ಕಂಪ್ಲಿಯಲ್ಲಿ ಗೌರಿ ಹಬ್ಬಕ್ಕೆ ಸಕ್ಕರೆ ಗೊಂಬೆಗಳ ಭರದ ಸಿದ್ದತೆ : ಮಾರಾಟ ಬಲು ಜೋರು

ಕಂಪ್ಲಿಯಲ್ಲಿ ಗೌರಿ ಹಬ್ಬಕ್ಕೆ ಸಕ್ಕರೆ ಗೊಂಬೆಗಳ ಭರದ ಸಿದ್ದತೆ : ಮಾರಾಟ ಬಲು ಜೋರು  Sugar dolls in abundance ready for Gauri festival in Kampli: Sales are booming


ಕಂಪ್ಲಿ 03:  ಕಾರ್ತಿಕ ಮಾಸದಲ್ಲಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ, ಹೆಣ್ಣು ಮಕ್ಕಳಿಗೆ ಸಂಭ್ರಮವನ್ನು ತರುವ ಗೌರಿ ಹುಣ್ಣಿಮೆ ಆಚರಣೆಗೆ ಲಕ್ಷಗಣನೆ ಆರಂಭವಾಗಿದ್ದು, ಗೌರಿಯನ್ನು ಪಾರ್ವತಿಯ ಪ್ರತಿರೂಪವಾಗಿ ಪೂಜಿಸಲಾಗುತ್ತಿದ್ದು, ಇದಕ್ಕಾಗಿ ಪಟ್ಟಣದ ಚಿತ್ರಗಾರ ಕುಟುಂಬದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಗೌರಿ ಗೊಂಬೆಗಳು ತಯಾರಾಗುತ್ತಿದ್ದರೆ ಇನ್ನೊಂದೆಡೆ ಸಕ್ಕರೆ ಗೊಂಬೆಗಳ ತಯಾರಿ ಹಾಗೂ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಹಬ್ಬದ ಅಂಗವಾಗಿ ಸ್ಥಳೀಯ ಕಲಾವಿದರ ಕೈಚಳಕದಲ್ಲಿ ತಯಾರಾದ ವಿವಿದ ಅಳತೆಯ ಗೌರಿದೇವಿ ಮೂರ್ತಿಗಳ ಮಾರಾಟ ಈಗಾಗಲೇ ಅರಂಭವಾಗಿದೆ. ಇನ್ನೊಂದು ಕಡೆ ಕಟ್ಟಿಗೆ ಅಚ್ಚುಗಳನ್ನು ಬಳಸಿ ಸಕ್ಕರೆ ಪಾನಕದಿಂದ ತಯಾರಿಸಿದ ಗೌರಿದೇವಿ ಮೂರ್ತಿ, ಗಣೇಶ, ಗೋಪುರ, ಕಳಸ, ಆರತಿ ಅಚ್ಚು, ಕುದುರೆ, ಒಂಟೆ, ಆನೆ ಅಂಬಾರಿ, ತೇರು ಸೇರಿದಂತೆ ವಿವಿಧ ಆಕರ್ಷಕ ವೈವಿದ್ಯಮಯ ಗೊಂಬೆಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದಾರೆ. 

  ನ.6ರ ರಾತ್ರಿ ಗೌರಿ ಕುರಿತ ಜನಪದ ಹಾಡುಗಳನ್ನು ಹಾಡಲಾಗುತ್ತದೆ. ಗೌರಿದೇವಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ನದಿ, ಬಾವಿಗಳಲ್ಲಿ ವಿಸರ್ಜಿಸಲಗುತ್ತದೆ. ನ.7 ರಂದು ಸಂಜೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವಿಶೇಷವಾಗಿ ರಾಮಸಾಗರದಲ್ಲಿ ಸಂಜೆ ಮನೆಯವರೆಲ್ಲರೂ ಮನೆಗಳ ಮಾಳಿಗೆ ಮೇಲೆ ಕೊಂತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಕೊಂತಿ (ಕೊಂತೆಮ್ಮ) ರೊಟ್ಟಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆ ರೊಟ್ಟಿ, ಬದನೆ ಮತ್ತು ಹೀರೇಕಾಯಿಯಿಂದ ಸಿದ್ಧವಾದ ವಿಶೇಷ ಎಣ್ಣೆಗಾಯಿ ಪಲ್ಲೆ, ಪುಂಡೆಪಲ್ಲೆ, ಹೆಸರು, ಮಡಕೆಕಾಳು ಪಲ್ಯೆ, ಸನ್ನ, ಚಿತ್ರಾನ್ನ, ಸಾಂಬಾರು, ತೊಗರಿಬೇಳೆ ಗಟ್ಟಿ ಪಪ್ಪು, ಗುರೆಳ್ಳು ಪುಡಿ, ಶೇಂಗಾಚಟ್ಟಿ, ಮಿರ್ಚಿ, ಬಜ್ಜಿ, ಖರ್ಜಿಕಾಯಿ ಸೇರಿದಂತೆ ವಿವಿಧ ರುಚಿಕರವಾದ ವಿಶೇಷ ಖಾದ್ಯಗಳನ್ನು ಮನೆಯವರೆಲ್ಲರೂ ಬೆಳದಿಂಗಳಲ್ಲಿ ಸವಿಯುತ್ತಾರೆ. ಇದಕ್ಕೆ ಮತ್ತೊಂದು ಹೆಸರೇ ಬೆಳದಿಂಗಳೂಟವೆಂದು ಕರೆಯುತ್ತಾರೆ. ನಂತರ ಹಿರಿಯರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.