ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ ಎಂದಿದ್ದವರೇ ರಾಜೀನಾಮೆ ಕೊಡುವಂತಾಯಿತು: ಡಾ. ಅಶ್ವತ್ಥನಾರಾಯಣ

ಕಾರವಾರ, 10 ಉಪಚುನಾವಣೆ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ  ಎಂದಿದ್ದ ಸಿದ್ದರಾಮಯ್ಯ ಹಾಗೂ ಗೂಂಡೂರಾವ್‌ ಅವರೇ ಫಲಿತಾಂಶ ನೋಡಿ ರಾಜೀನಾಮೆ  ಕೊಡುವಂತಾಯಿತು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.ಖಾಸಗಿ ಕಾರ್ಯಕ್ರಮಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಮಂಗಳವಾರ ಆಗಮಿಸಿದ್ದ ಸಚಿವರು, ಮಾಧ್ಯಮದವರ ಜತೆ  ಮಾತನಾಡಿದರು.

"ಪ್ರತಿಪಕ್ಷದವರಿಗೆ  ವಾಸ್ತವದ ಅರಿವಿರಲಿಲ್ಲ, ಜನಾಭಿಪ್ರಾಯ ಗೊತ್ತಿರಲಿಲ್ಲ ಹಾಗಾಗಿ, ಬಾಯಿಗೆ ಬಂದ ಹೇಳಿಕೆ  ನೀಡುತ್ತಿದ್ದರು. ಚುನಾವಣೆ ನಂತರ ಯಡಿಯೂರಪ್ಪ ರಾಜೀನಾಮೆ‌ ಕೊಡುತ್ತಾರೆ ಅಂದವರಿಗೆ ಸೋಲು  ಸುತ್ತಿಕೊಂಡಿತು. ನೈತಿಕ ಹೊಣೆ ಹೊತ್ತು ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ದಿನೇಶ್  ಗುಂಡೂರಾವ್ ರಾಜೀನಾಮೆ ಕೊಟ್ಟಿರುವುದು ಒಳ್ಳೆಯ ಕ್ರಮ. ಈ ರೀತಿ ರಾಜೀನಾಮೆ‌ ಕೊಡುವುದು  ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಎಂದರು.

"ಉಪ ಚುನಾವಣೆಯಲ್ಲಿ  ಹದಿನೈದಕ್ಕೆ‌ ಹದಿನೈದು ಸ್ಥಾನ ಗೆಲ್ಲುತ್ತೇವೆ ಎನ್ನುವ ನಿರೀಕ್ಷೆ ಇತ್ತು. ಹನ್ನೆರಡು  ಸ್ಥಾನದಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದು ಖಚಿತವಿತ್ತು. ಅದರಂತೆ ಜಯ  ಸಾಧಿಸಿದ್ದೇವೆ. ಉಪ ಚುನಾವಣೆಯಲ್ಲಿ ಪ್ರಬುದ್ಧತೆ ಮೆರೆದ ಜನ, ಸ್ಥಿರ ಹಾಗೂ  ಅಭಿವೃದ್ಧಿ ಪರವಾದ ಸರ್ಕಾರದ ಜತೆ ಇದ್ದಾರೆ. ಯಡಿಯೂರಪ್ಪ ಅವರ ಕೈ ಬಲಪಡಿಸಿದ್ದಾರೆ. ನಿರ್ಣಾಯಕ ಪಾತ್ರವಹಿಸಿರುವ ಈ ಚುನಾವಣೆ, ನಮ್ಮ ಸರ್ಕಾರಕ್ಕೆ ದೊಡ್ಡ ಶಕ್ತಿ  ಕೊಟ್ಟಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಗೆದ್ದವರಿಗೆ ಸರ್ಕಾರದಲ್ಲಿ ಬಹುಮಾನ  ಇದೆ, ಸೋತವರ ವಿಷಯವಾಗಿ ಪಕ್ಷ  ನಿರ್ಧರಿಸಲಿದೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ  ಆಗುವುದು. ಈ ಎಲ್ಲ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಬಿಎಸ್‌.  ಯಡಿಯೂರಪ್ಪ ನಿರ್ಧಾರ ಕೈಗೊಳ್ಳುವರು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.

