ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕ: ಮನ್ನಿಕೇರಿ
ಮೂಡಲಗಿ 11: ಶರಣರ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದು ಬಿಇಓ ಅಜೀತ್ ಮನ್ನಿಕೇರಿ ಹೇಳಿದರು.
ಪಟ್ಟಣದ ಬಿಇಓ ಕಚೇರಿಯ ಹಿಂಭಾಗದಲ್ಲಿ ನಿಸರ್ಗ ಫೌಂಡೇಶನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಯುವ ಜೀವನ ಸೇವಾ ಸಂಸ್ಥೆ ಇವುಗಳ ಆಶ್ರಯದಲ್ಲಿ ಜರುಗಿದ, ಶರಣರ ಜಯಂತಿ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದ ಅವರು, 12ನೇ ಶತಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿ ಉಂಟುಮಾಡಿದೆ. ಇವತ್ತಿನ ನಮ್ಮ ಸಂವಿಧಾನದ ಪಾರ್ಲಿಮೆಂಟ್ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಸಿದ್ದಿಸೋಗು ಕಲಾವಿದ ಚುಟುಕುಸಾಬ ಜಾತಗಾರ ಅವರು ಸಿದ್ದಿಸೋಗು ಕಲೆಯಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ತಮಿಳುನಾಡಿನ ಏಷಿಯಿನ್ ಇಂಟರ್ ನ್ಯಾಶನಲ್ ಕಲ್ಟರ್ ಅಕಾಡೆಮಿ ಅವರು ಕೊಡಮಾಡುವ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆ ಹಾಗೂ ಸುಭಾಷ ಗೋಡ್ಯಾಗೋಳ ಅವರಿಗೆ ಯುವ ಸಂಘಗಳ ಒಕ್ಕೂಟ ಕೊಡಮಾಡುವ ಸ್ವಾಮಿ ವಿವೇಕಾನಂದ ಪ್ರಶಸ್ತಿಗೆ ಭಾಜನರಾಗಿದ್ದರು ಅವರನ್ನು ಇದೇ ವೇಳೆ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಶಿವಾನಂದ ಬಬಲಿ, ಸಿಡಿಪಿಓ ಯಲ್ಲಪ್ಪ ಗದಾಡಿ, ತಾಲೂಕಾ ಪಶು ಆಸ್ಪತ್ರೆಯ ಸಹ ನಿರ್ದೇಶಕ ಡಾ. ಮೋಹನ ಕಮತ್, ಹೆಸ್ಕಾಂ ಅಧಿಕಾರಿ ಎಮ್ ಎಸ್ ನಾಗನ್ನವರ, ಪುರಸಭೆ ಮುಖ್ಯಧಿಕಾರಿ ತುಕ್ಕಾರಾಮ ಮಾದರ, ಸಮಾಜ ಕಲ್ಯಾಣ ಇಲಾಖೆಯ ಎಮ್ ಎಸ್ ಪಾಟೀಲ, ಕಾ.ನಿ.ಪ ಸಂಘದ ಅಧ್ಯಕ್ಷ ಕೃಷ್ಣ ಗಿರೇನ್ನವರ, ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರ್ಪ ಢವಳೇಶ್ವರ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಹಣಮಂತ ಗುಡ್ಲಮನಿ, ಮುಖಂಡರಾದ ಸತ್ಯಪ್ಪ ಕರವಾಡಿ, ರಮೇಶ ಮಾದರ, ಯೇಭಿನೇಜರ್ ಕರಬನ್ನವರ, ಪ್ರಭಾಕರ ಮಂಟೂರ್, ಅನ್ವರ್ ನದಾಫ್, ಮಾರುತಿ ಹಡಪದ, ಸಂಜು ಕಮತೆ, ಶಿವಾನಂದ ಮಡಿವಾಳ, ಗುರುನಾಥ ಗಂಗಣ್ಣವರ ಹಾಗೂ ಅನೇಕರು ಇದ್ದರು.