ಸ್ವಾರ್ಥಿಗಳ ಬಾಯಲ್ಲಿನ ಮಹಾಮಂತ್ರ ಎಲ್ಲಿಯವರೆಗೂ ಓಲೈಕೆ ಮಾಡುವರೋ ಅಲ್ಲಿಯವರೆಗೂ ಈ ದೇಶದಲ್ಲಿ ಸುಧಾರಣೆ ತರಲು ಸಾಧ್ಯವೇ ಇಲ್ಲ.
ಸ್ವಾರ್ಥಿಗಳ ಬಾಯಲ್ಲಿನ ಮಹಾಮಂತ್ರ ಎಲ್ಲಿಯವರೆಗೂ ಓಲೈಕೆ ಮಾಡುವರೋ ಅಲ್ಲಿಯವರೆಗೂ ಈ ದೇಶದಲ್ಲಿ ಸುಧಾರಣೆ ತರಲು ಸಾಧ್ಯವೇ ಇಲ್ಲ.
ವಿಜಯಪುರ 16: ಅದ್ಯಾಕೋ ಗೊತ್ತಿಲ್ಲ ಇತ್ತೀಚೆಗೆ ಭಾರತ ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದಾಗ ಇದು ನಿಜಕ್ಕೂ ಭಾರತವೇ? ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಯಾವ ದೇಶದಲ್ಲಿಯೂ ಇಲ್ಲದ ತುಷ್ಟೀಕರಣ ನೀತಿ ನಮ್ಮ ದೇಶದಲ್ಲಿ ತುಂಬಿ ತುಳುಕುತ್ತಿದೆ. ಅಧಿಕಾರದ ಗದ್ದುಗೆಯಲ್ಲಿ ಸದಾ ವಿರಾಜಮಾನರಾಗುವುದಕ್ಕೆಂದು ಏನೆಲ್ಲ ನಡೆಯುತ್ತಿದೆ. ಓಲೈಕೆಯ ರಾಜರಾಣ ಮಾಡುತ್ತ ಒಬ್ಬರ ನಂಬಿಕೆಯನ್ನು ಗಳಿಸಿಕೊಳ್ಳುವುದಕ್ಕೆ ಹೋಗಿ ಇನ್ನೊಬ್ಬರ ಭಾವನೆಗೆ ಬೆಂಕಿ ಇಟ್ಟು ಚಳಿ ಕಾಯಿಸಿಕೊಳ್ಳುವುದು ಇಂದು ಸರ್ವೆ ಸಾಮಾನ್ಯವಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ತೋರಿಸುವುದಕ್ಕೆ ಮುಂದಾಗುವ ಕೆಲವು ನಾಯಕರುಗಳು ಲಜ್ಜೆಗೇಡಿಗಳಂತೆ ಹೇಳಿಕೆ ನೀಡುವುದು, ಇತಿಹಾಸವನ್ನೇ ಬುಡಮೇಲು ಮಾಡಿ ಮಾತಾಡುವುದು, ತಮಗೆ ಅನುಕೂಲವಾಗುವಂತೆ ಚರಿತ್ರೆಯನ್ನು ತಿರಚುವುದು, ಅಂದಾಭಿಮಾನಿಗಳ ಶಿಳ್ಳೆ ಚಪ್ಪಾಳೆಗಳ ಗುಂಗಿನಲ್ಲಿ ಬಾಯಿಗೆ ಬಂದಂತೆ ಹರಟುವುದು, ಥೇಟ್ ಸಿನೆಮಾ ಸ್ಟೈಲಿನಲ್ಲಿ ಡೈಲಾಗ್ ಹೊಡೆಯುವುದು ಸ್ವಯಂ ತನ್ನ ಧರ್ಮವನ್ನು ಧಿಕ್ಕರಿಸಿ ಅನ್ಯ ಧರ್ಮವನ್ನು ಹೊಗಳುವುದು, ನಾನು ಜಾತ್ಯಾತೀತ ವ್ಯಕ್ತಿ ಎಂದು ಸ್ವಯಂಘೋಷಿತ ದೇವಮಾನವನಂತೆ ತನ್ನನ್ನು ತಾನು ಹೊಗಳಿಕೊಂಡು ಎದುರಿಗಿರುವವನ್ನು ಹೊನ್ನಶೂಲಕ್ಕೇರಿಸುವುದು. ಇದೆಲ್ಲವನ್ನು ನೋಡಿದ ಮೇಲೆ ನಿಜಕ್ಕೂ ನನಗೆ ಅನಿಸುತ್ತಿದೆ ನಾವಿರುವುದು ಭಾರತದಲ್ಲಿಯೇ ಎಂದು. ಇನ್ನೂ ಒಂದು ವಿಚಿತ್ರ ಎಂದರೆ ನಮ್ಮ ದೇಶವನ್ನು ಆಳ್ವಿಕೆ ಮಾಡಿ ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡ ದೇಶಕ್ಕೆ ಹೋಗುವ ನಮ್ಮ ದೇಶದ ನಾಯಕರುಗಳು ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ ದಯವಿಟ್ಟು ಅದನ್ನು ಉಳಿಸಿಕೊಡಿ ಎಂದು ಮಾತನಾಡುವುದನ್ನು ಕಂಡಾಗ ಇವರೇನು ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಒಂದು ಕಾಲದಲ್ಲಿ ಯಾವ ದೇಶವನ್ನು ಕಂಡರೆ ವಿದೇಶಿಯರು ಕೈ ಎತ್ತಿ ಮುಗಿಯುತ್ತಿದ್ದರೋ ಇಂದು ಆ ದೇಶವನ್ನು ತೋರಿಸಿ ಕೈ ತಟ್ಟಿ ನಗುವಂತಹ ಸ್ಥಿತಿ ಬಂದೊದಗಿದೆ. ವಾಸ್ತವದ ಚಿತ್ರಣ ಈ ರೀತಿ ಇರುವಾಗ ಭವಿಷ್ಯದ ಭಾರತ ಇನ್ನು ಹೇಗಿರುತ್ತದೆ ಎನ್ನುವುದೇ ಕೋಟಿ ಮೌಲ್ಯದ ಪ್ರಶ್ನೆಯಾಗಿದೆ. ಇದರ ಮಧ್ಯದಲ್ಲಿ ಸಂವಿಧಾನ ಅಪಾಯದಲ್ಲಿದೆ ಅಪಾಯದಲ್ಲಿದೆ ಎಂದು ಹೇಳಿ ಅದರ ಕುರಿತು ಚರ್ಚೆ ಮಾಡುವ ನಮ್ಮ ನಾಯಕರುಗಳನ್ನು ನೋಡಿದಾಗ ನನಗೆ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಏಕೆಂದರೆ ಸಂವಿಧಾನದಲ್ಲಿ ಬಳಸಿದ ಪದಗಳೇ ಇಲ್ಲಿ ಅರ್ಥ ಕಳೆದುಕೊಳ್ಳುತ್ತಿರುವಾಗ ಇವರು ಯಾವುದರ ಬಗ್ಗೆ ಮಾತನಾಡುತ್ತಾರೋ ಗೊತ್ತಾಗುತ್ತಿಲ್ಲ.
