ಗುಲಾಮಗಿರಿಯನ್ನು ವಿರೋಧಿಸಿದ್ದರು ಸ್ವಾಮಿ ವಿವೇಕಾನಂದರು: ಗಿರಿಜೇಶಾನಂದಶ್ರೀ
ಜಮಖಂಡಿ 16: ಗುಲಾಮಗಿರಿಯನ್ನು ವಿರೋಧಿಸಿದ್ದ ಸ್ವಾಮಿ ವಿವೇಕಾನಂದರು ಸಿಂಹದಂತೆ ಬಾಳಲು ಕರೆ ನೀಡಿದ್ದರು. ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ಬಲಿಷ್ಠ ಭಾರತ ನಿರ್ಮಾಣದ ಕನಸು ಕಂಡಿದ್ದರು ಎಂದು ಸ್ವಾಮಿ ವಿವೇಕಾನಂದ ಆಶ್ರಮದ ಗಿರಿಜೇಶಾನಂದ ಸ್ವಾಮಿಗಳು ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸಭಾಭವನದಲ್ಲಿ ರೋಟರಿ ಸಂಸ್ಥೆ ರಾಮತೀರ್ಥ, ಸ್ವಾಮಿ ವಿವೇಕಾನಂದ ಆಶ್ರಮದ ಸಂಯುಕ್ತಾಶ್ರಯದಲ್ಲಿ ಏರಿ್ಡಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ವಿವೇಕಾನಂದರು ಅತಿ ಚಿಕ್ಕ ವಯಸ್ಸಿನಲ್ಲಿ ಸಮಾಜವನ್ನು ಸುಧಾರಿಸಲು ಹೊರಟಿದ್ದ ವೀರ ಸನ್ಯಾಸಿಗಳು ಅವರ ಚಿಕಾಗೋದ ಭಾಷಣ ವಿಶ್ವಕ್ಕೆ ಭಾರತವನ್ನು ಪರಿಚಯಿಸಿತು. ಅವರು ಯುವಕರಲ್ಲಿ ಜಾಗೃತಿಯನ್ನು ಮೂಡಿಸಲು ಮೂಢನಂಬಿಕೆ, ಗುಲಾಮಗಿರಿಯ ಮನೋಭಾವದ ವಿರುದ್ಧ ಹೋರಾಟ ನಡೆಸಿದರು. ಅವರನ್ನು ತಿಳಿಯಲು ಕನಿಷ್ಠ 10 ವರ್ಷಗಳ ಕಾಲ ಅಧ್ಯಯನ ಬೇಕು, ಶ್ರೇಷ್ಠಗುರು, ಉತ್ತಮ ದಾರಿಯಿಂದ ಒಳ್ಳೆಯ ಸಾಧನೆ ಮಾಡಬಹುದು ಎಂದರು.
ಪಿಯು ಕಾಲೇಜಿನ ಉಪಪ್ರಾಚಾರ್ಯ ಮಾಂತೇಶ ನರಸಗೌಡ ಮಾತನಾಡಿ, ವಿವೇಕಾನಂದರು ದೇಶದ ಯುವ ಜನತೆಗೆ ಮಾರ್ಗದರ್ಶಕರು, ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದು ಪ್ರತಿಪಾದಿಸಿದ ಅವರು, ಏಳಿ ಎದ್ದೇಳಿ ದೇಶದ ಒಳಿತಿಗೆ ಹೋರಾಡಿ ಎಂದು ಕರೆ ನೀಡಿದ್ದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ದೇಶದ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ್ದಾರೆ ಎಂದರು.
ಸವಿತಾ ಗುರವ, ವಿದ್ಯಾರ್ಥಿಗಳಾದ ಸನಾ ಮುಲ್ಲಾ, ವಿಜಯಲಕ್ಷ್ಮೀ ಪೂಜಾರಿ, ಕೀರ್ತಿ ಉಪ್ಪಾರ, ವೃಂದಾ ಒಳಕೋಟಿ ಮಾತನಾಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಕಿರಣ ಜಾಲಿಹಾಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಜಿರಲಿ ವಂದಿಸಿದರು. ಚಿದಾನಂದ ಸಿದ್ದಾಪೂರಮಠ, ಅಜೀತ ತಿಕೋಟೆಕರ, ವಿಶ್ವನಾಥ ಸಾವಳಗಿ ರೋಟರಿ ಸಂಸ್ಥೆ ರಾಮತೀರ್ಥದ ಪದಾಧಿಕಾರಿಗಳು, ವಿವೇಕಾನಂದ ಆಶ್ರಮದ ಸದಸ್ಯರು ಹಾಗೂ ಭಕ್ತರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.