ಹೆಣ್ಣುಮಕ್ಕಳ ಮೇಲಿನ ದಾಳಿ ದೇಶದ ಆತ್ಮಶಕ್ತಿಯನ್ನೇ ಬೆಚ್ಚಿಬೀಳಿಸಿದೆ: ರಾಷ್ಡ್ರಪತಿ

ಸಿರೋಹಿ (ರಾಜಸ್ಥಾನ), ಡಿ ೦೬- ಮಹಿಳೆಯರ ಸುರಕ್ಷತೆ ಅತ್ಯಂತ ಗಂಭೀರ ವಿಷಯವಾಗಿದೆ ಮತ್ತು ಬಾಲಕಿಯರ ಮೇಲೆ ನಡೆದಿರುವ ರಕ್ಕಸೀ ಕೃತ್ಯಗಳು ದೇಶದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ

ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ಬ್ರಹ್ಮ ಕುಮಾರೀಸ್ ಪ್ರಧಾನ ಕಚೇರಿಯಲ್ಲಿ ‘ಸಾಮಾಜಿಕ ಪರಿವರ್ತನೆಗಾಗಿ ಮಹಿಳೆಯರ ಸಬಲೀಕರಣ’ ಕುರಿತ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಮಹಿಳೆಯರ ಮೇಲಿನ ದಾಳಿ ತಡೆಗಟ್ಟುವ ಬಗ್ಗೆ ಸಾಕಷ್ಟು ಕೆಲಸಗಳು ನಡೆದಿವೆ, ಆದರೆ ಇನ್ನೂ ಹೆಚ್ಚಿನದನ್ನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು. 

ಬಾಲಕಿಯರ ಮೇಲಿನ ಭೀಕರ ದಾಳಿಯನ್ನು ಉಲ್ಲೇಖಿಸಿದ ಅವರು, ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಬಗ್ಗೆ ಗೌರವವನ್ನು ಮೂಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಈ ರಾಷ್ಟ್ರೀಯ ಸಮ್ಮೇಳನದ ವಿಷಯವು ಬಹಳ ಪ್ರಸ್ತುತವಾಗಿದೆ ಎಂದ ರಾಷ್ಟ್ರಪತಿ, ಬ್ರಹ್ಮ ಕುಮಾರಿಯರು ನಿಜವಾದ ಅರ್ಥದಲ್ಲಿ ಸಾಮಾಜಿಕ ಬದಲಾವಣೆಗಾಗಿ ಮಹಿಳೆಯರ ಸಬಲೀಕರಣವನ್ನು ನಡೆಸುತ್ತಿದ್ದಾರೆ. ಸಮಾನತೆ ಮತ್ತು ಸಾಮರಸ್ಯವನ್ನು ಆಧರಿಸಿದ ಸಮಾಜವು ಮಹಿಳೆಯರನ್ನು ಸಬಲೀಕರಣಗೊಳಿಸುವುದರಿಂದ ಮಾತ್ರ ಸಾಧ್ಯ ಎಂದು ಒತ್ತಿ ಹೇಳಿದರು.