ತ್ರಿವಿಧ ದಾಸೋಹಿ ಪೂಜ್ಯಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ 135ನೇ ಜಯಂತಿ ಮಹೋತ್ಸವ

Trividha Dasohi Pujyashri Dr. 135th Jayanti Mahotsava of Shiv Basava Mahaswamy

ತ್ರಿವಿಧ ದಾಸೋಹಿ ಪೂಜ್ಯಶ್ರೀ ಡಾ. ಶಿವಬಸವ ಮಹಾಸ್ವಾಮಿಗಳ 135ನೇ ಜಯಂತಿ ಮಹೋತ್ಸವ

ಬೆಳಗಾವಿ 07: ಕಾಯವು ಸೇವಾದರ್ಮದ ಕಾಯಕವೆಂದು ನಂಬಿ. ನುಡಿದು ನಡೆಯುದಕ್ಕಿಂತ ಮೌನಿಯಾಗಿ ನಡತೆಯಲ್ಲಿಯೇ ನುಡಿಯ ಮರ್ಮ ತಿಳಿಹೇಳಿ ದಾಸೋಹ ದೃಷ್ಟಿಯಲ್ಲಿ ಶಿವ, ಕಾಯಕ ನಿಷ್ಠೆಯಲ್ಲಿ ಬಸವರಾಗಿ ಸಮಾಜಕ್ಕೆ ಸನ್ಮಾರ್ಗವನ್ನು ತೋರುತ್ತ ಅರಮನೆ ಗುರುಮನೆಗಳಿಗೆ ದಾರೀದೀಪವಾಗಿ, ಮಕ್ಕಳ ಶಿಕ್ಷಣಕ್ಕೆ ಜ್ಞಾನಸುಧೆಯಾಗಿ, ಆಕಾಶದಲ್ಲಿ ನಕ್ಷತ್ರದಂತೆ ಹೊಳೆಯುತ್ತಿರುವ ಕಾಯಕಯೋಗಿ, ದಾಸೋಹಯೋಗಿ, ಶಿಕ್ಷಣಯೋಗಿ, ಬೆಳಗಾವಿ ಭಾಗದ ಸುತ್ತಮುತ್ತಲಿನ ಬಡವರ ಮನೆ, ಮನದಲ್ಲಿ ನಿತ್ಯ ದೀಪವಾಗಿ ಬೆಳಗುತ್ತಿರುವ ಅನ್ನಪ್ರಭು, ಶತಾಯುಷಿ,  ಶಿವಬಸವ ಸ್ವಾಮಿಗಳು.  

  ಅಡಿವಯ್ಯ, ರುದ್ರಮ್ಮ ಅವರೀರ್ವರ ತಪದಫಲವೆಂಬಂತೆ ಗದಿಗೆಮ್ಮ, ಬಸವಲಿಂಗಯ್ಯ, ನೀಲಮ್ಮ ಎಂಬ ಮೂರು ಜನ ಹುಟ್ಟಿದ ತರುವಾಯ ಕೊನೆಯವರಾಗಿ ಪ್ರಸಾದ ಮೂರ್ತಿ ಶ್ರೀ ಶಿವಬಸವ ಸ್ವಾಮಿಗಳು ದಿನಾಂಕ:8-12-1889 ರಂದು ಸೂರ್ಯೋದಯದ ಸಂದರ್ಭದಲ್ಲಿ ಜನ್ಮವೆತ್ತಿದರು. ಚಿಕ್ಕ ಮಗುವಾಗಿ ಲೀಲೆ ಆಡಿದಂತೆ ಆರೇಳು ತಿಂಗಳು ಕಳೆಯುತ್ತಿದ್ದಂತೆ ಇವರ ತಂದೆಯಾದ ಶ್ರೀ ಅಡಿವಯ್ಯನವರು ಶಿವಾಧೀನರಾದರು. ಮಕ್ಕಳ ಎಲ್ಲ ಲಾಲನೆ, ಪಾಲನೆ, ಪೋಷಣೆ ಭಾರವೆಲ್ಲ ತಾಯಿ ರುದ್ರಮ್ಮನವರ ಮೇಲೆ ಬಿದ್ದಿತ್ತು.  