ಅದರಲ್ಲೂ ದೊಡ್ಡ ದೊಡ್ಡ ವೇದಿಕೆಗಳ ಮೇಲೆ ನಿಂತು ಪುಂಕಾನುಪುಂಕವಾಗಿ ಭಾಷಣ ಬಿಗಿಯುವ ಎಡಬಿಡಂಗಿಗಳು ಸರಳವಾಗಿ ಬಳಸುವ ಈ ಮಹಾನ್ ಪದಗಳ ಅರ್ಥ ಅವರಿಗಂತೂ ಪರಿಚಯವೇ ಇಲ್ಲ. ನಮಗೂ ಕೂಡ ಗೊತ್ತಿಲ್ಲ ಬಿಡಿ. ಇವರೆಲ್ಲರ ಮಾತುಗಳನ್ನು ಕೇಳಿದ ಮೇಲೆ ಸಂವಿಧಾನದಲ್ಲಿ ಆ ಪದಗಳನ್ನು ತಪ್ಪಾಗಿ ಅರ್ಥೈಸಲಾಗಿದೆಯೋ ಅಥವಾ ನಾನೇ ತಪ್ಪಾಗಿ ತಿಳಿದುಕೊಂಡಿದ್ದೇನೋ ಎನ್ನುವ ಅನುಮಾನ ಉಂಟಾಗುತ್ತಿದೆ. ಒಟ್ಟಿನಲ್ಲಿ ಕೆಲವು ಪದಗಳನ್ನು ಪರಿಣಾಮಕಾರಿ ಭಾಷಣಕ್ಕಾಗಿ ಬಳಕೆ ಮಾಡಿಕೊಂಡು ಪರಿಣಾಮಕಾರಿ ಜಾಗದಲ್ಲಿ ಪ್ರಚೋಧನಕಾರಿ ಭಾಷಣವನ್ನು ಮಾಡುತ್ತ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಸ್ವಾರ್ಥವನ್ನು ಸದ್ಭಳಕೆ ಮಾಡಿಕೊಳ್ಳುತ್ತಿರುವುದಂತೂ ಸ್ಪಷ್ಟವಾಗುತ್ತಿದೆ. ಅಷ್ಟಕ್ಕೂ ಅನುಮಾನ ಮೂಡಿಸಿದ ಪದಗಳು ಯಾವವು ಎನ್ನುವ ಭಾವನೆ ನಿಮ್ಮಲ್ಲಿ ಮೂಡುತ್ತಿದೆ ಎನ್ನುವುದು ನನಗೆ ಗೊತ್ತು. ನಾನು ಹೇಳಿದ ಮೇಲೆ ನೀವು ಕೂಡ ಈ ಪದಗಳಾ...! ಎಂದು ರಾಗವನ್ನು ತೆಗೆದ ಬಾಯಿಯಿಂದಲೇ ಅದರ ಮರ್ಮವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಾಗ ಹೌದಲ್ಲ ಇವರು ಹೇಳುವ ಮಾತಿನಲ್ಲಿ ಅರ್ಥವಿದೆಯಲ್ಲ ಎನ್ನುವ ಸ್ವರ ಹೊರಡಿಸುವುದರಲ್ಲಿ ಅನುಮಾನವಿಲ್ಲ.
ಚಿಕ್ಕ ವಯಸ್ಸಿನಿಂದಲೂ ನಮಗೆ ಶಾಲಾ ಕಾಲೇಜುಗಳ ಕಾರ್ಯಕ್ರಮದಲ್ಲಿ ಬರುವಂತ ಅತಿಥಿಗಳು ಭಾರತ ದೇಶದ ಬಗ್ಗೆ ಮಾತನಾಡುತ್ತ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತಿದ್ದರು. ಸರ್ವ ಜನಾಂಗದ ಶಾಂತಿಯ ತೋಟ ಭಾರತ ಎಂದು ಹೇಳುತ್ತಿದ್ದರು. ಅದನ್ನು ಕೇಳಿ ನಾವು ಚಪ್ಪಾಳೆ ತಟ್ಟುತ್ತಿದ್ದೇವು. ವಿವಿಧತೆಯಲ್ಲಿ ಏಕತೆ ಹೊಂದಿದ ಏಕೈಕ ರಾಷ್ಟ್ರ ಭಾರತ ಎಂದು ಮೇಷ್ಟ್ರು ಪಾಠ ಮಾಡುವಾಗ ಅದನ್ನು ಕೇಳಿ ನಮ್ಮ ನಮ್ಮ ಮನೆ ಹಾಗೂ ವೇಶ ಭೂಷಣಗಳನ್ನು ಕಲ್ಪಿಸಿಕೊಂಡು ಹೋಲಿಕೆ ಮಾಡಿ ಒಪ್ಪಿಕೊಳ್ಳುತ್ತಿದ್ದೇವು. ಹಲವು ಧರ್ಮಗಳ ತವರೂರು ಭಾರತವಾದರೂ ನಾವೆಲ್ಲರೂ ಭಾರತೀಯರು ಎನ್ನುವ ಮಾತನ್ನು ಕೇಳಿ ಸಂತೋಷ ಪಡುತ್ತಿದ್ದೇವು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರ ತುಪಾಕಿಯಿಂದ ಸಿಡಿದ ಗುಂಡು ಧರ್ಮ ಯಾವುದು ಎಂದು ಲೆಕ್ಕಿಸದೇ ದೇಶಕ್ಕಾಗಿ ಯಾರು ಹೋರಾಡುತ್ತಿದ್ದರೋ ಅವರ ಎದೆಯನ್ನು ಸೀಳಿದೆ ಎನ್ನುವ ಮಾತಿನಿಂದ ಈ ದೇಶಕ್ಕಾಗಿ ಪ್ರಾಣ ನೀಡಿದವರಿಗೆ ದೇಶ ಮುಖ್ಯವಾಗಿತ್ತೇ ಹೊರತು ಧರ್ಮ ಮುಖ್ಯವಾಗಿರಲಿಲ್ಲ ಎನ್ನುವುದನ್ನು ಅರಿತುಕೊಂಡು ಖುಷಿ ಪಡುತ್ತಿದ್ದೆವು. ಆದರೆ ಬದಲಾದ ಕಾಲಘಟಕ್ಕನುಗುಣವಾಗಿ ಬದಲಾದ ಜನಗಳ ಮಾನಸಿಕ ಮಟ್ಟದ ಫಲದಿಂದ ಭಾವನೆಗಳೇ ಬದಲಾಗಿ ಬಿಟ್ಟಿವೆ. ಅದರೊಂದಿಗೆ ಜಗತ್ತಿನ ಶ್ರೇಷ್ಠ ಸಂವಿಧಾನಗಳ ಸಾಲಿನಲ್ಲಿ ನಿಲ್ಲುವ ಭಾರತ ಸಂವಿಧಾನವು ಕೂಡ ತನ್ನ ಆಶಯವನ್ನು ಕಳೆದುಕೊಂಡು ಕಂಗಾಲಾಗುತ್ತಿದೆ ಎನಿಸುತ್ತಿದೆ.
