಲೂರ್ ನಿರೂಪಿಸಿದರು.  ಎರಡು ದಿನಗಳ ಕಮ್ಮಟದಲ್ಲಿ ಒಟ್ಟು 5 ಚರ್ಚಾಗೋಷ್ಠಿಗಳು ನಡೆಯಲಿವೆ. ರಾಜ್ಯದ ವಿವಿಧ ಪ್ರಕಾಶಕರು, ಚಿಂತಕರು, ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.  ವಿವಿಯ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರುಗಳು, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.