 ಹೀಗೆ ಕೆಲವುದಿನಗಳುರುಳಿದ ನಂತರ ಒಂದು ದಿನ ಶ್ರೀ ಅಥಣಿಯ ಮುರಿಘೇಂದ್ರ ಶಿವಯೋಗಿಗಳು ಒಂದು ಕಾರ್ಯ ನಿಮಿತ್ತ ಸವದತ್ತಿಗೆ ಬರಬೇಕಾಗಿತ್ತು. ದಾರಿಯಲ್ಲಿ ಅನೇಕ ಭಕ್ತವೃಂದರ ಭಿನ್ನಾನಕ್ಕೆ ಅವರ ಮನೆಗೆ ಪಾದಸ್ಪರ್ಶದಿಂದ ಪವಿತ್ರಗೊಳಿಸುತ್ತ ಅವರನ್ನು ಪ್ರಸಾದಾಶೀರ್ವಾದಗಳು ಕರುಣಿಸುತ್ತ, ಅನುಗ್ರಹಿಸುತ್ತಾ ಕ್ರಮಿಸುತ್ತಿದ್ದರು.  

 ಶಿವಯೋಗಿಗಳು ಸವದತ್ತಿ ಹೊರಟ ಮಾರ್ಗದಲ್ಲಿ ಹಿರೇಕೊಪ್ಪ ಹತ್ತಿತು. ಇದು ಶಿವನಿಚ್ಛೆಯುಯಾಗಿತ್ತೆಂದು ಕಾಣುತ್ತದೆ. ಈ ಊರಿನ ಸದಾಚಾರಿಯೂ ಗುರು ಜಂಗಮ ಭಕ್ತನಾದ ತೋಡಕರ ಬಾಳಪ್ಪನೆಂಬ ಭಕ್ತ ಶಿವಯೋಗಿಗಳಿಗೆ ನನ್ನ ಮನೆಗೆ ಬರಬೇಕೆಂದು ಕೇಳಿಕೊಂಡು ಭಿನ್ನಾಹವನ್ನು ಮಾಡಿಕೊಂಡನು. ಶಿವ ಭಕ್ತಿ ಪಾರಾಯಣೆಯಾದ ರುದ್ರಮ್ಮನವರು ತನ್ನ ಮಗುವಾದ ಶಿವಬಸವವರನ್ನು ಎತ್ತಿಕೊಂಡು ಬಂದಿದ್ದಳು. ಮುರಘೇಂದ್ರ ಶಿವಯೋಗಿಗಳು ಶಿವಯೋಗ ಸಮಾಧಿಗೆ ಸಂದಿದ್ದರು. ಆಗ ರುದ್ರಮ್ಮ ಪ್ರಸಾದ ಪಾಕದ ಮಗ್ನದಲ್ಲಿದ್ದಾಗ ಬಗಲಲ್ಲಿದ್ದ ಮಗು ಕೆಳಗಿಳಿದು ಮಂಡೆಗಾಲು ಹಾಕುತ್ತಾ ಶಿವಯೋಗಿಗಳು ಕುಳಿತ ಏಕಾಂತ , ಪ್ರಶಾಂತವಾದ ಶಿವಪೂಜೆ ಮನೆಯಲ್ಲಿ ಮೆಲ್ಲನೆ ಪ್ರವೇಶಿಸಿತು. ಎಲ್ಲರೂ ಶಿವಪೂಜೆಯಲ್ಲಿ ನಿರತರಾದ್ದರಿಂದ ಗಮನ ಯಾರೂ ಹರಿಸಿರಲಿಲ್ಲ. ಆಗ ಆ ಮಗು ಅಲ್ಲಿದ್ದ ಪಾತ್ರೆ, ತಂಬಿಗೆ, ಮಿಳ್ಳೆ, ವಿಭೂತಿ, ಗಂಧ, ಧೂಪ, ದೀಪ, ಗಮನಿಸುತ್ತಾ ಗಂಟೆ ಕಡೆಗೆ ಲಕ್ಷ್ಯ ವಹಿಸಿ ಗಂಟೆಯನ್ನು ಕೈಗೆತ್ತಿಕೊಂಡು ಕೈಯಿಂದ ನಾದ ಹೊರಡಿಸಿತು. ಮಗುವಿಗೆ ಕುತೂಹಲಗೊಂಡು ಕೈಯಿಂದ ಟಿಂಗ್ ಟಿಂಗ್ ನಾದ ಮಾಡುತ್ತಾ ಕುಳಿತಿತು. ಆಗ ಶಿವಯೋಗಿಗಳ ಪೂಜಾ ಸಮಾಪ್ತಿ ನಂತರ ಮಗುವಿನ ಕಡೆಗೆ ದೃಷ್ಟಿ ಹಾಯಿಸುತ್ತ ಸ್ನಿಗ್ಧಮುಗ್ದಭಾವದಿಂದ ‘ಮಗು ಯಾರದೆಂದು’ ಕೇಳಿದರು. ಆಗ ತಾಯಿ ರುದ್ರಮ್ಮ ಯೋಗಿಗಳ ಪೂಜೆ ಭಂಗವಾಯಿತೆಂದು ತಿಳಿದು ಭಯಚಕಿತಾಳಾಗಿ ಏನು ಅರಿಯದ ಮುಗ್ಧ ಮಗು ಮಾಡಿದ ತಪ್ಪನ್ನು ಕ್ಷಮಿಸಬೇಕೆಂದು ವಿನಯತೆಯಿಂದ ಪ್ರಾರ್ಥಿಸಿದಳು. ಆಗ ಮುರಘೇಂದ್ರ ಶಿವಯೋಗಿಗಳು ನುಸುನಗುತ್ತ ರುದ್ರಮ್ಮನಿಗೆ ಹೇಳಿದರು ಈ ಮಗು ಪೂಜಾ ಪ್ರಸಾದ ಸಮಯದಲ್ಲಿ ಇಲ್ಲಿ ಬಂದಿರುವುದರಿಂದ ‘ಪ್ರಸಾದ’ ಜೀವನದಲ್ಲಿ ಯಶವಂತನಾಗುವನ್ನು, ಸಹಸ್ರ ಜೀವಿಗಳಿಗೆ ಪ್ರಸಾದ ಕರುಣಿಸಿ ಪ್ರಸಾದ ಮೂರ್ತಿಯಾಗುವನು ಎಂದು ಭವಿಷ್ಯ ನುಡಿದರು. ಮುಂದೆ ಈ ಮಗುವನ್ನು ನನಗೆ ಕೊಡುವೆಯಾ ಎಂದು ಕೇಳಿದರು ಆಗ ತಾಯಿ ಇಲ್ಲವೆನ್ನದೆ ಒಪ್ಪಿಕೊಂಡು ಅವರಡಿ ನೆಲ ಮುಟ್ಟಿ ನಮಸ್ಕರಿಸಿದಳು. ಅಂದು ಮಾಡಿದ ಶ್ರೀಗಳ ಆಶೀರ್ವಾದ ಕರುಣೆಯ ಕೃಪೆಯೇ ಇಂದಿಗೂ ಭದ್ರರಕ್ಷೆಯಾಗಿ ನಿಂತಿದೆ.  

 ಶಿವಬಸವ ಸ್ವಾಮಿಗಳು ಆರೇಳು ವರ್ಷದವರಿದ್ದಾಗ ತಾಯಿ ರುದ್ರಮ್ಮನವರು ಶಿವಾಧೀನರಾದರು. ಮನೆಯ ಎಲ್ಲ ಜವಾಬ್ದಾರಿಯು ಇವರಿಗೆ ಬಿದ್ದಿದ್ದು. ಅಕ್ಕಂದಿರಾದ ಗದಿಗೆಮ್ಮ, ನೀಲಮ್ಮ ಮದುವೆಯಾಗಿ ಹೋದರು, ಅಣ್ಣ ಬಸವಲಿಂಗಯ್ಯ ಅಶಕ್ತನಾಗಿರುವುದರಿಂದ ದುಡಿಯಲು ಆಗುತ್ತಿರಲಿಲ್ಲ ಮನೆಯ ಎಲ್ಲಾ ಜವಾಬ್ದಾರಿಯು ನೋಡಿ ಒಳಗೊಳಗೆ ಚಡಪಡಿಸಿದರು. ಆದರೇನು? ಇಂಥಹ ಪರಿಸ್ಥಿತಿಯಲ್ಲಿ ಈ ಪ್ರಪಂಚದ ಹೊಣೆಯನ್ನು ನಿರ್ವಹಿಸುವಲ್ಲಿ ಮುಂದಾದರು. “ಕರದ ಕಪ್ಪರವುಂಟು ಹಿರಿಯದೊಂದು ನಾಡುಂಟು ಹರನೆಂಬ ದೈವನಮಗುಂಟು ತಿರಿವರಿಂಸಿರಿವಂತರಾಗಿಲ್ಲ ಸರ್ವಜ್ಞ” 

