ಧಾರವಾಡ 10: ಅಪಾರ ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಹಾಗೂ ಮನೆ ಹಾನಿ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಹಾನಿ ಕುರಿತು ಸಮಗ್ರ ವರದಿ ಮತ್ತು ಬಿಡುಗಡೆ ಮಾಡಿರುವ ಪರಿಹಾರ ಮೊತ್ತದ ಕುರಿತು ಮಾಹಿತಿಯನ್ನು ಶೀಘ್ರದಲ್ಲಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕೆಂದು ಜಿಲ್ಲಾ ಪ0ಚಾಯತ್ ಅಧ್ಯಕ್ಷರಾದ ವಿಜಯಲಕ್ಷ್ಮೀ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳೆ ಹಾಗೂ ಮನೆ ಹಾನಿಯಾಗಿರುವ ಬಗ್ಗೆ ಅನೇಕ ರೈತರು, ಗ್ರಾಮಸ್ಥರು ಪರಿಹಾರ ವಿತರಣೆ ಸರಿಯಾಗಿ ಆಗುತ್ತಿಲ್ಲ, ಆದ್ದರಿಂದ ಮರು ಸಮೀಕ್ಷೆ ಮಾಡಬೇಕೆಂದು ಮನವಿ ಸಲ್ಲಿಸುತ್ತಿದ್ದಾರೆ.
ಈ ಕುರಿತು ಅಧಿಕಾರಿಗಳಿಗೂ ಮಾಹಿತಿ ನೀಡಿದರೂ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ತಕ್ಷಣ ಎಲ್ಲ ಇಲಾಖೆಯ ಅಧಿಕಾರಿಗಳು ತಮಗೆ ಸಂಬಂಧಿಸಿದ ವಿವರವಾದ ವರದಿಯನ್ನು ಸಲ್ಲಿಸಬೇಕೆಂದು ಹೇಳಿದರು.
ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ನೆರೆ ಹಾವಳಿಯಿಂದಾಗಿ ಬೆಳೆ ಮತ್ತು ಮನೆಗಳು ಹಾನಿಗೊಳಗಾಗಿದ್ದು, ಫಲಾನುಭವಿಗಳಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಇದುವರೆಗೂ ಪರಿಹಾರ ನೀಡಿದ ಮಾಹಿತಿಯನ್ನು ಜಿಲ್ಲಾ ಪಂಚಾಯತಿಗೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ ಸತೀಶ ಮಾತನಾಡಿ,ನೆರೆ ಹಾವಳಿಯಿಂದ ಹಾನಿಗಳಗಾದ ಮನೆಗಳನ್ನು ಎ,ಬಿ ಮತ್ತು ಸಿ ಕ್ಯಾಟಗರಿಗಳನ್ನಾಗಿ ವಿಂಗಡಿಸಿ, ಎ ಮತ್ತು ಬಿ ಕ್ಯಾಟಗರಿ ಮನೆಗಳಿಗೆ 1 ಲಕ್ಷ ರೂ. ಹಣವನ್ನು ಹಾನಿಗೊಳಗಾದ ಮನೆಗಳ ಮಾಲೀಕರ ಖಾತೆಗೆ ಜಮಾ ಮಾಡಲಾಗಿದೆ. ರೈತರ ಖಾತೆಗೆ ವಿಮಾ ಹಣ ಜಮಾ ಮಾಡುವಾಗ ಸಂಗ್ರಹಿಸುವ ದಾಖಲೆಗಳಲ್ಲಿ ಅವರು ನೀಡಿದ ಮಾಹಿತಿಯಲ್ಲಿ ತಪ್ಪುಗಳಿದ್ದರೆ ವಿಮಾಹಣ ಬರುವುದು ವಿಳಂಬವಾಗುತ್ತಿದೆ. ಕ್ರೀಡಾಂಗಣಕ್ಕೆ ಸಂಬಂಧಿಸಿದಂತೆ 43 ಲಕ್ಷ ರೂ.ಗಳು ಬಾಕಿ ಇದ್ದು, ಆ ಹಣವನ್ನು ಗ್ರಾಮೀಣ ಪ್ರದೇಶಗಳಿಲ್ಲಿ ಕ್ರೀಡಾಂಗಣ ನಿರ್ಮಾ ಣ ಮಾಡುವುದಕ್ಕಾಗಿ ಉಪಯೋಗಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಕಂದಾಯ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾವಾರು ಪ್ರಗತಿಯನ್ನು ಸಭೆಗೆ ಸಲ್ಲಿಸಿದರು.
ಉಪಕಾರ್ಯದರ್ಶಿ ಎಸ್.ಜಿ. ಕೋರವರ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಅಧ್ಯಕ್ಷರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.