 ಡಿಕೆ ಶಿವಕುಮಾರ್‌ ಪತ್ರಕ್ಕೆ ಟಾಂಗ್‌

ಎಷ್ಟೋ  ಜಿಲ್ಲಾ ಕೇಂದ್ರಗಳಲ್ಲೇ ಮೆಡಿಕಲ್‌ ಕಾಲೇಜುಗಳಿಲ್ಲ. ಇನ್ನು ತಾಲೂಕು ಮಟ್ಟದಲ್ಲಿ  ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆಂಬ ಬೇಡಿಕೆ ಎಷ್ಟರ ಮಟ್ಟಿಗೆ ಸರಿ ?  ಇದು ಕೆಲವರ  ಪ್ರತಿಷ್ಠೆಯ ಪ್ರತಿಷ್ಠೆ ವಿಚಾರವಾಗಿದೆ. ಹಾಗಾಗಿ ಅದನ್ನು ನಂತರ ನೋಡೋಣ. ಈ ಬಗ್ಗೆ  ಆಸಕ್ತಿ ಇರುವವರು, ಸ್ವತಃ ಮಾಡಬಹುದು. ತೆರಿಗೆದಾರರ ದುಡ್ಡು ಅಮೂಲ್ಯವಾದದು. ಅದನ್ನು  ಸರಿಯಾಗಿ ಬಳಕೆ ಮಾಡಬೇಕು. ಎಲ್ಲೆಲ್ಲಿ ಮೆಡಿಕಲ್‌ ಕಾಲೇಜು ಇದೆಯೋ ಅದನ್ನು ಸರಿಯಾಗಿ  ನಿರ್ವಹಿಸುವುದು ದೊಡ್ಡ ಸವಾಲಾಗಿದೆ.  ಮೊದಲು ಇದನ್ನು ಸರಿಪಡಿಸಬೇಕು. ಮೊದಲ ಹಂತದಲ್ಲಿ  ಎಲ್ಲ ಜಿಲ್ಲೆಗಳಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡುವುದು ನಮ್ಮ ಗುರಿ ಎಂದರು.

 ಕಾರವಾರದಲ್ಲಿ ಉತ್ತಮ ವೈದ್ಯ ವ್ಯವಸ್ಥೆಗೆ ಒತ್ತು

ಗಡಿ  ಭಾಗದಲ್ಲಿ ವೈದ್ಯಕೀಯ ಸೌಲಭ್ಯ ಕೊರತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಕಾರವಾರದಲ್ಲಿ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುತ್ತೇವೆ.   ಚಿಕಿತ್ಸೆಗಾಗಿ ಈ ಜಿಲ್ಲೆಯಿಂದ ಬೇರೆ ಕಡೆಗೆ ಹೋಗುವಂತಾಗಬಾರದು. ದೂರದ ಊರಗಳಿಗೆ ಹೋದಾಗ  ಚಿಕಿತ್ಸೆ ವೆಚ್ಚದ ಜತೆಗೆ ಇತರ ಖರ್ಚು ಹೆಚ್ಚುತ್ತದೆ. ರೋಗಿಗಳ ಕುಟುಂಬಕ್ಕೆ ಆಗುವ  ತೊಂದರೆ ಬಗ್ಗೆ ಅರಿವಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು,"ಎಂದು  ಭರವಸೆ ನೀಡಿದರು.

 ಗಡಿ ತಂಟೆಗೆ ಮಹತ್ವ ಬೇಡ

ಮಹಾರಾಷ್ಟ್ರ ಗಡಿ ತಕರಾರು ವಿಷಯ  ರಾಜಕೀಯ ಪ್ರೇರಿತವಾದುದು. ಇಂಥ ಹೇಳಿಕೆಗೆ ಹೆಚ್ಚು ಮಹತ್ವ ಕೊಡುವುದು ಸರಿಯಲ್ಲ.  ಗಡಿ  ಭಾಗದಲ್ಲಿ ಹೆಚ್ಚು ಸೌಕರ್ಯ  ಕಲ್ಪಿಸಿ, ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತೇವೆ.  ಭಾವನಾತ್ಮಕ ಹೇಳಿಕೆಗೆ ಬೆಲೆ ಕೊಡದಿದ್ದರೆ, ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದರು.