ಕಾರವಾರ 14: ಮಳೆಗಾಲದಲ್ಲಿ ಕಡಲ ಕೊರೆತದಿಂದ ಸಮುದ್ರ ತೀರ ಪ್ರದೇಶದ ರಕ್ಷಣೆಗೆ ಪ್ರಕೃತಿ ದತ್ತವಾಗಿ ತೀರದಗುಂಟ
ಉಸುಕಿನಲ್ಲಿ ಬೆಳೆಯುವ ಬಂಗುಡೆ ಬಳ್ಳಿ ಗಿಡವನ್ನು
ಬೀಚ್ಕ್ಲೀನಿಂಗ್ ನೆಪದಲ್ಲಿ ಕೀಳಲಾಗುತ್ತಿದ್ದು, ತೀರ ರಕ್ಷಕ ಬಂಗುಡೆ ಬಳ್ಳಿ ಗಿಡ ಕಾಪಾಡುವುದರ ಬಗ್ಗೆ
ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರ ಪ್ರಿಯರಿಂದ ಕೇಳಿ ಬರುತ್ತಿದೆ.
ಜಿಲ್ಲೆಯ ಕರಾವಳಿ ತಾಲೂಕುಗಳ ಕಡಲತೀರದ ಮೇಲೆ
ಸಾಮಾನ್ಯವಾಗಿ ಕಂಡು ಬರುವ ಈ ಬಂಗುಡೆ ಬಳ್ಳಿ ಗಿಡವು ತೀರ ರಕ್ಷಣೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ನದಿ ತೀರಗಳಲ್ಲಿ ಕಾಂಡ್ಲಾ ಗಿಡದಂತೆ, ಸಮುದ್ರ ತೀರದ ಭೂ ಕೊರೆತವನ್ನು ಇದು ತಡೆಯುತ್ತದೆ. ಇದು ಸಮುದ್ರ
ತೀರದ ಸನಿಹವೇ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ.
ಮಳೆಗಾಲ ಮುಗಿಯುತ್ತಿದ್ದಂತೆ, ಅಂದವಾದ ಕೆಂಪು ನೇರಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ಎಲೆಯು ಒಂದೆಲಗ
ಬಳ್ಳಿಯ ಎಲೆ ಹೋಲುತ್ತೆ. ಸಮುದ್ರಗುಂಟ ಹರಡಿಕೊಂಡಿರುವ ಬಳ್ಳಿಯ ಹೂವುಗಳಿಂದ ಕಡಲತೀರದ ಸೊಬಗನ್ನು ಹೆಚ್ಚಿಸುತ್ತದೆ.
ಇದಕ್ಕೆ ಕೆಲೆಂಡ್ರೀಯಾ ಎಂಬ ವೈಜ್ಞಾನಿಕ ಹೆಸರು
ಕೂಡ ಇದೆ. ಸೀಲೆಟ್ಟಸ್ ಎಂತಲೂ ಇದನ್ನು ಕರೆಯುತ್ತಾರೆ.
ಪ್ರಕೃತಿ ಸಹಜವಾಗಿ ಬೆಳೆಯುವ ಈ ಗಿಡಗಳನ್ನು ಕಾಪಾಡುವ ಅವಶ್ಯಕತೆ ಇದೆ. ಇದರ ಎಲೆಗಳನ್ನು ಮೊಲಗಳಿಗೆ
ಆಹಾರವಾಗಿ ಬಳಸಲಾಗುತ್ತದೆ. ಅಲ್ಲದೇ ಬಳ್ಳಿಯು ತೀರದಗುಂಟ ಹೆಚ್ಚು ವಿಪುಲವಾಗಿ ಬೆಳೆದಂತೆ ಬಂಗುಡೆ
ಮೀನಿನ ಸಂತತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಮೀನುಗಾರರಲ್ಲಿ ಇದೆ. ಹೀಗಾಗಿ ಹಿಂದೆ ಕಡಲತೀರದ ಮೇಲೆ
ನಡೆಯುತ್ತಿದ್ದ ಸಾಂಪ್ರದಾಯಿಕ ರಂಪಣಿ ಮೀನುಗಾರಿಕೆ ಸಂದರ್ಭದಲ್ಲಿ ಈ ಬಳ್ಳಿಯನ್ನು ಮೀನುಗಾರರು ಜತನದಿಂದ
ಕಾಪಾಡುತ್ತಿದ್ದರು ಎಂದು ಇಲ್ಲಿನ ಹಿರಿಯ ಮೀನುಗಾರರು ನೆನಪಿಸಿಕೊಳ್ಳುತ್ತಾರೆ.
