ಶರಣರ ವಚನಗಳಲ್ಲಿ ಪ್ರಕೃತಿ-ದೇವರ ಅನುಸಂಧಾನ ಮೇಳೈಸಿದೆ: ಸುನೀತಾ ಸೊಲ್ಲಾಪುರೆ

ಶರಣರ ವಚನಗಳಲ್ಲಿ ಪ್ರಕೃತಿ-ದೇವರ ಅನುಸಂಧಾನ ಮೇಳೈಸಿದೆ: ಸುನೀತಾ ಸೊಲ್ಲಾಪುರೆ The connection between nature and God is found in the verses of Sharan: Sunita Solapure

                     ಬೆಳಗಾವಿ 21: ಹನ್ನೆರಡನೆಯ ಶತಮಾನದ ಶರಣರ ವಚನಗಳು ಮಾನವನ ಬದುಕಿಗೆ ಅದ್ಭುತವಾದ ವ್ಯಾಖ್ಯಾನವನ್ನೇ ನೀಡಿವೆ. ಪ್ರಕೃತಿಯ ಚರಾಚರಗಳನ್ನೇ ಸಂಕೇತವಾಗಿಟ್ಟುಕೊಂಡು ಬದುಕಿಗೆ ಭರವಸೆಯ ಬೆಳಕನ್ನು ನೀಡಿದವರು. ಶರಣರು ಪ್ರಕೃತಿಯಲ್ಲಿಯೇ ದೈವದ ಸಾಕ್ಷಾತ್ಕಾರವನ್ನು ಕಂಡುಕೊಂಡಿದ್ದರು. ಪ್ರಕೃತಿ ಮತ್ತು ದೇವರನ್ನು ಅಭಿನ್ನವಾಗಿ ದರ್ಶಿಸಿದರು ಎಂದು ಸಾಹಿತಿ ಸುನೀತಾ ಸೊಲ್ಲಾಪುರೆ ಹೇಳಿದರು.  

                      ಅವರು ಬೆಳಗಾವಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ನಿಸರ್ಗದ ಪರಿಕಲ್ಪನೆ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು. ಬಸವಣ್ಣನವರು, ಅಕ್ಕಮಹಾದೇವಿ, ಅಲ್ಲಮಪ್ರಭುದೇವ ಅಸಂಖ್ಯ ವಚನಕಾರರ ವಚನಗಳಲ್ಲಿ ನಿಸರ್ಗ ಮೇಳೈಸಿದೆ. ಅಕ್ಕಮಹಾದೇವಿ ನಿಸರ್ಗದ ಪ್ರತಿಯೊಂದು ಚರಾಚರದಲ್ಲಿಯೂ ಪರಮಾತ್ಮನನ್ನು ಕಾಣುವ ಅವಳ ತುಡಿತ ವಚನಗಳಲ್ಲಿ ಮನೋಜ್ಞವಾಗಿ ಮೂಡಿನಿಂತಿದೆ. ಬಸವಣ್ಣನವರ ಜಗದಗಲ ಮುಗಿಲಗಲ.. ವಚನವೋ ಭಗವಂತನ ಅಸ್ತಿತ್ವಕ್ಕೆ ಒಂದು ನಿದರ್ಶನವೆನಿಸಿದೆ. ಇಂಥ ದೇವರನ್ನು ಅಂಗೈಯಲ್ಲಿ ನೀಡಿ ದೇಹವನ್ನು ದೇಗುಲವನ್ನಾಗಿ ಮಾಡಿದವರು ನಮ್ಮ ಶರಣರು. ಅವರು ಹೇಳುವ ದೇವನ ಪರಿಕಲ್ಪನೆ ಅಗಾಧ ಅಗಮ್ಯವಾದುದು. ಇಂದಿನ ಒತ್ತಡದ ಬದುಕಿನಲ್ಲಿ ನಾವು ಏನೆಲ್ಲವನ್ನೂ ಮರೆತಿದ್ದೇವೆ. ಈ ಯಾಂತ್ರಿಕ ಬದುಕಿನಿಂದ ಹೊರಬಂದು ಜೀವನದ ನಿಜ ಆನಂದವನ್ನು ಕಂಡುಕೊಳ್ಳಬೇಕಾಗಿರುವುದು ಇಂದಿನ ಅನಿವಾರ್ಯತೆ ಎಂದು ಹೇಳಿದರು.  