ಎಂಬುವುದನ್ನು ಸ್ಮರಿಸಿ ಕೈಯಲ್ಲಿ ಭಿಕ್ಷೆಯ ಕಾಯಕ್ಕಾಗಿ ಜೋಳಿಗೆ ಹೇಳಿದರು. ಇದೇ ಕಾಲಕ್ಕೆ ನಾಗನೂರು ರುದ್ರಾಕ್ಷಿ ಮಠಕ್ಕೆ ಆರನೇಯವರಾಗಿ ಉತ್ತರಾಧಿಕಾರಿಯಾಗಿದ್ದ ವೀರಭದ್ರ ಮಹಾಸ್ವಾಮಿಗಳು ಶಿವಲೀಲೆಯ ಸಫಲದಂತೆ ಸಾರ್ಥಕ ಪಡಿಸಿ ಲಿಂಗೈಕ್ಯರಾಗಿದ್ದರು. ಮುಂದೆ ಏಳನೆಯ ಉತ್ತರಾಧಿಕಾರಿಯಾಗಿ ಓರ್ವ ಯೋಗ್ಯ ಉತ್ತರಾಧಿಕಾರಿಯನ್ನು ಆರಿಸುತ್ತಿದ್ದರು. ಆಗ ನಾಗನೂರಿನ ಗುರುಪಾದಯ್ಯನವರು,ಶಿಲಯ್ಯನವರ ಮಠ(ಮೂಗಡ್ಲಿಮಠ) ಎಂಬುವರು ಹೀರೆಕೊಪ್ಪಕ್ಕೆ ಬಂದಾಗ ಅಣ್ಣತಮ್ಮಂದೀರೀರ್ವರನ್ನು ಕಂಡು “ಮನೆ ನೋಡ ಬಡವರು, ಮನ ನೋಡಾ ಘನ ಮನ ಸಂಪನ್ನರು” ಎಂಬ ಶಿವಾನುಭವಕ್ಕೆ ಜೀವಂತ ಸಾಕ್ಷಿಯಾಗಿದ್ದರು. ಹೀಗಾಗಿ ಶಿವಬಸವ ಸ್ವಾಮಿಗಳು ಉತ್ತರಾಧಿಕಾರಿಯಾಗಿ ನೀಡಲು ಒಮ್ಮನಸಿನಿಂದ ಒಪ್ಪಿಕೊಂಡರು. ಏಳನೆಯ ಉತ್ತರಾಧಿಕಾರಿ ಎಂಟು ವರ್ಷದ ಪ್ರಾಯ, ಈ ಕಾಲವು ನಾಗನೂರು ರುದ್ರಾಕ್ಷಿ ಮಠದ ಸುವರ್ಣ ಯುಗವೆಂದು ಕರೆಯಲಾಗಿದೆ. ನಾಗನೂರು ಮಠವು ಶಿಕ್ಷಣ, ಅನ್ನದ ಅವಶ್ಯ ಪೂರೈಸುವಲ್ಲಿ ಶಿವಬಸವ ಸ್ವಾಮಿಗಳು ದೃಢಸಂಕಲ್ಪ ಮಾಡಿದರು. ಇವರ ಗುರುಗಳಾದ ಕುಮಾರೇಶ್ವರ ಸ್ವಾಮಿಗಳು ಹೇಳುತ್ತಿದ್ದರಂತೆ ಎಲ್ಲೆಲ್ಲಿ ಶಿಕ್ಷಣ ಸಂಸ್ಥೆ ತೆರೆಯುತ್ತಾರೆ ಅಲ್ಲಲ್ಲಿ ಪ್ರಸಾದ ನಿಲಯ ಪ್ರಾರಂಭಿಸಿ ಹಣದ ತೊಂದರೆ ಬಂದರೆ ಭಿಕ್ಷೆ ಬೇಡಿ ಮಕ್ಕಳ ಭವಿಷ್ಯದ ಕಡೆಗೆ ಸಂಕಲ್ಪ ಮಾಡಿ ಎಂದು ಹೇಳಿದರು. ಹೀಗಾಗಿ ಉತ್ತರವಾಗಿ ಬೆಳಗಾವಿಯ ದುರ್ಗಾದಲ್ಲಿ 1932 ರಲ್ಲಿ 25 ವಿದ್ಯಾರ್ಥಿಗಳನ್ನೋಳಗೊಂಡ ಚಿಕ್ಕಪ್ರಸಾದ ನಿಲಯ ಸ್ಥಾಪಿಸಿದರು. 