ಕೃಷ್ಣೆಯ ಸಂತ್ರಸ್ತರ ಹೋರಾಟಕ್ಕೆ ವಿಜಯಪುರ ಜಿಲ್ಲಾ ಸಂಪಾದಕರ ಸಂಘದ ಬೆಂಬಲ
ವಿಜಯಪುರ 09: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕು ಯುಕೆಪಿ 3ನೇ ಹಂತ ಯಥಾವಿದಿಯಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿ ರೈತರ ಹೋರಾಟಕ್ಕೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವಿಜಯಪುರ ಜಿಲ್ಲಾ ಘಟಕವು ಬೆಂಬಲ ನೀಡಿ ಯೋಜನೆ ಸಂಪೂರ್ಣಗೊಳಿಸುವಂತೆ ಒತ್ತಾಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘವು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಏಷ್ಯಾಖಂಡದಲ್ಲಿಯೇ ಬೃಹತ್ ನೀರಾವರಿ ಯೋಜನೆ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಗೊಂಡು ಧೀರ್ಘಕಾಲವಾದರೂ ಇದುವರೆಗೂ ಪೂರ್ಣಗೊಳ್ಳದಿರುವುದು ದುರಂತವೇ ಸರಿ. ಪಕ್ಷಾತೀತ, ಜ್ಯಾತ್ಯಾತೀತವಾಗಿ ಜಿಲ್ಲೆಯ ಯಾವುದೇ ಸಮಸ್ಯೆ ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಜಿಲ್ಲಾ ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘವು ಬೆಂಬಲಿಸುತ್ತದೆ. ನ್ಯಾಯಯುತವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಹೋರಾಟಕ್ಕೆ ಸ್ಪಂದಿಸಿ ಸರಕಾರವು ಎಚ್ಚೆತ್ತುಕೊಂಡು ಅಗತ್ಯ ಅನುದಾನ ನೀಡಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ನೆರೆಯ ಆಂದ್ರ್ರದೇಶ ಸರಕಾರವು ಆಣೆಕಟ್ಟುಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ನ್ಯಾಯಬದ್ದವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಆಗುತ್ತಿಲ್ಲ. ಸುಪ್ರೀಂ ಕೋರ್ಟ ಮತ್ತು ಕೃಷ್ಣಾ ನ್ಯಾಯಾಧೀಕರಣ ತೀರ್ು ನಮ್ಮ ಪರವಾಗಿದ್ದರೂ ಕೂಡಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಇಚ್ಚಾಶಕ್ತಿ ಕೊರತೆಯೋ ಅಥವಾ ನಮ್ಮನ್ನಾಳುವ ಸರಕಾರದ ನಿರ್ಲಕ್ಷತನವೋ ಎಂಬುದು ಕಾಣುತ್ತಿಲ್ಲ.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ 13 ಜಿಲ್ಲೆಗಳ ರೈತರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿದೆ, ಯುಕೆಪಿ 3ನೇ ಹಂತ ಯಥಾವಿಧಿಯಾಗಿ ಜಾರಿಯಾಗಲು ಮತ್ತೊಮ್ಮೆ ಪಕ್ಷಾತೀತ ಹಾಗೂ ಜ್ಯಾತ್ಯಾತೀತವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಹೋರಾಟ ಆರಂಭಗೊಂಡಿದೆ. ಈ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದ್ದು, ಈ ಹೋರಾಟಕ್ಕೆ ಜಿಲ್ಲಾ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘವು ಸಂಪೂರ್ಣ ಬೆಂಬಲ ಘೋಷಿಸುತ್ತದೆ ಎಂದು ಮನವಿ ಸಲ್ಲಿಸಿತು.
ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಇರ್ಫಾನ್ ಶೇಖ್, ಪ್ರಧಾನಕಾರ್ಯದರ್ಶಿ ಅವಿನಾಶ ಬಿದರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಕೆ. ಕುಲಕರ್ಣಿ, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ರಶ್ಮಿ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಸೀತಾರಾಮ ಕುಲಕರ್ಣಿ, ಸಂಘದ ಸದಸ್ಯರಾದ ಶ್ರೀಮತಿ ಕೌಶಲ್ಯ ಪನಾಳಕರ, ಚಿದಂಬರ ಕುಲಕರ್ಣಿ, ಶರದ್‌ಕುಮಾರ ಅರ್ಜುಣಗಿ ಹಾಗೂ ವಿನೋದ ಸಾರವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.