                  ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆಯ ಉಪಾಧ್ಯಕ್ಷೆ ಹಾಗೂ ಖ್ಯಾತ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡುತ್ತ ವಚನಗಳು ಕನ್ನಡದ ಶ್ರೇಷ್ಠ ಕೈದೀವಿಗೆಗಳು. ಬದುಕಿನ ಶ್ರೇಷ್ಠ ದರ್ಶನಶಾಸ್ತೊ ಇರುವುದು ವಚನಗಳಲ್ಲಿ. ಅವುಗಳನ್ನು ತಲಸ್ಪರ್ಶಿಯಾಗಿ ಓದಬೇಕು. ದಾರ್ಶನಿಕರಾಗಿದ್ದ ಶರಣರು ನಿಸರ್ಗದೊಳಗೆ ದೇವರು-ಆಧ್ಯಾತ್ಮವೆನ್ನುವುದು ಮನೆಮಾಡಿದೆ, ಭಗವಂತನು ನಿಸರ್ಗದೊಳಗೆ ನಿತ್ಯನೂತನ, ಚೇತೋಹಾರಿಯಾಗಿದ್ದಾನೆ ಎಂದರು. ಶರಣರು ಇಂಥ ನಿಸರ್ಗದಲ್ಲಿ ಅತ್ಯಂತ ಭಕ್ತಿಯಿಂದ ಅವನನ್ನು ಹುಡುಕಿದರು, ಕಂಡರು, ಆನಂದಪಟ್ಟರು. ಅವರು ರಚಿಸಿದ ವಚನಗಳನ್ನು ನಮ್ಮ ಯುವಜನಾಂಗಕ್ಕೆ ಪರಿಚಯಿಸುವ ಕಾರ್ಯ ಇಂದು ನಡೆಯಬೇಕಾಗಿದೆ ಎಂದು ತಿಳಿಸಿದರು.  

                    ಆಶೀರ್ವಚನ ನೀಡಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು, ಶರಣರ ವಚನಗಳು ನಮ್ಮ ಬದುಕಿನ ಅನುಕರಣೆಯ ಭಾಗಗಳಾಗಬೇಕು. ಇಂದು ಸಮಾಜದಲ್ಲಿ ಅಶಾಂತಿ, ಉದ್ವಿಗ್ನತೆಗಳು ಹೆಚ್ಚಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಧರ್ಮದ ಮಾರ್ಗದಲ್ಲಿ ನಡೆದರೆ ಜೀವನ ಸುಂದರ. ಸತ್ಸಂಗಗಳು ನಮಗೆ ಜೀವನಸಾರವನ್ನು ತಿಳಿಸಿಕೊಡುತ್ತವೆ. ಇವು ನಿತ್ಯ ಜರಗುಬೇಕೆಂದು ಹೇಳಿದರು.  ಮಹಾದೇವಿ ಮುಂಡಗನಾಳ ವಚನ ಪ್ರಾರ್ಥನೆ ಮಾಡಿದರು. ಆರಿ​‍್ಪ.ಪಾಟೀಲ ಸ್ವಾಗತಿಸಿರು. ಶಾಲಿನಿ ಚಿನಿವಾರ ವಚನ ವಿಶ್ಲೇಷಣೆ ಮಾಡಿದರು. ಮಂಗಲಾ ಕಾಕತಿಕರ ಅತಿಥಿಗಳನ್ನು ಪರಿಚಯಿಸಿದರು. ವಿ.ಕೆ.ಪಾಟೀಲ ವಂದಿಸಿದರು. ಸುನೀತಾ ನಂದೆನ್ನವರ ನಿರೂಪಿಸಿದರು. ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ದಾಸೋಹ ಸೇವೆಗೈದರು. ಡಾ.ಎಫ್‌.ವ್ಹಿ.ಮಾನ್ವಿ, ಎಂ.ವಾಯ್‌.ಮೆಣಸಿನಕಾಯಿ, ಪ್ರಸಾದ ಹಿರೇಮಠ, ನ್ಯಾಯವಾದಿ ಆರಿ​‍್ಪ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.