ದೇಶಭಿಮಾನ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು : ಕುಲಪತಿ ಪ್ರೊ.ಬಿ.ಕೆ ರವಿ
ಕೊಪ್ಪಳ 26: ದೇಶಕ್ಕಾಗಿ ಮತ್ತು ನಾಡಿಗಾಗಿ ಮಡಿದ ವೀರರ ಬಗ್ಗೆ ಗೌರವ ಮತ್ತು ದೇಶಾಭಿಮಾನ ಬೆಳಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಅವರು ಹೇಳಿದರು. ಅವರು ಇಂದು ಕೊಪ್ಪಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಗ ಮಾಡಿದ ಸಂಗೋಳ್ಳಿ ರಾಯಣ್ಣನಂತಹ ದೇಶಭಕ್ತರ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ವೃತ್ತಿ ಗೌರವ ತೋರಬೇಕು.ಯುವಕರು ಇಂದು ದೇಶದ ಅಭಿವೃದ್ಧಿಗಾಗಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ತಾಂತ್ರಿಕ ಕ್ಷೇತ್ರವನ್ನು ಬಲಪಡಿಸುತ್ತಿರುವುದು ಶ್ಲಾಘನೀಯ. ಬಹುತ್ವ ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳವುದರ ಮೂಲಕ ಆರ್ಥಿಕ ಸ್ಥಿರತೆ ಮತ್ತು ಸಮಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಹೊಂದಬೇಕಾಗಿದೆ, ಬಾಬಾ ಸಾಹೇಬ್ ಅಂಬೇಡ್ಕರವರು ನೀಡಿದ ಸಂವಿಧಾನದ ಆಶಯದಂತೆ ಸರ್ವರನ್ನು ಸಮಾನವಾಗಿ ಕಾಣವ ನಿಷ್ಕಲ್ಮಷ ಗುಣ ಬೆಳಸಿಕೊಳ್ಳವುದರ ಮೂಲಕ ಗಣರಾಜ್ಯೋತ್ಸವದ ಘನತೆಯನ್ನು ಹೆಚ್ಚಿಸೋಣ ಎಂದರು.
ರಾಜ್ಯಶಾಸ್ತ್ರದ ಉಪನ್ಯಾಸಕ ಸುಧಾಕರ ಅವರು ನಿರೂಪಣೆ ಮಾಡಿದರು. ಕೊಪ್ಪಳ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಪ್ರಕಾಶ ಯಳವಟ್ಟಿ, ಪ್ರಾಧ್ಯಾಪಕ ಚಾಂದ್ ಬಾಷಾ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರು ಸೇರಿದಂತೆ ಇತರರು ಇದ್ದರು.