ಮೂಲ ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಇಲ್ಲದೇ ಹೋದ ಪದಗಳನ್ನು ಈ ದೇಶದಲ್ಲಿನ ಅಗತ್ಯತೆಯನ್ನು ಮನಗಂಡು 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವುದರ ಮೂಲಕ ಜಾತ್ಯತೀತ, ಭ್ರಾತೃತ್ವ, ಸಮಾಜವಾದ ಎನ್ನುವ ಪದಗಳನ್ನು ಅಳವಡಿಸಲಾಯಿತು. ಅದರಲ್ಲೂ ಜಾತ್ಯಾತೀತ ಹಾಗೂ ಭ್ರಾತೃತ್ವ ಪದಗಳ ಅಳವಡಿಕೆಯೊಂದಿಗೆ ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವೆಂದು ಘೋಷಣೆ ಮಾಡದೇ ಸರ್ವ ಧರ್ಮಗಳಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಡುವುದರ ಮೂಲಕ ಭಾವೈಕ್ಯತೆಯ ತತ್ವವನ್ನು ಎತ್ತಿ ಹಿಡಿಯಲಾಯಿತು. ವಿಚಿತ್ರ ಎಂದರೆ ಭಾರತ ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿಯೇ ಭಾರತಕ್ಕೆ ಹಿಂದೂಸ್ಥಾನ ಎಂದು ಕರೆಯಬೇಕು ಎಂದು ಬೇಡಿಕೆ ಬಂದಿತು. ಆದರೆ ಹಿಂದೂ ಎನ್ನುವುದು ಒಂದು ಧರ್ಮವನ್ನು ಸೂಚಿಸುತ್ತದೆ ಹೀಗಾಗಿ ಬೇಡ ಎಂದು ಕೆಲವರು ವಾದ ಮಾಡಿದರು. ಆಗ ಇಂಡಿಯಾ ಯಾನೆ ಭಾರತ ಎನ್ನುವ ಪದವನ್ನು ಬಳಕೆ ಮಾಡಲಾಯಿತು. ಧರ್ಮ ಸ್ಪರ್ಷ ಬೇಡ ಎನ್ನುವ ದೃಷ್ಠಿಯಲ್ಲಿ ಸಂವಿಧಾನ ರಚನೆ ಮಾಡಲಾಯಿತು. ಮುಂದೆ ಜಾತ್ಯತೀತ ಎನ್ನುವ ಪದವನ್ನು ಸೇರಿಸಲಾಯಿತು. ಆದರೆ ಇಂದೇನಾಗಿದೆ. ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕಾಗಿ ಅಳವಡಿಸಿದ ಈ ಪದಗಳು ಇಂದು ಅರ್ಥ ಕಳೆದುಕೊಳ್ಳುತ್ತಲಿದೆ. ಸಹೋದರತೆ ಎನ್ನುವ ಪದಗಳಿಂದು ಸತ್ತು ಹೋಗಿದೆ. ಜಾತ್ಯಾತೀತ ಎನ್ನುವ ಪದ ಭಾಷಣಕ್ಕಾಗಿ ಬಳೆಕೆಯಾಗುವ ಬಿಟ್ಟಿ ಪದವಾಗಿ ಬಿಟ್ಟಿದೆ. ಸಮಾಜವಾದ ಎನ್ನುವುದು ಸಂತೆಯಲ್ಲಿಟ್ಟ ಸರಕಾಗಿದೆ. ಭಾವೈಕ್ಯತೆ ಎನ್ನುವುದು ಅದಾಗಲೇ ಬಿಕರಿಯಾಗಿ ಹೋಗಿದೆ. ಸಂವಿಧಾನದಲ್ಲಿ ಉಲ್ಲೇಖವಿಲ್ಲದ ಪದಗಳನ್ನಿಟ್ಟುಕೊಂಡು, ಅವುಗಳಿಗಾಗಿಯೇ ವಿಶೇಷ ಕಾನೂನುಗಳನ್ನು ರಚನೆ ಮಾಡಿಕೊಂಡು, ಜಾತ್ಯತೀತ ಭಾರತದಲ್ಲಿ ಓಲೈಕೆ ಎನ್ನುವ ಮುಖವಾಡದಡಿಯಲ್ಲಿ ನಾಟಕವಾಡುವ ನಾಯಕರುಗಳಿಂದಾಗಿ ಈ ದೇಶದ ಶ್ರೇಷ್ಠ ಸಂವಿಧಾನ ಮೂಲ ಉದ್ದೇಶಗಳಿಂದ ದೂರವಾಗಿ ಕೇವಲ ಒಂದು ಹೊತ್ತಿಗೆಯ ರೂಪ ಪಡೆದುಕೊಳ್ಳುತ್ತಿದೆ. ಈ ರೀತಿ ನಡೆಯುತ್ತಿರುವ ಎಲ್ಲ ಘಟನೆಗಳನ್ನು ಕಂಡು ಈ ಸಂವಿಧಾನವನ್ನು ರಚಿಸುವುದಕ್ಕಾಗಿ ಹೆಣಗಿದ ಎಲ್ಲ ಆತ್ಮಗಳು ಇಂದು ಅವಲತ್ತುಕೊಳ್ಳುತ್ತಿವೆ ಎನ್ನುವುದಂತೂ ಸ್ಪಷ್ಟವಾಗಿ ನಾವು ಕಾಣಬಹುದಾಗಿದೆ.