1940 ರಲ್ಲಿ ಶಾಪುರದಲ್ಲಿದ್ದ ಬೋಳಮಲ್ಲನವರ ಮನೆ ಕಣ್ಣಿಗೆ ಬಿದ್ದಿದ್ದು ಅಲ್ಲಿ 50-60 ವಿದ್ಯಾರ್ಥಿಗಳು ವಸತಿ ಸೌಕರ್ಯವಿರುವುದರಿಂದ ಬೆಳಗಾವಿಯ ಹನುಮ ಬೀದಿಯಲ್ಲಿ ಈ ಪ್ರಸಾದ ನಿಲಯವನ್ನು 1943ರಲ್ಲಿ ಸ್ಥಳಾಂತರಿಸಲಾಯಿತು. ಒಂದೇ ಸಮಾಜದ ಸಹಸ್ರ ಸಹಸ್ರ ಕೊಡಗೈಗಳು ಈ ಮಠಕ್ಕೆ ದಾನ ನೀಡಲು ಬಂದವು ಹೀಗಾಗಿ ನೂತನ ಕಟ್ಟಡ ನಿರ್ಮಾಣಿಸಿ ಇದರ ಉದ್ಘಾಟನಾ ಸಮಾರಂಭವನ್ನು ಅಂದಿನ ಮೈಸೂರು ಸಂಸ್ಥಾನದ ಶ್ರಿಮನ್ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರು ತಮ್ಮ ಅಮೃತ ಹಸ್ತದಿಂದ ಸೋಮವಾರ 10-09-1951 ರಂದು ವಿಜ್ರಂಭಣೆಯಿಂದ ನೆರವೇರಿಸಿದರು.  

 ಬಾಲ್ಯದಲ್ಲಿ ತಮ್ಮ ಕುಟುಂಬದ ಪೋಷಣೆಗಾಗಿ ಹಿಡಿದ ಜೋಳಿಗೆಯ ಈ ಭಿಕ್ಷಾ ಪಾತ್ರೆಯು ವಿದ್ಯಾರ್ಥಿಗಳ ಪೀಳಿಗೆಯ ಏಳಿಗೆಗಾಗಿ ಪ್ರಸಾದವನ್ನು ಅನುಗ್ರಹಿಸುವ ಅಕ್ಷಯ ಪಾತ್ರೆಯಾಗಿದೆ. ಇಂದಿಗೂ ಕೂಡ ಈ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ದೊಡ್ಡ ದೊಡ್ಡ ಹುದ್ದೆಗೆ ಹೋದದ್ದು ಈ ಮಠದ, ಅನ್ನದ ಮಹಿಮೆ. ಹೊಟ್ಟೆ ತುಂಬ ಅನ್ನ, ನೆತ್ತಿ ತುಂಬ ಜ್ಞಾನವೇ ನಾಗನೂರು ರುದ್ರಾಕ್ಷಿ ಮಠದ ಪರಂಪರೆ.