ನವದೆಹಲಿ, ಏ 24 ಸಚಿನ್ ತೆಂಡೂಲ್ಕರ್ ಅವರು 46ನೇ ವಸಂತಕ್ಕೆ ಇಂದು ಪದಾರ್ಪಣೆ ಮಾಡಿದರು. ಅವರ ಜನುಮ ದಿನಕ್ಕೆ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಭಾರತ ತಂಡದ ಮಾಜಿ ಸಹ ಆಟಗಾರರರಾದ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರಭಜನ್ ಸಿಂಗ್, ಮೊಹಮ್ಮದ್ ಕೈಫ್ ಸೇರಿದಂತೆ ಇನ್ನಿತರರು ಟ್ವಿಟರ್ನಲ್ಲಿ ಶುಭ ಕೋರಿದ್ದಾರೆ.
ಭಾರತ ತಂಡದ ಅಜಿಂಕ್ಯಾ ರಹಾನೆ ಕೂಡ ಟ್ವಿಟರ್ನಲ್ಲಿ ದಂತಕತೆಗೆ ಶುಭಾಶಯ ಕೋರಿದ್ದಾರೆ. " ನೀವು ನನ್ನೊಂದಿಗೆ ಹಂಚಿಕೊಂಡಿರುವ ಅಮೂಲ್ಯ ಸಲಹೆಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಹುಟ್ಟುಹಬ್ಬ ನಿಮಗೆ ಸಂತೋಷ ತರಲಿ ಸಚಿನ್ ಸಾರ್" ಎಂದು ಬಲಗೈ ಬ್ಯಾಟ್ಸ್ಮನ್ ಟ್ವಿಟ್ ಮಾಡಿದ್ದಾರೆ.
ತಮ್ಮ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ ಹಲವು ವಿಶಿಷ್ಠ ದಾಖಲೆಗಳನ್ನು ಮಾಡಿದ್ದಾರೆ. ಟೆಸ್ಟ್ನಲ್ಲಿ 15, 921 ರನ್, 463 ಏಕದಿನ ಪಂದ್ಯಗಳಲ್ಲಿ 18, 426 ರನ್ ಸಿಡಿಸಿದ್ದಾರೆ.
ಟೆಸ್ಟ್ನಲ್ಲಿ 51 ಹಾಗೂ ಏಕದಿನ ಮಾದರಿಯಲ್ಲಿ 49 ಶತಕ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಭಾರತ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರ ಹೆಗಲ ಮೇಲಿದೆ.
2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ತೆಂಡೂಲ್ಕರ್ ಇದ್ದರು. 2003ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ ಸಚಿನ್, 673 ರನ್ ಗಳಿಸಿ ಭಾರತ ಫೈನಲ್ ತಲುಪುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಆದರೆ, ಫೈನಲ್ನಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.
ಕ್ರಿಕೆಟ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಅರ್ಜುನ್ ಪ್ರಶಸ್ತಿ (1994), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (1997), ಪದ್ಮಶ್ರೀ (1999) ಮತ್ತು ಪದ್ಮ ವಿಭೂಷಣ ಪ್ರಶಸ್ತಿ (2008), ಭಾರತ ರತ್ನ ಪ್ರಶಸ್ತಿ(2014) ಗೌರವವನ್ನು ಕ್ರಿಕೆಟ್ ದೇವರು ಸ್ವೀಕರಿಸಿದ್ದಾರೆ.