ನಾನು ಬಹಳಷ್ಟು ಜನರ ಬಾಯಿಂದ ಭಾವೈಕ್ಯ ಎನ್ನುವ ಪದವನ್ನು ಕೇಳಿದ್ದೇನೆ. ಈ ಪದವನ್ನು ಉಲ್ಲೇಖಿಸುವ ಪ್ರತಿಯೊಬ್ಬನು ಹೇಳುವ ಮಾತು ‘ನಾನು ಹಿಂದೂ ಧರ್ಮದವನಾದರು ಇಸ್ಲಾಂ ಧರ್ಮವನ್ನು ಗೌರವದಿಂದ ಕಾಣುತ್ತೇನೆ’, ‘ನಾನು ಮುಸ್ಲಿಂನಾದರೂ ಕೂಡ ಹಿಂದೂ ಧರ್ಮವನ್ನು ಪ್ರೀತಿಸುತ್ತೇನೆ’ ಎಂದು ಹೇಳುತ್ತಾನೆ. ಇದನ್ನು ನಾವು ಭಾವೈಕ್ಯತೆ ಎನ್ನುವ ಬಣ್ಣದ ಹಾಳೆಯಲ್ಲಿ ಸಿಂಗರಿಸಿ ಕಾರಹುಣ್ಣಿಮೆಯಲ್ಲಿ ಶೃಂಗಾರ ಮಾಡಿದ ರಾಸುಗಳನ್ನು ಪ್ರದರ್ಶನ ಮಾಡುವಂತೆ ಇವರ ಮಾತನ್ನು ನಂಬಿ ಚಪ್ಪಾಳೆ ತಟ್ಟಿ ಮೂರ್ಖರಾಗುತ್ತೇವೆ. ನಿಜವಾಗಲೂ ಇದು ಭಾವೈಕ್ಯತೆಯೆ? ಭಾವೈಕ್ಯತೆಯನ್ನು ಪ್ರದರ್ಶಿಸುವುದಕ್ಕೆ ಧರ್ಮಗಳನ್ನು ಉಲ್ಲೇಖ ಮಾಡಲೇ ಬೇಕೆ?. ಎಲ್ಲ ಧರ್ಮವನ್ನು ಮೀರಿದ ಭಾರತೀಯ ಎನ್ನುವ ಪದವೊಂದು ಸಾಕಲ್ಲವೇ? ಧರ್ಮವನ್ನು ಮೀರಿ ದೇಶಾಭಿಮಾನ ಬೆಳೆಯಲಿ ಎನ್ನುವ ಕಾರಣಕ್ಕಾಗಿಯೇ ಜಾತ್ಯಾತೀತ ಪದವನ್ನು ಸಂವಿಧಾನದಲ್ಲಿ ಸೇರಿಸಲಿಲ್ಲವೇ? ಈ ರೀತಿ ಧರ್ಮವನ್ನು ಮುಂದಿಟ್ಟುಕೊಂಡು ಭಾವೈಕ್ಯತೆಯ ಬೊಬ್ಬೆ ಹೊಡೆಯುವುದು ಪ್ರಚಾರದ ಭಾಗವಾಗುವುದಿಲ್ಲವೇ? ದೇಶ ಮುಖ್ಯ ಎನ್ನುವುದಾದರೆ ಭಾವೈಕ್ಯತೆ ಎನ್ನುವುದು ಧರ್ಮ ಮೀರಿ ಬೇಳೆಯುವುದಲ್ಲವೇ? ನಮ್ಮ ಜನಗಳ ಎಲ್ಲ ಮಾತುಗಳನ್ನು ಕೇಳಿದ ಮೇಲೆ ಭಾವೈಕ್ಯತೆ ಎನ್ನುವ ಪದ ಅರ್ಥ ಕಳೆದುಕೊಂಡಿದೆ ಎನಿಸುವುದಿಲ್ಲವೇ? ಇದು ಕೇವಲ ್ರಚಾರೀಪ್ರಯ ಜನಗಳ ಕೈಯಲ್ಲಿ ಸಿಕ್ಕ ಆಯುಧವಾಗಿದೆ ಎನಿಸುವುದಿಲ್ಲವೇ? ಹೀಗೆ ಹಲವಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಸದಾ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅದರಲ್ಲೂ ಒಂದು ಧರ್ಮವನ್ನು ಧಿಕ್ಕರಿಸಿ ಮಾತನಾಡುತ್ತ ಇನ್ನೊಂದು ಧರ್ಮವನ್ನು ಹಾಡಿ ಹೊಗಳುವುದು. ಒಂದು ಧರ್ಮವನ್ನು ಓಲೈಕೆ ಮಾಡುವಾಗ ಇನ್ನೊಂದು ಧರ್ಮವನ್ನು ತುಚ್ಯವಾಗಿ ಕಾಣುವುದು ಕೆಲವು ಜನಗಳಿಗೆ ರೂಢಿಗತವಾಗಿ ಬಿಟ್ಟಿದೆ. ಇದನ್ನು ಕಂಡರಂತೂ ಇವರು ಹೇಳುವ ಮಾತುಗಳಿಗೂ ತಮಗೆ ತಾವೇ ಸ್ವಯಂ ಘೋಷಣೆ ಮಾಡಿಕೊಂಡ ಜಾತ್ಯಾತೀತ ವಾದಿಯ ಸೋಗಿಗೂ ಒಂದಕ್ಕೊಂದು ಹೊಂದಾಣಿಕೆಯೇ ಆಗುವುದಿಲ್ಲ. ಆದರೂ ಇವರೆಲ್ಲ ಸಂವಿಧಾನವನ್ನು ಉಲ್ಲೇಖ ಮಾಡಿಕೊಂಡು ಅದರ ಆಶಯದಂತೆ ನಾವು ನಡೆದಿದ್ದೇವೆ ಎಂದು ಹೇಳಿಕೊಂಡು ತಿರುಗುತ್ತಾರೆ. ಅವರ ಲಜ್ಜೆಗೇಡಿ ಹೇಳಿಕೆಗಳನ್ನು ನೋಡಿದಾಗ ನಿಜಕ್ಕೂ ನಾಚಿಕೆಯಾಗುತ್ತದೆ. ಭಾರತ ಸಂವಿಧಾನ ರಚನೆ ಮಾಡುವಾಗ ಅಂಬೇಡ್ಕರ ಈ ದೇಶದ ಸಂವಿಧಾನ ಶ್ರೇಷ್ಠ ಅಥವಾ ಕನಿಷ್ಠವಾಗುವುದು ಅದು ಈ ದೇಶದ ಪ್ರಜೆಗಳ ಮುಂದಿನ ನಡೆಯ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದ್ದು ನನಗೆ ನೆನಪಾದಾಗ ಈಗ ಇದು ಶ್ರೇಷ್ಠವಾಗಿದೆಯೋ ಇಲ್ಲದೇ ಹೋಗಿದೆಯೋ ಎನ್ನುವ ಸಂದಿಗ್ದತೆ ಎದುರಾಗಿ ಉತ್ತರ ಸಿಗಲಾದಂತಾಗುತ್ತದೆ. ಈಗ ನೀವೇ ಹೇಳಿ ಅಂಬೇಡ್ಕರ್ ಹೇಳಿದ ಮಾತು ಈಗ ಏನಾಗಿದೆ?.