ಮೀನುಗಾರರು ಒಂದು ಕಾರಣಕ್ಕಾಗಿ ಬಂಗುಡೆಬಳ್ಳಿಯ
ರಕ್ಷಣೆಗೆ ಮುಂದಾಗುತ್ತಿದ್ದರೂ, ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಕಾರಣಕ್ಕಾಗಿ,
ಕಡಲತೀರದ ಸ್ವಚ್ಚತೆ ನೆಪದಲ್ಲಿ ಈ ಬಂಗುಡೆ ಬಳ್ಳಿ ಗಿಡವನ್ನು ಕೀಳಲಾಗುತ್ತಿದೆ. ಬೀಚ್ ಅಭಿವೃದ್ಧಿ
ಸಮಿತಿಯು ರವೀಂದ್ರನಾಥ್ ಕಡಲತೀರದ ಸೌಂದರ್ಯ ಹೆಚ್ಚಿಸಲು ಸ್ವಚ್ಚತಾ ಕಾರ್ಯ ಕೈಗೊಂಡಿದೆ. ಸಮಿತಿವತಿಯಿಂದ
ಪ್ರತಿನಿತ್ಯ ಕಡಲತೀರದ ಸ್ವಚ್ಚತೆಯಲ್ಲಿ ನಿರತರಾಗುವ ಗುತ್ತಿಗೆ ಕಾಮರ್ಿಕರು ಒಂದೆರಡು ದಿನಗಳ ಹಿಂದೆ ಮಕ್ಕಳ ಆಟಿಕೆ ಉದ್ಯಾನದ ಕೆಳಗಡೆ ಹೆಚ್ಚಾಗಿ ಬೆಳೆದಿರುವ
ಈ ಗಿಡಗಳನ್ನು ಕಿತ್ತು ಒಂದೆಡೆ ರಾಶಿ ಹಾಕುವ ದೃಶ್ಯ ಕಂಡು ಬಂತು. ಮುಂಜಾನೆ ವಾಯುವಿಹಾರಕ್ಕೆ ಬರುವ
ಸಾರ್ವಜನಿಕರಿಗೆ ಈ ಗಿಡದ ರಕ್ಷಣೆಯ ಮಹತ್ವದ ಬಗ್ಗೆ ಹಿರಿಯ ಮೀನುಗಾರನೊಬ್ಬ ವಿಸ್ತೃತವಾದ ಮಾಹಿತಿ ನೀಡಿದರು.
ಬಳಿಕ ಸಂಬಂಧಪಟ್ಟವರು ಈ ಬಗ್ಗೆ ಜನಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇತ್ತ ಜಿಲ್ಲಾಡಳಿತ ಗಮನ ಹರಿಸಬೇಕು
ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.
ದಂಡೆ ಕಾಪಾಡುವ ಬಳ್ಳಿ :
ಕಾರವಾರದ ರವೀಂದ್ರನಾಥ್ ಕಡಲತೀರದಲ್ಲಿ ಉಂಟಾಗುವ
ಭಾರಿ ಕಡಲಕೊರೆತದ ಸಂದರ್ಭದಲ್ಲಿ ದಂಡೆಯ ಮರಳನ್ನು
ಇದು ಗಟ್ಟಿಯಾಗಿ ಹಿಡಿದು ಕೊಂಡಿರುತ್ತದೆ.ಹೀಗಾಗಿ ಇದನ್ನು ಕಡಲತೀರ ರಕ್ಷಕ ಎಂದು ಬಲ್ಲವರು
ಕರೆಯುತ್ತಾರೆ. ರಾಕ್ಗಾಡರ್್ನ್ನಿಂದ ದಿವೇಕರ ಕಾಲೇಜು,ಮೆರೀನ್ ಬಯೋಲಾಜಿ ತನಕ ಸಮುದ್ರ ಕೊರೆತ ಹೆಚ್ಚಾಗದಂತೆ
ಆ ಭಾಗವನ್ನು ಈ ಬಳ್ಳಿ ಕಾಪಾಡಿದೆ. ಹವಾಮಾನ ವೈಪರೀತ್ಯದಿಂದ ಆಗಾಗ ಉಂಟಾಗುವ ಕಡಲ ಕೊರೆತ ತಡೆಯಲು,
ಬಂಗುಡೆ ಬಳ್ಳಿಯ ರಕ್ಷಣೆ ಇಂದು ಅನಿವಾರ್ಯವಾಗಿದೆ.
ಈ ದಿಸೆಯಲ್ಲಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತರಾಗಬೇಕು ಎಂಬುದು ಪರಿಸರ ಪ್ರಿಯರ ಮಾತು.