ಜನರೊಂದಿಗೆ ಹೆಚ್ಚು ಸಂವಹನ ಮಾಡಿದಷ್ಟೂ ನಮ್ಮ ಜ್ಞಾನ ವೃದ್ಧಿಯಾಗುತ್ತದೆ
The more we interact with people, the more our knowledge grows
ವಿಯಜಪುರ 06 : ವಿದ್ಯಾರ್ಥಿನಿಯರ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಸಂವಹನ ಕೌಶಲ್ಯ ಅತ್ಯಂತ ಪ್ರಮುಖವಾಗಿದೆ. ಜನರೊಂದಿಗೆ ಹೆಚ್ಚು ಸಂವಹನ ಮಾಡಿದಷ್ಟೂ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದು ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೋಶ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ಸಮಾಜಕಾರ್ಯ, ಹಾಗೂ ಸಮಾಜಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಪ್ರಧಾನಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಭಾರತದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಹಣಕಾಸು ನೆರವಿನೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ “ಸಂವಹನ ಕೌಶಲ್ಯಗಳು” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇಗವಾಗಿ ಬೆಳೆಯುತ್ತಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ವಿದ್ಯಾರ್ಥಿನಿಯರು ಪರಿಣಾಮಕಾರಿ ಸಂವಹನ ತಂತ್ರಗಳು ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ, ಜೀವನದಲ್ಲಿ ಅನೇಕ ಅಡೆತಡೆಗಳು ಮತ್ತು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಹನದ ಪ್ರಾಮುಖ್ಯತೆಯನ್ನು ಅರಿತು, ಅದನ್ನು ಅಭ್ಯಾಸ ಮಾಡುವುದೇ ಅತ್ಯಂತ ಅಗತ್ಯ ಎಂದು ಹೇಳಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇಲಕಲ್ ವಿಜಯಾ ಮಹಾಂತೇಶ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಎಸ್ ಬಿ ಬಿರಾದಾರ ಮಾತನಾಡಿ, ಪರಿಣಾಮಕಾರಿ ಸಂವಹನವು ವಿದ್ಯಾರ್ಥಿನಿಯರ ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಯಶಸ್ಸಿಗೆ ಅತ್ಯಗತ್ಯವಾಗಿದೆ. ಸ್ಪಷ್ಟವಾಗಿ ಸಂವಹನ ನಡೆಸಲು ನಾವು ಕೆಲವು ಸಂವಹನ ಕೌಶಲ್ಯಗಳು ಮತ್ತು ವಿಧಾನಗಳನ್ನು ಕಲಿಯಬೇಕಾಗುತ್ತದೆ. ಸಂವಹನದ ಕೊರತೆಯು ಸಂಬಂಧಗಳ ಮೇಲೂ, ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಉತ್ತಮ ಸಂವಹನವು ಸಮಾಜದಲ್ಲಿ ನಾವು ಹೇಗೆ ವರ್ತಿಸಬೇಕು ಮತ್ತು ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ, ಎಂದು ಹೇಳಿ.
ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯ ಸಂವಹನ ವಿಧಾನಗಳನ್ನು ರೂಢಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಹಲವು ಉದಾಹರಣೆಗಳ ಮೂಲಕ ಚರ್ಚಿಸಿ, ಸಂವಾದ ಮತ್ತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಸಂವಹನ ಕೌಶಲ್ಯಗಳ ವಿವಿಧ ಆಯಾಮಗಳನ್ನು ವಿವರವಾಗಿ ತಿಳಿಸಿದರು.
ಇದೇ ಸಂಧರ್ಭದಲ್ಲಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ವಿವಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕೊಶದ ನಿರ್ದೇಶಕ ಪ್ರೊ. ಮಲ್ಲಿಕಾರ್ಜುನ ಎನ್. ಎಲ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಂವಹನವು ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಬೆಳೆಯುತ್ತಿರುವ ಜನಸಂಖ್ಯೆಯೊಂದಿಗೆ ಸ್ಪರ್ಧೆಯೂ ಸಹ ಸಾಮಾನ್ಯವಾಗಿದೆ. ತಂತ್ರಜ್ಞಾನ ಮತ್ತು ವಿಜ್ಞಾನಗಳ ಯುಗದಲ್ಲಿ ಸಂವಹನವೇ ಮುಖ್ಯವಾದ ಸೇತುವೆಯಾಗಿದೆ. ಸಂವಹನ ನಮ್ಮ ಜೀವನಶೈಲಿಗೆ ಅನಿವಾರ್ಯವಾಗಿದ್ದು, ಉತ್ತಮ ಸಂವಹನ ಕೌಶಲ್ಯವು ಸಮಾಜದಲ್ಲಿ ನಮಗೆ ಒಳ್ಳೆಯ ಮೌಲ್ಯ ಮತ್ತು ಸ್ಥಾನವನ್ನು ತಂದುಕೊಡುತ್ತದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿ ಕ್ಷೇಮಪಾಲನದ ನಿರ್ದೇಶಕಿ ಪ್ರೊ. ಜ್ಯೋತಿ ಎ ಉಪಾಧ್ಯ, ಎಸ್ ಆರ್ ಪಾಟೀಲ, ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕಿ ಇಂದಿರಾಗಾಂಧಿ, ಸಮಾಜಕಾರ್ಯ ವಿಭಾಗದ ಎಲ್ಲಾ ವಿದ್ಯಾರ್ಥಿನಿಯರು, ಸಂಶೋಧನಾರ್ಥಿಗಳು, ಉಪನ್ಯಾಸಕರು, ಭೋದಕ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಗಾರದ ಸಂಯೋಜಕ ಪ್ರೊ. ಜಿ ಬಿ ಸೋನಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಶಿವಲಿಂಗ ಎಸ್ ಮೇತ್ರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 