ನಮ್ಮ ದೇಶದ ಸಧ್ಯದ ಸ್ಥಿತಿ ಏನಾಗಿದೆ ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ತಮ್ಮಲ್ಲಿ ತಿಳಿಸುವ ಸಣ್ಣ ಪ್ರಯತ್ನ ಮಾಡುತ್ತೇನೆ. ಮೊದಲಿನಿಂದಲೂ ಹಾಡುಗಳನ್ನು ಕೇಳುವುದು, ಕೇಳಿದ ಹಾಡುಗಳಿಗೆ ತಲೆ ದೂಗುವುದು, ಸ್ವಲ್ಪ ಸಮಯವಾಗುತ್ತಲೇ ಆ ಹಾಡನ್ನು ಗುನುಗುತ್ತ ಕೆಲಸ ಮಾಡುವುದು ನನ್ನ ಗುಣ. ಅದರಲ್ಲೂ ರಫೀ ಸಾಹೇಬ, ಕಿಶೋರ ದಾ, ಎಸ್.ಪಿ.ಬಿ ಹಾಗೂ ಪಿ.ಬಿ.ಎಸ್ ಅವರ ಚಿತ್ರಗೀತೆಗಳೆಂದರೆ ಪಂಚಪ್ರಾಣ. ರವೀಂದ್ರ ಹಂದಿಗನೂರ ಹಾಗೂ ಜಗಜಿತ್ಸಿಂಗ್ ಅವರ ಘಜಲ್ಗಳೆಂದರೆ ಹೊಸ ಪ್ರಪಂಚವನ್ನು ನನ್ನೆದುರು ತೆರೆದಿಟ್ಟ ಹಾಗೆಯೆ. ಕೆಲವರು ಹಾಡುವ ಖವ್ವಾಲಿಗಳಂತೂ ನನ್ನನ್ನು ವಾಸ್ತವ ಪ್ರಪಂಚದಿಂದ ಕಲ್ಪನಾ ಲೋಕಕ್ಕೆ ಎಳೆದುಕೊಂಡು ಹೋಗುತ್ತವೆ. ಅದನ್ನು ಹೊರತುಪಡಿಸಿದರೆ ಭಾವಗೀತೆಗೆ ಕಿವಿಯಾಗುವುದು ಜನಪದ ಹಾಡುಗಳಿಗೆ ಧ್ವನಿಯಾಗುವುದು ಸಂಗೀತದ ಮೇಲಿನ ನನ್ನ ಪ್ರೀತಿಗೆ ಸಾಕ್ಷಿಯಾಗಿದೆ. ತನ್ನ ಕುರಿತು ಇಲ್ಲೇಕೆ ಉಲ್ಲೇಖ ಮಾಡುತ್ತಿದ್ದೇನೆ ಎಂದು ದಯವಿಟ್ಟು ಹುಬ್ಬೇರಿಸಬೇಡಿ. ಅಥವಾ ವೈಯಕ್ತಿಕ ವಿಚಾರಗಳನ್ನು ಇಲ್ಲಿ ಬಳಸುತ್ತಿರುವುದಕ್ಕೆ ಮೂಗು ಮುರಿಯಬೇಡಿ. ನಾನಿದನ್ನು ಇಲ್ಲಿ ಹೇಳುವ ಅನಿವಾರ್ಯತೆ ಇರುವುದರಿಂದಲೇ ಅದನ್ನು ಬಳಸುತ್ತಿದ್ದೇನೆ. ಮೇಲೆ ಹೇಳಿದ ಎಲ್ಲರ ಹೆಸರುಗಳನ್ನು ನೀವು ಕೇಳಿರಲೇ ಬೇಕು. ಅದರಲ್ಲಿ ಒಬ್ಬರ ಹಾಡನ್ನಾದರೂ ಕೂಡ ಪ್ರತಿಯೊಬ್ಬರು ಕೇಳಿರಲೇ ಬೇಕು. ಕೇಳಿದ ಮೇಲೆ ನನ್ನ ಹಾಗೆಯೇ ಅವರ ಹಾಡಿನ ಮೋಡಿಗೆ ಒಳಗಾಗಿ ತಲೆದೂಗಿ ತಾಳ ಹಾಕಿರಬೇಕು. ಹಾಗಿದ್ದರೆ ಹೇಳಿ ಇಲ್ಲಿ ಹಾಡು ಕೇಳುವಾಗ ನಿಮ್ಮ ಗಮನಕ್ಕೆ ಬಂದಿದ್ದು ಅವರ ಧ್ವನಿಯೋ? ಅಥವಾ ಅವರ ಧರ್ಮವೋ?. ಧರ್ಮ ಎನ್ನುವ ಪದ ಯಾವೊಬ್ಬನ ಬಾಯಿಂದಲೂ ಬರುವುದಕ್ಕೆ ಸಾಧ್ಯವಿಲ್ಲ. ಕಾರಣ ನಾವು ಅವರನ್ನು ಇಷ್ಟ ಪಡುವುದು ಅವರಲ್ಲಿನ ಪ್ರತಿಭೆಯಿಂದಲೇ ಹೊರತು ಅವರ ಧರ್ಮವಾಗಲಿ ಜಾತಿಯಿಂದಾಗಲಿ ಅಲ್ಲ. ಹಾಗೆಯೇ ಸಲ್ಮಾನ್ ಖಾನ್ ಆಗಲಿ, ಬಿಸ್ಮಿಲ್ಲಾಖಾನ್ ಆಗಲಿ ನಮಗೆ ಇಷ್ಟವಾಗುವುದು ಅವರ ನಟನೆಯಿಂದಾಗಿ ಅವರಲ್ಲಿನ ಸಂಗೀತದಿಂದಾಗಿಯೇ ಹೊರತು ಅವರ ಧರ್ಮದಿಂದ ಅಲ್ಲ. ಕೆ.ಎಸ್.ನಿಸಾರ ಅಹ್ಮದ್, ತಸ್ಲಿಮಾ ನಸ್ರಿನ್, ಸಲ್ಮಾನ್ ರಶೀದ ಅವರು ನಮಗೆ ಪರಿಚಯವಾಗುವುದು ಅವರ ಸಾಹಿತ್ಯದಿಂದಲೇ ಹೊರತು ಅವರ ಧರ್ಮದಿಂದಲ್ಲ. ಈ ಕಾರಣದಿಂದಾಗಿಯೇ ಈ ದೇಶವನ್ನಾಳಿದ ದೊರೆಗಳಲ್ಲಿ ಬಹುಜನರು ಧರ್ಮವನ್ನು ಲೆಕ್ಕಿಸದೇ ಪಾಂಡಿತ್ಯಕ್ಕೆ ಗೌರವ ನೀಡಿ ರಾಜಾಶ್ರಯ ಕೊಡುತ್ತಿದ್ದರು. ಯಾವುದೇ ಧರ್ಮವನ್ನು ಲೆಕ್ಕಿಸದೆ ಭಾರತೀಯ ಎಂದು ಗೌರವಿಸುವುದೇ ನಿಜವಾದ ಭಾವೈಕ್ಯತೆ. ಅದನ್ನು ಬಿಟ್ಟು ತನ್ನ ಧರ್ಮವನ್ನು ಉಲ್ಲೇಖ ಮಾಡಿ ಅನ್ಯ ಧರ್ಮವನ್ನು ಗೌರವಿಸುತ್ತೇನೆ ಎಂದು ಹೇಳುವುದು ಕೇವಲ ನಾಟಕೀಯತೆಯ ಪರಮಾವಧಿಯೇ ಹೊರತು ಭಾರತೀಯತೆಯ ಭಾವೈಕ್ಯತೆ ಅಲ್ಲ.
