ವಚನಗಳ ಅನುಸರಣೆಯಿಂದ ಬದುಕಿನ ಯಶಸ್ಸು ಸಾಧ್ಯ: ಸಾಹಿತಿ ಪತ್ತಾರ

ವಚನಗಳ ಅನುಸರಣೆಯಿಂದ ಬದುಕಿನ ಯಶಸ್ಸು ಸಾಧ್ಯ: ಸಾಹಿತಿ ಪತ್ತಾರ  Success in life is possible by following the vows: Sahitya Pattara

ವಚನಗಳ ಅನುಸರಣೆಯಿಂದ ಬದುಕಿನ ಯಶಸ್ಸು ಸಾಧ್ಯ: ಸಾಹಿತಿ ಪತ್ತಾರ  

ತಾಳಿಕೋಟೆ 07: 12ನೆಯ ಶತಮಾನದ ಶರಣರು ಕೊಟ್ಟಿದ್ದು ಕಾಯಕ, ದಾಸೋಹ ಹಾಗೂ ಸಾಮರಸ್ಯ ಎಂಬ ತತ್ವಗಳನ್ನು. ಮನಶ್ಶುದ್ಧಿಯಿಂದ ಕಾಯಕ ಮಾಡಿ ಬಂದ ಧನದಲ್ಲಿ ಹಸಿದವನಿಗೆ ಅನ್ನನಿಕ್ಕುವುದು, ಎಲ್ಲ ವರ್ಗದ ಜನರನ್ನು ಒಂದೆಡೆ ಕೂಡಿಸಿ ಸಾಮಾಜಿಕ ಸಾಮರಸ್ಯವನ್ನುಂಟು ಮಾಡಿದರು. ಆದರೆ ಇಂದು ಸತ್ಯಶುದ್ಧ ಮನಸ್ಸಿನವರ ಕೊರತೆಯಾಗಿದೆ. ವಚನಗಳ ಅಧ್ಯಯನದಿಂದ ಬದುಕಿನ ಎಲ್ಲ ಸಮಸ್ಯೆಗಳಿಗೆ ಉತ್ತರ ದೊರೆಯುತ್ತದೆ ಎಂದು ಜೆ.ಎಸ್‌.ಜಿ. ಪಿಯು ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಹೇಳಿದರು.  

ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಸ್ಥಳೀಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆಯ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಆಯೋಜಿಸಲಾಗಿದ್ದ ವಚನ ಶ್ರಾವಣ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.  

ಎಸ್‌.ಕೆ.ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಶೇಷಾಚಲ ಹವಾಲ್ದಾರ ಮಾತನಾಡಿ, ನಡೆ ನುಡಿ ಒಂದಾದ ಶರಣರ ಬದುಕು ನಮ್ಮದಾದರೆ ಅದೇ ಬದುಕಿನ ಸಾರ್ಥಕತೆಯಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದು 12ನೆಯ ಶತಮಾನದ ಬಸವಾದಿ ಪ್ರಮಥರು, ತಮ್ಮ ಜೀವನಾನುಭವಗಳನ್ನೇ ನುಡಿ ವಚನಗೊಳಿಸಿದರು. ವಚನಗಳನ್ನು ಮೊದಲು ಓದಲಾಗುತ್ತಿತ್ತು ಅದು ಮೊದಲು ಹಾಡಿದ್ದು ಸಂಗೀತ ವಿದೂಷಿ ಪಂಡಿತ ಮಲ್ಲಿಕಾರ್ಜುನ ಮನ್ಸೂರ ಅವರು ವಚನಗಾಯನಕ್ಕೆ ಮೊದಲಿಟ್ಟರು ಎಂದು ತಿಳಿಸಿ ತಾವೂ ಸಹ ಸುಶ್ರಾವ್ಯವಾಗಿ ವಚನಗಾಯನ ಮಾಡಿದರು.  

ಅಧ್ಯಕ್ಷತೆ ವಹಿಸಿದ್ದ ಶರಣಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಅಶೋಕ ಹಂಚಲಿ ಮಾತನಾಡಿದರು. ವೇದಿಕೆಯಲ್ಲಿ ಓಷಧ ವ್ಯಾಪಾರಿ ಸುಭಾಶ್ಚಂದ್ರ ಸಾಲಂಕಿ, ಗಣ್ಯ ವರ್ತಕರಾಧ ಖಾಜಾಹುಸೇನ ಮುಲ್ಲಾ, ಮಹಾದೇವಪ್ಪ ಕುಂಬಾರ, ಪ್ರೊ.ಚಂದ್ರಗೌಡ ಕುಲಕರ್ಣಿ ಇದ್ದರು. ಜಯಶ್ರೀ ಸಜ್ಜನ ಪ್ರಾರ್ಥಿಸಿದರು. ಗುಂಡುರಾವ್ ಧನಪಾಲ ಸ್ವಾಗತಿಸಿದರು. ಸಿದ್ದು ಕರಡಿ ನಿರ್ವಹಿಸಿದರು. ಕಾಶಿನಾಥ ಸಜ್ಜನ ವಂದಿಸಿದರು.