ಓದುಗರೊಂದಿಗೆ ಲಲಿತ ಪ್ರಬಂಧಕಾರ ತುಂಬ ಆಪ್ತನಾಗಿ ಬಿಡುತ್ತಾನೆ: ಗುಂಡೇನಟ್ಟಿ ಮಧುಕರ
ಬೆಳಗಾವಿ 25: ಲಲಿತ ಪ್ರಬಂಧ ಹಾಸ್ಯ ಸಾಹಿತ್ಯದ ಒಂದು ಪ್ರಕಾರವಾಗಿದೆ. ಪ್ರಬಂಧಕಾರ ಓದುಗರೊಂದಿಗೆ ತನ್ನ ನೋವು ನಲಿವುಗಳನ್ನು ಹಂಚಿಕೊಳ್ಳಬಹುದಾದ ವಿಶಿಷ್ಟ ಪ್ರಕಾರ ಇದಾಗಿದೆ. ಬರವಣಿಗೆಯಿಂದ ತನ್ನನ್ನು ತಾ ಪರಿಚಯಿಸಿಕೊಳ್ಳುವ ಪ್ರಬಂಧಕಾರ ಓದುಗರೊಂದಿಗೆ ತುಂಬ ಆಪ್ತನಾಗಿ ಬಿಡುತ್ತಾನೆ ಎಂದು ಹಾಸ್ಯಕೂಟ ಸಂಚಾಲಕ, ಪತ್ರಕರ್ತ ಗುಂಡೇನಟ್ಟಿ ಮಧುಕರ ಅವರು ಇಂದಿಲ್ಲಿ ಹೇಳಿದರು.
ಕಾವೇರಿ ನಗರ ರಹವಾಸಿ ಸಂಫದವರು ಗಣೇಶ ದೇವಸ್ಥಾನದ 19ನೆ ವಾರ್ಷಿಕೋತ್ಸವದ ನಿಮಿತ್ತ ಕಾವೇರಿ ಕಾಲೋನಿಯ ಗಣೇಶ ದೇವಸ್ಥಾನದ ಹೊರ ವೇದಿಕೆಯಲ್ಲಿ ಹಾಸ್ಯಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಗುಂಡೇನಟ್ಟಿ ಮಧುಕರ ಮೇಲಿನಂತೆ ಅಭಿಪ್ರಾಯ ಪಟ್ಟರು
ಗುಂಡೇನಟ್ಟಿಯವರು ನವಿರಾದ ಹಾಸ್ಯದೊಂದಿಗೆ ಹೇಳುವ ಲಲಿತ ಪ್ರಬಂಧ ಪ್ರಕಾರ ಓದುಗರನ್ನು ಸೆಳೆಯುತ್ತದೆ ಎಂದು ಅವರು ಹೇಳಿದರು. ನಗೆಮಾತುಗಾರ ಎಂ. ಬಿ. ಹೊಸಳ್ಳಿಯವರು ಹಲವಾರು ಹಾಸ್ಯಪ್ರಸಂಗಗಳನ್ನು ಹಂಚಿಕೊಳ್ಳುತ್ತ ಹೆಣ್ಣು ಗಂಡನಿಗಾಗಿ ಏನೆಲ್ಲ ತ್ಯಾಗಗಳನ್ನು ಮಾಡುತ್ತಾಳೆ. ಸಂಸಾರದಲ್ಲಿ ಗಂಡನಿಗಿಂತ ಹೆಂಡತಿ ಪಾತ್ರ ಮಹತ್ತರವಾಗಿದೆ. ಪತಿ ಪತ್ನಿ ನಡುವಿನ ಹೊಂದಾಣಿಕೆಯೇ ಯಶಸ್ವಿ ಜೀವನದ ಗುಟ್ಟು ಎಂದು ಹೇಳಿದರು.
ಸೋಮನಾಥ ಮುಗಳಿ ಇವರಿಂದ ಸಂಗೀತ ಕಾರ್ಯಕ್ರಮವಿತ್ತು. ಅಭಿಷೇಕ, ಗಣಹೋಮ, ಮಂಗಳಾರತಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸೋಮನಾಥ ಮುಗಳಿ, ಗುಂಡೇನಟ್ಟಿ ಮಧುಕರ, ಎಂ ಬಿ ಹೊಸಳ್ಳಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಎಸ್. ಕೆ. ದೇಶಪಾಂಡೆ ನಿರೂಪಿಸಿದರು. ವಲ್ಲಭ ಪಾಟೀಲ, ರಾಮಕೃಷ್ಣನ್, ಎಸ್ ಜಿ. ನ್ಯಾಮಗೌಡರ್, ಗೀರೀಶ ಇನಾಮದಾರ, ಮಹಾಂತೇಶ ಮೋದಗಿ, ವೀಣಾ ಕೊರ್ಲಳ್ಳಿ ಮುಂತಾದವರು ಉಪಸ್ಥಿತರಿದ್ದರು.