ವಿದ್ಯಾರ್ಥಿಗಳು ಬೆಳಗಾವಿಯ ಸುವರ್ಣ ಸೌಧಕ್ಕೆ ಭೇಟಿ ನೀಡಿ, ವಿಧಾನ ಮಂಡಲದ ಅಧಿವೇಶನದ ಕಾರ್ಯಕಲಾಪಗಳ ವೀಕ್ಷಣೆ
ಹಾವೇರಿ:ಜಿಲ್ಲೆಯ ಹಾನಗಲ್ ತಾಲೂಕಿನ ಮಲ್ಲಿಗಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಯ ಸುವರ್ಣ ಸೌಧಕ್ಕೆ ಭೇಟಿ ನೀಡಿ, ವಿಧಾನ ಮಂಡಲದ ಅಧಿವೇಶನದ ಕಾರ್ಯಕಲಾಪಗಳನ್ನು ವೀಕ್ಷಿಸಿದರು.
ಇದಕ್ಕೂ ಮೊದಲು ಸುವರ್ಣ ಸೌಧದ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ಸೌಧದ ಮೆಟ್ಟಿಲುಗಳ ಮೇಲೆ ನಿಂತು ಶಾಸಕ ಶ್ರೀನಿವಾಸ ಮಾನೆ ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡು ಅಗತ್ಯ ಮಾಹಿತಿ ಕೇಳಿ ತಿಳಿದರು.
ಈ ಸಂದರ್ಭದಲ್ಲಿ ಶಾಸಕ ಮಾನೆ ಮಾತನಾಡಿ ವಿಧಾನ ಮಂಡಲದ ಕಾರ್ಯಕಲಾಪಗಳನ್ನು ವೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ಹೊಸ ಅನುಭವ ಪಡೆದಿದ್ದಾರೆ. ಆಡಳಿತ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ವಿಶೇಷ ಆಸಕ್ತಿ ಮೂಡಿಸಿಕೊಳ್ಳಬೇಕಿದೆ. ಉತ್ತಮವಾಗಿ ಅಧ್ಯಯನ ಕೈಗೊಂಡು ಆಡಳಿತದಲ್ಲಿ ಪ್ರಮುಖ ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕಿದೆ.ಇನ್ನೂ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಮೈಗೂಡಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅವಕಾಶಗಳಿವೆ. ನಮ್ಮ ದೇಶದ ಪ್ರಜಾಪ್ರಭುತ್ವ ನಮಗೆ ಎಲ್ಲ ರೀತಿಯ ಹಕ್ಕುಗಳನ್ನು ಕೊಟ್ಟಿದೆ.ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕಿದೆ.ಬರೀ ಹಕ್ಕು ಚಲಾಯಿಸಲು ಉತ್ಸಾಹ ತೋರದೇ ಅದರ ಜೊತೆಗೆ ಕರ್ತವ್ಯಗಳನ್ನೂ ನಿಭಾಯಿಸಬೇಕಿದೆ ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಯಮುನಾ ಕೋಣೇಸರ,ಅಸ್ಮತ್ ಬಿ.ಡಾ.ಸಣ್ಣಪ್ಪ ಲಮಾಣಿ,ಫಜಲ್ ಅಹ್ಮದ್ ಖತೀಬ,ನಂದಿತಾ ಟಿ.ಎಚ್.ರವಿ ಚಿತ್ತಾಪುರ ಸೇರಿದಂತೆ ಇನ್ನೂ ಹಲವರು ಇದ್ದರು.