ಇತ್ತೀಚೆಗೆ ಕೆಲವು ಧರ್ಮಗಳ ಪ್ರತಿಪಾದಕರು ಹಾಗೂ ರಾಜಕೀಯ ನಾಯಕರನ್ನು ಕಂಡಾಗಲಂತೂ ಈ ಜಾತ್ಯತೀತ, ಭಾವೈಕ್ಯತೆ ಎನ್ನುವ ಪದಗಳನ್ನು ಮಣ್ಣಲ್ಲಿ ಮಣ್ಣಾಗಿಸಿ ಬಂದು ಮಾತನಾಡುತ್ತಿದ್ದಾರೇನೊ ಎನಿಸುತ್ತದೆ. ಬೇರೆ ಧರ್ಮಗಳ ಓಲೈಕೆಯೇ ಇಂದಿನ ಭಾವೈಕ್ಯತೆ ಎನ್ನುವ ಮಟ್ಟಕ್ಕೆ ಬಂದು ತಲುಪಿರುವುದು ನಿಜಕ್ಕೂ ಧುರಂತವೇ ಸರಿ. ತನ್ನ ಧರ್ಮವನ್ನು ಹಿಯಾಳಿಸಿ ಅನ್ಯ ಧರ್ಮವನ್ನು ಹೊಗಳುವವರು ಜಾತ್ಯಾತೀತವಾದಿಗಳು ಹಾಗೂ ಭಾವೈಕ್ಯತೆಯ ಸಾಕಾರ ಮೂರ್ತಿ ಎಂದು ಬಿಂಬಿಸಲಾಗುತ್ತದೆ. ಇದರಿಂದ ರೋಷಿ ಹೋದ ಕೆಲವು ಜನಗಳು ಅವರನ್ನು ವಿರೋಧಿಸುವುದಕ್ಕೆ ಹಿಂಸಾ ಮಾರ್ಗವನ್ನು ಅನುಸರಿಸುತ್ತಾರೆ. ಈ ಕಾರಣದಿಂದಾಗಿಯೇ ದೇಶದಲ್ಲಿ ಮತಿಯ ಗಲಭೆಗಳು ಕೋಮು ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧೀಜಿಯವರು ಅನ್ಯ ಕೋಮಿನ ಓಲೈಕೆಯಲ್ಲಿ ತೊಡಗಿಕೊಂಡರು ಎನ್ನುವ ವಾದವಿದೆ. ಕೆಲವರು ಅದು ಅನಿವಾರ್ಯವಾಗಿತ್ತು ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಇದು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ಆದರೆ ಅದರ ಮುಂದುವರಿದ ಭಾಗ ಎನ್ನುವಂತೆ ಧಾರ್ಮಿಕ ಓಲೈಕೆಯು ಮುಂದುವರಿಯುತ್ತಲೇ ಇದೆ. ಈ ದೇಶವನ್ನು ಆಳುವ ಯಾವುದೇ ಪಕ್ಷವನ್ನು ಗಣನೆಗೆ ತೆಗೆದುಕೊಂಡರು ಅಲ್ಲಿರುವುದು ಧರ್ಮದ ಲೆಕ್ಕಾಚಾರವೇ ಹೊರತು ದೇಶದ ಅಭಿವೃದ್ಧಿಯಲ್ಲ. ಕೆಲವು ಪಕ್ಷದ ಹಿಡನ್ ಅಜೆಂಡಾ ಧಾರ್ಮಿಕ ಲೆಕ್ಕಾಚಾರವಾದರೆ ಮತ್ತೆ ಕೆಲವು ಪಕ್ಷಗಳು ನೇರವಾಗಿಯೇ ಓಲೈಕೆಯ ರಾಜಕಾರಣವೇ ತಮ್ಮ ಗೆಲವಿನ ಶಕ್ತಿಯಾಗಿಸಿಕೊಂಡು ತಮ್ಮನ್ನು ಗೆಲ್ಲಿಸಿದ ಧರ್ಮದ ಋಣ ತೀರಿಸುವುದಕ್ಕೆಂದು ಕಾರ್ಯ ಮಾಡುತ್ತಾರೆಯೆ ಹೊರತು ಬೇರೇನು ಅಲ್ಲ. ಆದರೂ ಪ್ರತಿಯೊಬ್ಬರ ಬಾಯಲ್ಲೂ ಜಾತ್ಯತೀತ ಮತ್ತು ಭಾವೈಕ್ಯತೆಯ ಮಂತ್ರ. ಇದನ್ನು ಕಂಡರೇ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಇನ್ನೂ ಕೆಲವರು ಮುಂದುವರೆದು ಭಾವೈಕ್ಯತೆ ಎಂದರೆ ಏನು ಎನ್ನುವುದಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದಿದ್ದಾರೆ. ತನ್ನ ಧರ್ಮವನ್ನು ಬಿಡಬೇಕು ಅನ್ಯ ಧರ್ಮವನ್ನು ಹೊಗಳಬೇಕು. ಇನ್ನೂ ಹೆಚ್ಚಾಗಿ ಪ್ರಚಾರ ಪಡೆಯಬೇಕೆಂದರೆ ತಮ್ಮ ಧರ್ಮದವರನ್ನು ಬಾಯಿಗೆ ಬಂದಂತೆ ಬೈಯಬೇಕು. ಇದೇ ಇಂದು ಮುಂದುವರಿದಿರುವುದು ಈ ದೇಶದ ದೌರ್ಭಾಗ್ಯವೇ ಸರಿ. ತನ್ನ ಧರ್ಮದಲ್ಲಿ ಒಬ್ಬ ಮಾಡುವ ಪೂಜೆ ಪುನಸ್ಕಾರಗಳನ್ನು ಹೀಯಾಳಿಸಿ ಮಾತನಾಡಿ, ನಿರ್ಮಾಣ ಮಾಡಿದ ಮಂದಿರದಲ್ಲಿ ದೇವರು ಸಿಗುತ್ತಾನಾ? ಎಂದು ಪ್ರಶ್ನೆ ಮಾಡಿ. ಆ ದೇವರು ಇವರಿಗೆ ಮಾತ್ರ ಸೀಮಿತಾನಾ? ನಾವುಗಳು ಕೂಡಾ ಅದೇ ಧರ್ಮದವರಾದರೂ ನಾವು ಹೀಗೆ ಮಾಡುತ್ತೀವಾ? ಎಂದು ಹೇಳುತ್ತ ಎದುರಿರುವವರ ಚಿತ್ತ ತನ್ನತ್ತ ಸೆಳೆದು ಚಪ್ಪಾಳೆ ಗಿಟ್ಟಿಸಿಕೊಂಡು ನಾನು ಯಶಸ್ವಿಯಾದೆ ಎಂದುಕೊಂಡು ಬೀಗುತ್ತಾರೆ. ತಮ್ಮ ಧರ್ಮದವರು ಮಾಡಿದರೆ ಕ್ರೈಮು ಇನ್ನೊಂದು ಧರ್ಮದವರು ಮಾಡಿದರೆ ನೇಮು ಎನ್ನುವ ಮಟ್ಟದಲ್ಲಿ ಭಾಷಣ ಬಿಗಿಯುತ್ತಾರೆ. ವಿಚಿತ್ರ ಎಂದರೆ ಕೆಲವು ಧರ್ಮದವರು ತಮ್ಮ ಧರ್ಮ ಶ್ರೇಷ್ಠ ಎಂದು ಹೇಳಿದರೆ ಅದು ಒಡೆದು ಆಳುವ ನೀತಿ. ಅದೇ ಬೇರೊಂದು ಧರ್ಮವನ್ನು ಉಲ್ಲೇಖಿಸಿ ಹೀಯಾಳಿಸಿದರೆ ಅದು ಭಾವೈಕ್ಯತೆಯ ಪ್ರತಿಬಿಂಬ. ಇದನ್ನು ಕಂಡು ಅಳಬೇಕೋ ನಗಬೇಕೋ ಒಂದು ತಿಳಿಯುತ್ತಿಲ್ಲ. ಈ ಎಲ್ಲ ಕಾರಣಗಳಿಂದಲೇ ನೈತಿಕ ಪೊಲೀಸ್ ಗಿರಿ ಹಾಗೂ ಧರ್ಮ ರಕ್ಷಕ ಹೆಸರಿನ ಪಡೆಗಳು ಹುಟ್ಟಿಕೊಳ್ಳುತ್ತಿರುವುದು. ನಾವೇ ಸರಿ ಇಲ್ಲ ಎಂದ ಮೇಲೆ ಎಲ್ಲ ತಪ್ಪಿಗೂ ನಾವೇ ಕಾರಣವಾಗಬೇಕಿತ್ತು. ಆದರೆ ಅದನ್ನು ಬಿಟ್ಟು ನಮ್ಮ ತಪ್ಪನ್ನು ಮುಚ್ಚಿಟ್ಟುಕೊಂಡು ಇತರರ ತಪ್ಪನ್ನು ಎತ್ತಿ ಆಡುವುದರಲ್ಲಿಯೇ ನಮ್ಮ ಸಮಯ ವ್ಯರ್ಥ ಮಾಡುತ್ತಿರುವುದು ನಿಜಕ್ಕೂ ಹೇಸಿಗೆ ತರಿಸುತ್ತಿದೆ. ಇನ್ನೂ ತಮಗೆ ಬೇಡದ ಧರ್ಮದವರು ಏನಾದರೂ ತಪ್ಪು ಮಾಡಿದರೆ ಅದನ್ನು ಉಘ್ರವಾಗಿ ಪ್ರತಿಭಟಿಸುವ ಕೆಲವು ಮನಸ್ಸುಗಳು ಅತಂದೇ ತಪ್ಪನ್ನು ತಮಗೆ ಬೇಕಾದ ಹಾಗೂ ಅದರಿಂದ ಲಾಭ ದೊರೆಯುವ ಧರ್ಮವಾದರೆ ಎಂತದೆ ತಪ್ಪನ್ನು ಕೂಡ ಸಮರ್ಥನೆ ಮಾಡಿಕೊಳ್ಳುತ್ತಾರೆ. ಎದೆಗವಚಿಕೊಂಡು ಅನ್ಯ ಧರ್ಮದವರನ್ನು ತನ್ನವರೆಂದು ಹೇಳಿಕೊಳ್ಳುತ್ತ ತನ್ನ ನಿಜವಾದ ಧರ್ಮದ ಜನಗಳನ್ನು ದೂರ ಇಡುವ ಪ್ರಯತ್ನ ಮಾಡುತ್ತಾರೆ. ಈ ಓಲೈಕೆಯ ಪರಿಣಾಮದಿಂದಾಗಿಯೇ ಇಂದು ನಾನು ಕೇಳುವ ಈ ಎಲ್ಲ ಪ್ರಶ್ನಗಳು ಕೇವಲ ನನಗೆ ಮಾತ್ರವಲ್ಲ ನಿಜವಾದ ಪ್ರತಿಯಬ್ಬ ಭಾರತೀಯನ ಎದೆಯಲ್ಲೂ ಬಂದು ಹೋಗುತ್ತವೆ.
ಬ್ರಿಟೀಷರು ಭಾರತಕ್ಕೆ ಬಂದಿದ್ದು ವ್ಯಾಪಾರಕ್ಕಾಗಿ, ನಂತರ ಗುರಿ ಮಾಡಿಕೊಂಡಿದ್ದು ತಮ್ಮ ಧರ್ಮ ಪ್ರಚಾರಕ್ಕಾಗಿ, ಮುಂದೆ ಹೆಜ್ಜೆ ಇಟ್ಟಿದ್ದು ಮತಾಂತರಕ್ಕಾಗಿ. ಆದರ ಮುಂದುವರಿದ ಭಾಗವೇ ಇಂದಿನ ಆಡಳಿತ ಹಾಗೂ ಆಚರಣೆ ಎನ್ನಬಹುದು. ಲವ್ ಜಿಹಾದ್ ಕಾರ್ಯಕ್ಕೆ ಒಂದು ಕೋಮಿನವರು ಮುಂದಾಗುತ್ತಾರೆ. ಅಲ್ಲಿ ನಡೆದುದ್ದು ಸತ್ಯವೋ? ಸುಳ್ಳೋ? ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಓಲೈಕೆಯ ರಾಜಕಾರಣದಲ್ಲಿ ಅವರ ಪರವಾಗಿ ಬ್ಯಾಟಿಂಗ್ ಮಾಡಿ ಬೇರೊಬ್ಬರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಅದಾದ ಬಳಿಕೆ ಕ್ಷಮೆ ಕೇಳುತ್ತಾರೆ. ಇವೆಲ್ಲ ಸಹಜ ಎನ್ನುವ ನಿಟ್ಟಿನಲ್ಲಿ ನಾಯಕರುಗಳು ಉತ್ತರಿಸುತ್ತಾರೆ. ಅದನ್ನು ಕೇಳಿದ ವಿರೋಧ ಪಕ್ಷದವರು ಇಂಥ ತಪ್ಪನ್ನು ಸಮರ್ಥಿಸಿಕೊಳ್ಳುವುದರೊಂದಿಗೆ ನಾಯಕರುಗಳು ಪ್ರಚೋಧನೆ ನೀಡುತ್ತಾರೆ ಎಂದು ಬಾಯಿ ಬಡಿದುಕೊಳ್ಳುತ್ತಾರೆ. ವಿಚಿತ್ರ ಎಂದರೆ ಯಾರೊಬ್ಬರಿಗೂ ಈ ದೇಶದ ಅಭಿವೃದ್ಧಿಯ ಕುರಿತು ಆಲೋಚನೆಯೇ ಇಲ್ಲ. ಎಲ್ಲರದು ಬರೀ ಸ್ವಾರ್ಥವನ್ನು ಸಾಧಿಸಿಕೊಳ್ಳುವ ಗುರಿ ಅಷ್ಟೆ. ಮತ್ತೆ ಹೇಳುತ್ತಾರೆ ನಮ್ಮದು ಜಾತ್ಯಾತೀತ ರಾಷ್ಟ್ರ, ಭಾವೈಕ್ಯತೆಯ ನಾಡು ಎಂದು. ಆದರೆ ಅಸಲಿಗೆ ಈ ದೇಶದಲ್ಲಿ ಜಾತ್ಯಾತೀತತೆ ಸತ್ತು ಹೋಗಿದೆ ಭಾವೈಕ್ಯತೆ ಮಣ್ಣುಗೂಡಿದೆ. ಅದೂ ಅರ್ಥವಾಗದವರಂತೆ ನಾವುಗಳು ಜಾಣ ಕುರುಡರಾಗಿದ್ದೇವೆ. ಹಾಗೂ ಮುಗ್ದ ಕಿವುಡರಾಗಿದ್ದೇವೆ. ಚುನಾವಣೆಯಲ್ಲಿ ಟಿಕೇಟ್ ನೀಡುವುದಕ್ಕೆ ಧರ್ಮದ ಲೆಕ್ಕಾಚಾರ, ಮತದಾನಕ್ಕಾಗಿ ಜಾತಿಯ ಲೆಕ್ಕಾಚಾರ, ಹೆಜ್ಜೆ ಹೆಜ್ಜೆಗೂ ಧರ್ಮ ಹಾಗೂ ಜಾತಿಯನ್ನೇ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿರುವ ಜನಗಳ ನಡುವೆ ಜಾತ್ಯಾತೀತ ಹಾಗೂ ಭಾವೈಕ್ಯತೆಯನ್ನು ಹುಡುಕುತ್ತ ಹೊರಡುವುದೆಂದರೆ ಹುಟ್ಟು ಕುರುಡರ ಊರಿನಲ್ಲಿ ಕನ್ನಡಕ ಮಾರಿದಂತೆ ಎನಿಸುತ್ತಿದೆ. ನೋವಿನಲ್ಲಿದ್ದವರ ನೋವನ್ನು ಅರ್ಥ ಮಾಡಿಕೊಳ್ಳದೇ ಅವರಿಗೆ ಮತ್ತಷ್ಟು ನೋವು ನೀಡುವ ನಿಟ್ಟಿನಲ್ಲಿ ಹೇಳಿಕೆ ನೀಡುವುದಕ್ಕಿಂತ ನಿಮ್ಮ ಜೊತೆಗೆ ನಾವಿದ್ದೇವೆ. ಏನು ತಪ್ಪಾಗಿದೆಯೋ ಅದಕ್ಕೆ ತಕ್ಕ ಶಿಕ್ಷೆ ನೀಡುತ್ತೇವೆ ಎಂದರೆ ಎಷ್ಟೋ ಸಮಸ್ಯೆಗಳು ಅಲ್ಲಿಯೇ ಅರ್ಧ ಬಗೆಹರಿಯುತ್ತವೆ. ಅದನ್ನು ಬಿಟ್ಟು ಉರಿಯೋ ಗಾಯಕ್ಕೆ ಮುಲಾಮು ಹಚ್ಚುವ ಜಾಗದಲ್ಲಿ ಉಪ್ಪು ಹಾಕುತ್ತ ಹೋದರೆ ಹೇಗೆ ಹೇಳಿ? ಈ ಎಲ್ಲ ಘಟನೆಗಳನ್ನು ಕಂಡ ಮೇಲೆ ಈ ದೇಶದ ಸಂವಿಧಾನ ನೀಡಿದ ಸುಂದರ ಪದಗಳು ಅರ್ಥ ಕಳೆದುಕೊಂಡು ಅಳಿವಿನಂಚಿಗೆ ಸಾಗುತ್ತಿರುವುದಂತೂ ಸತ್ಯ ಎನಿಸುತ್ತಿದೆ. ಓಲೈಕೆಯ ಹೆಸರಲ್ಲಿ ಇನ್ನೂ ಏನೇನು ನಡೆಯುತ್ತದೆಯೋ ಎನ್ನುವುದು ಪ್ರಜ್ಞಾವಂತ ಪ್ರತಿಯೊಬ್ಬ ನಾಗರೀಕನು ಕೇಳುವ ಪ್ರಶ್ನೆಯಾಗಿ ಉಳಿದಿದೆ. ಉತ್ತರ ಯಾವಾಗ ಎನ್ನುವುದೇ ಮತ್ತೊಂದು ಪ್ರಶ್ನೆಯಾಗುತ್ತದೆ.